“ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿ”: ಕೇರಳದ ಯುವಕನ ಹೊಸ ಪ್ರಯೋಗ

Prasthutha|

ತಿರುವನಂತಪುರಂ: ಬಹುತೇಕ ಜನರು ಅವರವರ ಜಾತಿ, ಧರ್ಮಗಳಲ್ಲೇ ಮದುವೆಯಾಗುವುದು ಸಾಮಾನ್ಯ ಸಂಗತಿ. ಅದಕ್ಕಾಗಿ ಅವರ ಜಾತಿಯ ಹೆಸರಿನಲ್ಲಿರುವ ಮ್ಯಾಟ್ರಿಮೋನಿಗಳಲ್ಲೇ ವಧು ಅಥವಾ ವರನನ್ನು ಹುಡುಕುತ್ತಾರೆ. ಆದರೆ ಕೇರಳದಲ್ಲೊಬ್ಬರು ಇದಕ್ಕಿಂತ ಭಿನ್ನವಾಗಿ “ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿ” ಎಂಬ ವಧು-ವರರ ಆಯ್ಕೆಯ ಫೇಸ್ ಬುಕ್ ವೇದಿಕೆಯನ್ನು ಸ್ಥಾಪಿಸಿ ಗಮನ ಸೆಳೆದಿದ್ದಾರೆ.

- Advertisement -

ಇದನ್ನು ಆರಂಭಿಸಿದವರ ಹೆಸರು ಕೂಡ ವಿಶಿಷ್ಟವಾಗಿದೆ. ಮನು ಮನುಷ್ಯಜಾತಿ ಎಂಬ ಯುವಕ ಈ ಉಪಕ್ರಮ ಆರಂಭಿಸಿದ್ದಾರೆ. ಅವರು ಮೂಲತಃ ಶಿಕ್ಷಕರಾಗಿದ್ದಾರೆ. ಮ್ಯಾಟ್ರಿಮೋನಿ ಆರಂಭಿಸಿ 8 ತಿಂಗಳು ಕಳೆದಿದ್ದು, ಸುಮಾರು 50,000 ಫಾಲೋವರ್ ಗಳಿದ್ದಾರೆ.

ಸಾಂಪ್ರದಾಯಿಕ ವ್ಯವಸ್ಥೆಯಿಂದ ಹೊರಬರಲು ಮತ್ತು ಸಾಮಾಜಿಕ ರೂಢಿಗಳನ್ನು ಮೀರಿ ಬದುಕಲು ಪ್ರಯತ್ನಿಸುವ ನನ್ನಂತೆ ಅನೇಕ ಜನರಿದ್ದಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಈ ವೇದಿಕೆ ಆರಂಭಿಸಿದೆ. ಜನರು ನನಗೆ ಪ್ರೊಫೈಲ್ ಕಳುಹಿಸಲು ಪ್ರಾರಂಭಿಸಿದಾಗ, ನಾನು ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿಯನ್ನು ಪ್ರಾರಂಭಿಸಿದೆ ಎಂದು ಮನು ವಿವರಿಸುತ್ತಾರೆ.

- Advertisement -

ಜಾತ್ಯತೀತ ವ್ಯಕ್ತಿತ್ವದ ಅಭಿನ್ ಜಿ. ಅಶೋಕ್ ಈ ಬಗ್ಗೆ ವಿವರ ನೀಡಿ, ಜನರು ಧಾರ್ಮಿಕ ಸಂಕೋಲೆಯಿಂದ ಹೊರಬರುವ ಸಮಯ ಆಗಮಿಸಿದೆ. ಮದುವೆಗಳ ಸುತ್ತ ದೊಡ್ಡ ಸಾಮಾಜಿಕ ಒತ್ತಡವಿದೆ. ಹೀಗಾಗಿ ಅನೇಕ ದಂಪತಿಗಳು ಬಲವಂತವಾಗಿ ಬೇರೆಯಾಗುತ್ತಾರೆ. ನಾನು ಸಮಾನ ಮನಸ್ಕ ಸಂಗಾತಿಯನ್ನು ಹುಡುಕುತ್ತಿದ್ದೇನೆ. ನನ್ನ ಹೆತ್ತವರು ತುಂಬಾ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

ಪುಟದಲ್ಲಿ ತಮ್ಮ ಪ್ರೊಫೈಲ್‌ಗಳನ್ನು ಪೋಸ್ಟ್ ಮಾಡುವ ಮಹಿಳೆಯರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಮನು ಹೇಳಿದರು.  

Join Whatsapp