ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಮಾನ ಮನಸ್ಕರಿಂದ ಆಕ್ಷೇಪ

Prasthutha|

ಮಂಗಳೂರು: ಸುಗ್ರೀವಾಜ್ಞೆ ಮೂಲಕ ಕರ್ನಾಟಕ ಸರಕಾರವು ಜಾರಿಗೆ ತಂದಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ -2021 ಇದು ಲೋಪ ದೋಷಗಳಿಂದ ಕೂಡಿದೆ ಎಂದು ಮಾಜಿ ಶಾಸಕ ಜೆ. ಆರ್. ಲೋಬೋ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ. ಬಿ. ಸದಾಶಿವ, ಸಿಪಿಎಂನ ಸುನಿಲ್ ಕುಮಾರ್ ಬಜಾಲ್ ಮೊದಲಾದ ಸಮಾನ ಮನಸ್ಕರು ಒತ್ತಾಯಿಸಿದ್ದಾರೆ.
ಶಾಸಕ ಜೆ. ಆರ್. ಲೋಬೋ ಮಾತನಾಡಿ, ಎಲ್ಲ ಧರ್ಮಗಳವರು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು ಅಲ್ಲಿ ಯಾವುದೇ ಜಾತಿ ಧರ್ಮ ನೋಡದೆ ಸೇವೆ ನೀಡುತ್ತವೆ. ಆದರೆ ಮೇಲಿನ ಕಾಯ್ದೆಯಡಿ ಯಾರಾದರೂ ದ್ವೇಷದಿಂದ ದೂರು ನೀಡಿದಲ್ಲಿ ಆತನಿಗೆ ಜಾಮೀನಿಗೆ ಅವಕಾಶ ಇಲ್ಲ ಎನ್ನುವುದು ನಾಗರಿಕ ಸಮಾಜ ಒಪ್ಪುವ ಕಾಯ್ದೆಯಲ್ಲ. ಸೇವೆಯನ್ನು ಮತಾಂತರ ಪ್ರೇರೇಪಣೆ ಎಂದು ದೂರಲು ಅವಕಾಶ ಇರುವುದರಿಂದ ಇದು ಸಾಮಾಜಿಕ ಕುತಂತ್ರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಈ ಕಾಯ್ದೆಯನ್ನು ಮೇಲ್ಮನೆಯಲ್ಲೂ ಮಂಡಿಸದೆ ರಾಜ್ಯಪಾಲರ ಮೂಲಕ ಜನರ ಮೇಲೆ ಹೇರಲು ಕಾರಣವೇನು? ಸಂತ ಅಲೋಶಿಯಸ್ ಮೊದಲಾದ ಅಲ್ಪಸಂಖ್ಯಾತರ ಕಾಲೇಜುಗಳಲ್ಲಿ ಸಾಕಷ್ಟು ಜನ ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರೆಲ್ಲ ಮತಾಂತರ ಹೊಂದಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.
ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಇದು ಧಾರ್ಮಿಕ ರಕ್ಷಣಾ ಕಾಯ್ದೆಯಲ್ಲ. ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾಶವಿದೆ. ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ. ಆದ್ದರಿಂದ ಇದು ಬಿಜೆಪಿಯವರು ಕ್ರಿಶ್ಚಿಯನರ ಮೇಲೆ ಗುರಿಯಿಟ್ಟು ತಂದ ಕಾಯ್ದೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಕ್ರಿಶ್ಚಿಯನ್ ಶಾಲಾ ಕಾಲೇಜುಗಳಿಂದ ಮಾತ್ರ ಹಿಂದುಳಿದವರು, ದಲಿತರು ಶಿಕ್ಷಣ ಪಡೆಯುವುದು ಸಾಧ್ಯವಾಯಿತು ಎಂದು ಹೇಳಿದರು.
ಎಂ. ಜಿ. ಹೆಗ್ಡೆ ಮಾತನಾ, ಇದು ಅಲ್ಪಸಂಖ್ಯಾತರ ಸಂಸ್ಥೆಗಳನ್ನು ಮುಚ್ಚಲು ನಡೆಸಿರುವ ಷಡ್ಯಂತ್ರ. ಚುನಾವಣೆ ಬರುತ್ತಿರುವುದರಿಂದ ಚುನಾವಣೆಗೆ ಮೊದಲು ಒಂದೆರಡು ದೂರು ದಾಖಲಾಗುವುದು ಖಚಿತ. ಒಟ್ಟಾರೆ ಸಾಮಾಜಿಕವಾಗಿ ತುಳಿಯಲ್ಪಟ್ಟವರನ್ನು ಮತ್ತಷ್ಟು ತುಳಿಯಲು ಮಾಡಿದ, ಅಪ್ರಬುದ್ಧ ಕಾಯ್ದೆಯಿದು. ಇದನ್ನು ಯಾರೂ ಒಪ್ಪುವಂತಿಲ್ಲ ಎಂದರು.
ಜೆಡಿಎಸ್ ನಾಯಕ ಸದಾಶಿವ ಮಾತನಾಡಿ, ಜನ ಸೇವೆಯ ಬದಲು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾತ್ರ ಬಿಜೆಪಿ ಮಾಡುತ್ತಿದೆ. ಈ ಕಾಯ್ದೆಯು ಅತ್ಯಂತ ಹೀನ ಮನಸ್ಸಿನದು, ಅವೈಜ್ಞಾನಿಕ ಆದ್ದರಿಂದ ಈ ಬಿಜೆಪಿಯ ಕುತ್ಸಿತ ಕಾಯ್ದೆಯನ್ನು ಹಿಂದೆ ಪಡೆಯಬೇಕು. ಅದರ ದುರುದ್ದೇಶದ ಕಾಯ್ದೆಯಿದು ಎಂದು ಅವರು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಕಳ್ಳಿಗೆ ತಾರಾನಾಥ ಶೆಟ್ಟಿ ಮಾತನಾಡಿ, ದೂರು ಕೊಟ್ಟವನು ಪ್ರಕರಣವನ್ನು ಪ್ರೂವ್ ಮಾಡಬೇಕು. ಆದರೆ ಈ ಕೇಸಿನಲ್ಲಿ ದೂರುದಾರನಿಗೆ ದೂರು ಕೊಟ್ಟ ಬಳಿಕ ಜವಾಬ್ದಾರಿಯೇ ಇಲ್ಲ. ಇದು ಜಾಮೀನುರಹಿತ ಎನ್ನುವುದಂತೂ ವಿಚಿತ್ರವಾಗಿದೆ. ಪೊಲೀಸರು ಯಾರದೋ ದೂರಿನ ಮೇಲೆ ಯಾರದೋ ಪ್ರತಿಷ್ಠೆ ಪತನಕ್ಕೆ ಈ ಕಾಯ್ದೆ ಬಳಸುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಮಾಜಿ ಉಪ ಮೇಯರ್ ಮುಹಮ್ಮದ್ ಮಾತನಾಡಿ, ಮತಾಂತರ ಎಂಬುದು ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಲ್ಲ. ಕ್ರಿಶ್ಚಿಯನರು ಅಧಿಕವಿರುವ ಗೋವಾದಲ್ಲಿ ಮತ್ತು ಸಿಖ್ ಜನ ಹೆಚ್ಚಿದ್ದ ಪಂಜಾಬಿನಲ್ಲಿ ಈಗ ಹಿಂದೂಗಳ ಸಂಖ್ಯೆ ಅಧಿಕವಾಗಿದೆ. ಅಲ್ಲಿ ಮತಾಂತರ ಆಯಿತೆ? ಈ ಸುಗ್ರೀವಾಜ್ಞೆಯು ಕ್ರಿಶ್ಚಿಯನ್, ಮುಸ್ಲಿಂ ಸಂಸ್ಥೆಗಳ ಮೇಲೆ ಬಿಜೆಪಿ ಗದಾಪ್ರಹಾರ ಮಾಡಲು ನಡೆಸಿರುವ ಕುಯುಕ್ತಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೊನ್ನಯ್ಯ, ಪ್ರಕಾಶ ಸಾಲ್ಯಾನ್, ಎಂ. ಜಿ. ಹೆಗಡೆ, ಮಾಜಿ ಉಪ ಮೇಯರ್ ಮುಹಮ್ಮದ್, ಟಿ. ಕೆ. ಸುಧೀರ್, ವಿಶ್ವಾಸ್ ದಾಸ್ ಮೊದಲಾದವರು ಉಪಸ್ಥಿತರಿದ್ದರು

Join Whatsapp