ಬಳ್ಳಾರಿ : ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿರುವ ಘಟನೆ ಬಳ್ಳಾರಿಯ ಅಂಕನಾಲ್ ಗ್ರಾಮದಲ್ಲಿ ನಡೆದಿದೆ.
ಅಂಕನಾಲ್ ಗ್ರಾಮದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.ಈ ಕಲುಷಿತ ನೀರು ಎಲ್ಲಿ ಸೇರ್ಪಡೆಯಾಗುತ್ತಿದೆ ಎಂದು ಪತ್ತೆ ಹಚ್ಚಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಅವರು, ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರಿಗೆ ಈಗ ಸಂಸ್ಕರಿತ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇನ್ನು ಕೆಲವು ದಿನಗಳವರೆಗೆ ಅದನ್ನು ಮುಂದುವರಿಸಲಾಗುವುದು. ಕುದಿಸಿ ಆರಿಸಿದ ನೀರನ್ನು ಮಾತ್ರ ಸೇವಿಸುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ 20 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ವೈದ್ಯರ ತಂಡ ಹಗಲು ರಾತ್ರಿ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗಳೊಂದಿಗೆ ಮೂರು ಆಂಬ್ಯುಲೆನ್ಸ್ ಗಳನ್ನು ಮೀಸಲಿಡಲಾಗಿದೆ. ಸುಮಾರು 20 ಮಂದಿ ಈಗ ಗುಣಮುಖರಾಗಿದ್ದು, ಉಳಿದವರನ್ನು ಮನೆಗೆ ಕಳುಹಿಸಲಾಗಿದೆ. ಗ್ರಾಮದಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಕಳೆದ ಹದಿನೈದು ದಿನಗಳಲ್ಲಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಎರಡನೇ ಪ್ರಕರಣವಾಗಿದ್ದು, ಹತ್ತು ದಿನಗಳ ಹಿಂದೆ ಗೋಣಲ್ ತಾಲೂಕಿನಲ್ಲಿ ಬಾಲಕಿಯೊಬ್ಬಳು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.