ರಾಜ್ಯದ ವಿಶ್ವವಿದ್ಯಾಲಯಗಳ ಸ್ನಾತಕ ಪದವಿಯ ಪರೀಕ್ಷಾ ಫಲಿತಾಂಶ ಶೀಘ್ರ ಪ್ರಕಟಿಸಲು ಎಸ್.ಐ.ಓ ಒತ್ತಾಯ

Prasthutha|

ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸ್ನಾತಕ ಪದವಿಯ ಅಂತಿಮ ವರ್ಷದ ಎಲ್ಲಾ ರೀತಿಯ ಫಲಿತಾಂಶವನ್ನು ಪ್ರಕಟಿಸಲು ಎಸ್.ಐ.ಓ ಕರ್ನಾಟಕ ಘಟಕ ಸರ್ಕಾರವನ್ನು ಒತ್ತಾಯಿಸಿದೆ.

- Advertisement -

ಫಲಿತಾಂಶ ಪ್ರಕಟ ಆಗದೆ ಇರುವುದರಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ದಾಖಲಾತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

2021 – 2022 ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದಡಿಯಲ್ಲಿ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಸದ್ಯ ಆನ್ ಲೈನ್ ನಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ಪರಿಗಣಿಸಿ ಮೆರಿಟ್ ನಿಯಮದನ್ವಯ ಸೀಟು ಹಂಚಿಕೆಯಾಗಿದ್ದು, ಅರ್ಹತಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಅನ್ವಯ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಗಾಗಿ ಜಿಲ್ಲಾ ನೋಡಲ್ ಕೇಂದ್ರ/ ವ್ಯವಸ್ಥಾಪಕ ಕೇಂದ್ರಕ್ಕೆ (CTE/DIET) ಹಾಜರಾಗಲು ದಿನಾಂಕವನ್ನು ನಿಗದಿಪಡಿಸಿದೆ. ಅರ್ಹತಾ ಪಟ್ಟಿಯ ಅಭ್ಯರ್ಥಿಗಳ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಯು ಡಿಸೆಂಬರ್ 2 ರಿಂದ 10 ನೇ ವರೆಗೆ ನಡೆಸಲಾಗುತ್ತಿದೆ.

- Advertisement -

ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸದೆ ಇದ್ದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಆತಂಕದಲ್ಲಿದ್ದು, ವಿದ್ಯಾರ್ಥಿಗಳನ್ನು ಧೃತಿಗೆಡಿಸಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಫಲಿತಾಂಶ ಪ್ರಕಟ ಮಾಡಲು ಸಿದ್ಧತೆ ನಡೆಸಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಸರ್ಕಾರಿ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು ಪರಸ್ಪರ ಸಹಕಾರ, ಹೊಂದಾಣಿಕೆಯ ವ್ಯವಹಾರದ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp