ಟೊಕಿಯೊ: ಎರಡು ಬಾರಿಯ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾ ತನ್ನ 29ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
2019ರಲ್ಲಿ 11 ಪ್ರಶಸ್ತಿಗಳನ್ನು ಜಯಿಸಿ ಮಿಂಚಿದ್ದ ಜಪಾನ್‌ನ ಸ್ಟಾರ್ ಆಟಗಾರ ಕೆಂಟೊ ಮೊಮೊಟಾ ಕಾರು ಅಪಘಾತದ ಬಳಿಕ ಕಣ್ಣಿನ ಸಮಸ್ಯೆಗೆ ಒಳಗಾಗಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಮೊಮೊಟಾ ಚೀನಾದಲ್ಲಿ ನಡೆದ ಥಾಮಸ್ ಕಪ್‌ನಲ್ಲಿ ಕೊನೆಯ ಬಾರಿ ಜಪಾನ್ ತಂಡವನ್ನು ಪ್ರತಿನಿಧಿಸಿದ್ದರು.
ತನ್ನ ವೃತ್ತಿಜೀವನದಲ್ಲಿ ಅಮೋಘ ಪ್ರದರ್ಶನ ನೀಡಿದ ಮೊಮೊಟಾ, 2019ರಲ್ಲಿ ಪ್ರಾಬಲ್ಯ ಮೆರೆದಿದ್ದರು. 73 ಪಂದ್ಯಗಳಲ್ಲಿ ಕೇವಲ ಆರು ಪಂದ್ಯಗಳಲ್ಲಿ ಸೋತಿದ್ದರು. ಕಾರು ಅಪಘಾತ, ಆ ನಂತರದ ಗಾಯದ ಸಮಸ್ಯೆಗಳು, ರ್ಯಾಂಕಿಂಗ್‌ನಲ್ಲಿ ಕುಸಿತವು ಮೊಮೊಟಾ ಸಣ್ಣ ವಯಸ್ಸಿನಲ್ಲಿಯೇ ನಿವೃತ್ತಿ ಪ್ರಕಟಿಸಲು ಕಾರಣವಾಗಿದೆ.
ಮೊಮೊಟಾ ಜೂಜಿನ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ 2016ರ ರಿಯೋ ಒಲಿಂಪಿಕ್ಸ್‌ನಿಂದ ನಿಷೇಧವನ್ನೂ ಎದುರಿಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಕೊರಿಯಾ ಮಾಸ್ಟರ್ಸ್‌ನಲ್ಲಿ ಚಾಂಪಿಯನ್ ಆಗಿ ಎರಡು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದ್ದರು. ಈ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಮೊಮೊಟಾ ಉತ್ಸುಕರಾಗಿದ್ದರು. ಆದರೆ, ಜಪಾನ್ ರಾಷ್ಟ್ರೀಯ ತಂಡಕ್ಕೆ ಅರ್ಹತೆ ಪಡೆದಿರಲಿಲ್ಲ.