ಕಡಬ: ಕಾಡಾನೆ ಹಿಡಿದು ತೆರಳುತ್ತಿದ್ದ ಅರಣ್ಯಾಧಿಕಾರಿಗಳು, ಪೊಲೀಸರ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರು!

Prasthutha|

►ನರಹಂತಕ ಕಾಡಾನೆಯನ್ನು ಸೆರೆಹಿಡಿದ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ

- Advertisement -

ಪುತ್ತೂರು: ನರಹಂತಕ ಕಾಡಾನೆಯನ್ನು ಬಹು ಸಾಹಸದಿಂದ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಕಾಡಾನೆ ಇತ್ತೀಚೆಗೆ ಇಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು.

- Advertisement -

ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52) ಮೃತಪಟ್ಟಿದ್ದರು.

ನರಹಂತಕ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಾಗಿ ಮೈಸೂರು ದುಬಾರೆಯಿಂದ 5 ಆನೆಗಳನ್ನು ತಂದು. ಫೆ.21ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಫೆ.23ರಂದು (ಗುರುವಾರ) ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿತ್ತು.

ಹೀಗೆ ಆನೆಯನ್ನು ಹಿಡಿದು ತೆರಳುತ್ತಿದ್ದಾಗ “ನಮ್ಮ ಗ್ರಾಮದ ಕಾಡಿನ ಭಾಗದಲ್ಲಿ ಒಂದಲ್ಲ, ಇಂಥ ಹಲವು ಆನೆಗಳಿವೆ. ಅವೆಲ್ಲವನ್ನೂ ಸೆರೆ ಹಿಡಿಯಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

“ಕಾರ್ಯಾಚರಣೆ ನಿಲ್ಲಿಸಿಲ್ಲ, ನಾಳೆ ಬರುತ್ತೇವೆ” ಎಂದು ಹೇಳಿದರೂ ಕೇಳದೇ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ಬೀಝಾ ಗಾಡಿಗಳು ಜಖಂಗೊಂಡಿವೆ. ಡಿವೈಎಸ್ಪಿ ಅವರ ವಾಹನ ಸೇರಿ ಅರಣ್ಯ ಇಲಾಖೆಗೆ ಸೇರಿದ ವಾಹನಗಳ ಗಾಜು ಪುಡಿ ಪುಡಿಯಾಗಿವೆ.



Join Whatsapp