ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯಿಂದ ಪಠ್ಯ ಪುಸ್ತಕದ ವಿಷಯ ಪರಿಷ್ಕರಣೆ ಕಾರ್ಯವನ್ನು ನಡೆಸಲಾಗಿದ್ದು, ತರುವಾಯ ಸೂಚಿಸಲಾದ ಬದಲಾವಣೆಗಳು ಸೈದ್ಧಾಂತಿಕ ವಿಚಾರಗಳನ್ನು ಹೇರುವಂತೆ ತೋರುತ್ತವೆ. ಕೋಮು ವಿಭಜನೆಯನ್ನು ಸೃಷ್ಟಿಸುತ್ತವೆ. ಸಮಾಜದ ಬಹುಸಂಸ್ಕೃತಿಯ ಮತ್ತು ಬಹುತ್ವದ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ. ಈ ಪ್ರಕ್ರಿಯೆಯ ಕುರಿತಾಗಿ ಆರಂಭದಿಂದಲೇ ಹಲವು ಪ್ರಶ್ನೆಗಳನ್ನು ಎತ್ತಲಾಗಿತ್ತು ಮತ್ತು ಕಳವಳವನ್ನು ವ್ಯಕ್ತಪಡಿಸಲಾಗಿತ್ತು. ಯಾವುದೇ ಶೈಕ್ಷಣಿಕ ಹಿನ್ನೆಲೆಯನ್ನು ಅಥವಾ ಪರಿಷ್ಕರಣೆಯ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಪರಿಣತಿ ಹೊಂದಿರದ ಹಾಗೂ ಸಾಂವಿಧಾನಿಕ ಮೌಲ್ಯಗಳು ಮತ್ತು NCF ನ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಲಾಗದ ವ್ಯಕ್ತಿಯನ್ನು ಪಠ್ಯ ಪುಸ್ತಕಗಳ ಪರಿಷ್ಕರಣಾ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಿರುವುದು ದುರಂತ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (SIO), ಕರ್ನಾಟಕ ಅಭಿಪ್ರಾಯಪಟ್ಟಿದೆ.
ರೋಹಿತ್ ಚಕ್ರತೀರ್ಥ ಅವರನ್ನು ಯಾವ ಆಧಾರದ ಮೇಲೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಪಠ್ಯ ಪುಸ್ತಕಗಳು ಯಾವತ್ತೂ ರಾಜಕೀಯ ಅಧಿಕಾರದಿಂದ ಸ್ವತಂತ್ರವಾಗಿರಬೇಕು, ಸರ್ಕಾರ ಮತ್ತು ರಾಜಕೀಯ ನಾಯಕತ್ವದಲ್ಲಿ ಬದಲಾವಣೆಯಾದಾಗ ಪಠ್ಯ ಪುಸ್ತಕಗಳ ವಿಷಯದ ಮೇಲೆ ಆಯಾ ಪಕ್ಷದ ಅಭಿಪ್ರಾಯ ಮತ್ತು ದೃಷ್ಟಿಕೋನಗಳನ್ನು ಪ್ರತಿಬಿಂಬಿಸಲು ಮತ್ತು ಅವರನ್ನು ತೃಪ್ತಿಪಡಿಸಲು ಪಠ್ಯ ಪುಸ್ತಕಗಳ ವಿಷಯದಲ್ಲಿ ಮಾಡುವ ಬದಲಾವಣೆಯೂ ಯಾವುದೇ ಕಾರಣಕ್ಕೂ ಸಮರ್ಥನಿಯವಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂದಿನ ಪಠ್ಯ ಪುಸ್ತಕಗಳು ಪರಿಷ್ಕರಣೆಯಾದ 5 ವರ್ಷದೊಳಗೆ ದಿಢೀರನೆ ಹೊಸದಾಗಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ನಡೆಸಲು ಈ ಹಿಂದಿನ ಪರಿಷ್ಕರಣೆಯಲ್ಲಿ ಆದ ಯಾವ ದೋಷದ ಕಾರಣದಿಂದಾಗಿ ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಎಸ್ಐಓ ಕರ್ನಾಟಕ ಆಗ್ರಹಿಸಿದೆ.
6ನೇ ತರಗತಿಯಿಂದ 10ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳ 83 ಶೀರ್ಷಿಕೆಗಳು ಅಥವಾ ಪಾಠಗಳನ್ನು ಮತ್ತು 1 ರಿಂದ 10 ತರಗತಿವರೆಗಿನ ಕನ್ನಡ ಭಾಷಾ ಪಠ್ಯವನ್ನು ಪರಿಷ್ಕರಿಸಲಾಗಿದ್ದು ಮತ್ತು ಅದನ್ನು ಅನುಮೋದಿಸಲಾಗಿದೆ. ಹತ್ತನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿನ ಆರು ಅಧ್ಯಾಯಗಳನ್ನು ಪ್ರಸ್ತುತ ಸಮಿತಿಯ ಮೇಲ್ವಿಚಾರಣೆಯಲ್ಲಿ ತೆಗೆದುಹಾಕಲಾಗಿದೆ ಮತ್ತು ಎಂಟು ಹೊಸ ಅಧ್ಯಾಯಗಳನ್ನು ಸೇರಿಸಲಾಗಿದೆ. ಈ ಅಲ್ಪಾವಧಿಯಲ್ಲಿ ಒಂದೇ ಪಠ್ಯಪುಸ್ತಕದಲ್ಲಿ ಅಂತಹ ಪ್ರಮುಖ ಬದಲಾವಣೆಗಳಿಗೆ ಏನು ಪ್ರಮುಖ ಕಾರಣ ಎಂಬುದು ತಿಳಿದಿಲ್ಲ ಎಂದು ಎಸ್ ಐಒ ಹೇಳಿದೆ.
ಪಠ್ಯ ಪುಸ್ತಕದ ವಿಷಯವನ್ನು ಪರಿಷ್ಕರಿಸುವ ಮತ್ತು ಬದಲಾವಣೆಗಳನ್ನು ಸೂಚಿಸುವ ಪರಿಷ್ಕರಣಾ ಸಮಿತಿಯಲ್ಲಿ ಸಾಮಾಜದ ವಿವಿಧ ವರ್ಗಗಳ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಕಡೆಗಣಿಸಲಾಗಿದೆ. ಈ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಮಾಡಲಾಗುತ್ತಿರುವ ವಿಷಯ ಬದಲಾವಣೆಗಳಲ್ಲಿ ಸೂಚಿಸಿದ ಲೇಖಕರು ಒಂದೇ ವರ್ಗಕ್ಕೆ ಸೇರಿದವರಾಗಿದ್ದು ಈ ಇಡೀ ಪ್ರಕ್ರಿಯೆಯಲ್ಲಿ ಎಲ್ಲವೂ ಸಂಪೂರ್ಣ ಸೈದ್ಧಾಂತಿಕ ಪಕ್ಷಪಾತ ಮತ್ತು ಹೊರಗಿಡುವಿಕೆಯನ್ನು ಸೂಚಿಸುತ್ತದೆ.
ಪೆರಿಯಾರ್, ನಾರಾಯಣ ಗುರು ಮತ್ತು ಭಗತ್ ಸಿಂಗ್, ಟಿಪ್ಪು ಸುಲ್ತಾನ್ ಹಾಗೂ ವಿವೇಕಾನಂದರಿಗೆ ಸಂಬಂಧಿಸಿದ ಆಯ್ದ ಪಾಠಗಳನ್ನು ಕೈಬಿಟ್ಟಿರುವುದು ಈ ಸಮಿತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಇದು ಕೋಮು ವಿಭಜನೆಯ ಸಿದ್ಧಾಂತವನ್ನು ಸೃಷ್ಟಿಸಲು ಬದ್ಧವಾಗಿದೆ ಮತ್ತು ಯುವ ಹಾಗೂ ಎಳೆಯರ ಮನಸ್ಸುಗಳ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಅದು ತಿಳಿಸಿದೆ.
ಸಮಿತಿಯು ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಜಾತ್ಯಾತೀತತೆ, ವೈಜ್ಞಾನಿಕ ಮನೋಭಾವದ ಚಿಂತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಪಠ್ಯ ಪುಸ್ತಕಗಳಲ್ಲಿನ ಯಾವುದೇ ಬದಲಾವಣೆಗಳು NCF(ಎನ್.ಸಿ.ಎಫ್) ಗೆ ಅನುಗುಣವಾಗಿರಬೇಕು.
ಯಾವುದೇ ಸೈದ್ಧಾಂತಿಕ ಮತ್ತು ಮತೀಯ ಪಕ್ಷಪಾತಗಳನ್ನು ಹೇರಲು ಪಠ್ಯ ಪುಸ್ತಕಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಕೈಗೊಳ್ಳಬಾರದು. ಪಠ್ಯಪುಸ್ತಕಗಳು ನಮ್ಮ ಸಮಾಜದ ಬಹುತ್ವತೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು. ಪ್ರಸ್ತುತ ಆಡಳಿತ ವರ್ಗವು ಜ್ಞಾನದ ಮೂಲಗಳನ್ನು ವ್ಯಾಖ್ಯಾನಿಸಲು ಮತ್ತು ನಿರ್ಬಂಧಿಸಲು ಪ್ರಯತ್ನಿಸುತ್ತಿದೆ. ಮತ್ತು ನಂತರದ ಸರ್ಕಾರದ ಸಮರ್ಥನೆಗಳು ಹಾಗೂ ತಾರ್ಕಿಕತೆಯು ಯುವ ಮನಸ್ಸುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಕಾಳಜಿಯನ್ನು ಹೆಚ್ಚಿಸುತ್ತದೆ. ಸಮಿತಿಯು ಸೂಚಿಸಿದ ಬದಲಾವಣೆಗಳನ್ನು ತಕ್ಷಣವೇ ತಡೆಹಿಡಿಯಬೇಕು ಹಾಗೂ ಶಿಕ್ಷಣ ತಜ್ಞರು ಮತ್ತು ಮಧ್ಯಸ್ಥಗಾರರ ಸಲಹೆಗಳನ್ನು ಪರಿಗಣಿಸಬೇಕೆಂದು ಎಸ್ಐಓ ಕರ್ನಾಟಕವು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (SIO), ಕರ್ನಾಟಕ ಹೇಳಿಕೆಯಲ್ಲಿ ತಿಳಿಸಿದೆ.
ಪಠ್ಯಪುಸ್ತಕಗಳು ಸಂವಿಧಾನದ ಆಶಯಗಳನ್ನು ಪ್ರತಿಬಿಂಬಿಸಬೇಕೇ ಹೊರತು ಸೈದ್ಧಾಂತಿಕ ವಿಚಾರಗಳನ್ನಲ್ಲ: ಎಸ್ ಐಓ
Prasthutha|