ಪ್ರಶ್ನಿಸಲ್ಪಡುತ್ತಿರುವ ಅಲ್ಪಸಂಖ್ಯಾತರ ಹಕ್ಕುಗಳು

Prasthutha|

ಅಲ್ಪಸಂಖ್ಯಾತರು ಬಹುಸಂಖ್ಯಾತರಿಂದ ಬಲಿಪಶುಗಳಾಗುವುದು ಅಕ್ರಮದ  ಸಂಕೇತವಾಗಿದೆ. ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳಿಂದ ವಂಚಿತರಾಗಿ ಅನ್ಯಾಯಕ್ಕೊಳಗಾದ ನಿದರ್ಶನಗಳಿವೆ. 1994ರಲ್ಲಿ ಆಫ್ರಿಕಾದ  ರುವಾಂಡ  ದೇಶದಲ್ಲಿ  10 ಲಕ್ಷಕ್ಕೂ ಅಧಿಕ  ಅಲ್ಪಸಂಖ್ಯಾತ ಟುಟ್ಸಿಗಳನ್ನು ಕೊಲ್ಲಲಾಯಿತು. ಅದೇ ರೀತಿ 60000 ಕ್ಕೂ ಹೆಚ್ಚು ಉದಾರವಾದಿ ಹುಟುಗಳನ್ನೂ ಕೊಲ್ಲಲಾಯಿತು.

- Advertisement -

ಭಾರತವು ಜಾತ್ಯತೀತ ರಾಷ್ಟ್ರ. ಭಾರತದ ಸಂವಿಧಾನವು ಅಲ್ಪಸಂಖ್ಯಾತರಿಗೆ ವಿಶಿಷ್ಟವಾದ ಸ್ಥಾನಮಾನವನ್ನು ನೀಡಿದೆ. ಇಲ್ಲಿನ ಪ್ರಜೆಗಳು “ಹಿಂದೂ ಮುಸಲ್ಮಾನ್ ಸಿಖ್ ಇಸಾಯಿ ಬಾಯಿ ಬಾಯಿ ” ಎಂಬ ತತ್ತ್ವದಲ್ಲಿ ದೃಢ ನಂಬಿಕೆ ಉಳ್ಳವರಾಗಿದ್ದಾರೆ. ಆದರೆ ಇತ್ತೀಚಿನ ಕೆಲವು ದಶಕಗಳಲ್ಲಿ ಮನುವಾದದ ಚಿಂತನೆಗಳು ಭಾರತದ ಏಕತೆಯನ್ನು ಛಿದ್ರಗೊಳಿಸಲು ಹೊರಟಿದೆ.

ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಶೈಕ್ಷಣಿಕ , ಧಾರ್ಮಿಕ , ಸಮಾನತೆ ಸೇರಿದಂತೆ 6 ಹಕ್ಕುಗಳನ್ನು ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಪ್ರಜೆಗಳಿಗೆ ಖಾತರಿಪಡಿಸಿದೆ. ಆದರೆ ಇಂದು ಅಲ್ಪಸಂಖ್ಯಾತರ ಹಕ್ಕುಗಳು ಅಧಃಪತನದ ಅಂಚಿನಲ್ಲಿವೆ. ವಾಕ್ ಸ್ವಾತಂತ್ರವಿದ್ದರೂ ಗೂಂಡಾ ಕಾಯಿದೆಗಳ ಮುಖಾಂತರ ಕ್ರೌರ್ಯತೆಯನ್ನು ಮೆರೆಯಲಾಗುತ್ತಿದೆ.

- Advertisement -

ಶಿಕ್ಷಣವು ಎಲ್ಲರ ಹಕ್ಕು. ಅದು ಯಾವುದೇ ಧರ್ಮೀಯನಿಗಾಗಲೀ ಪಂಗಡದವನಿಗಾಗಲೀ ಸೀಮಿತವಾದದ್ದಲ್ಲ. ಸರ್ವರಿಗೂ ಸಮಾನ ಶಿಕ್ಷಣ ಪಡೆಯುವ ಹಕ್ಕಿದೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಶಿಷ್ಟಾಚಾರದಡಿಯಲ್ಲಿ ಶಿಕ್ಷಣ ಪಡೆಯುವುದು ರೂಢಿ. ಸಿಖ್ಖರು ತಮ್ಮ ಪೇಟವನ್ನು ಧರಿಸಿ ಸರ್ಕಾರಿ ಸಭೆ ಸಮಾರಂಭಗಳಿಗೆ ತೆರಳುತ್ತಾರೆ ಹಾಗೂ ತಮ್ಮ ಶಿಷ್ಟಾಚಾರವನ್ನು ಕಾಪಾಡುತ್ತಾರೆ.

 ಕಳೆದ ಕೆಲವು ದಿನಗಳ ಹಿಂದೆ ಉಡುಪಿಯ ಕಾಲೇಜೊಂದರಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿಕೊಂಡು ಶಾಲಾ ವಠಾರಕ್ಕೆ ತೆರಳುವುದಕ್ಕೆ ನಿರ್ಬಂಧ ಹೇರಲಾಯಿತು. ಹಿಜಾಬ್ ವಿದ್ಯಾರ್ಥಿನಿಯರಿಗೆ ಸುರಕ್ಷತೆ ನೀಡುವುದೇ ಹೊರತು ಅಪಾಯವನ್ನು ತಂದೊಡ್ಡುವುದಿಲ್ಲ ಎಂಬುದು ಸಾಮಾನ್ಯ ಜನರಿಗೂ ತಿಳಿದ ಸತ್ಯ. ಅದನ್ನು ಧರಿಸುವವರಿಗೆ ಇದರಿಂದ ಕಿರಿಕಿರಿಯಾದ ಉದಾಹರಣೆಯಿಲ್ಲ. ಈ ಹಿಂದೆಯೂ ಕೂಡ ಹಿಜಾಬ್ ಕುರಿತಾದ ವಿವಾದ ಉದ್ಭವಗವಾಗಿತ್ತು. 2011 ರಲ್ಲಿ ಮೂಡಬಿದ್ರೆಯ ಜೈನ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಹಾದಿಯಾ ಇಕ್ಬಾಲ್ ಎನ್ನುವ ವಿದ್ಯಾರ್ಥಿನಿಗೂ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಲಾಗಿತ್ತು. ತರುವಾಯ ಕೋರ್ಟ್ ಮೆಟ್ಟಿಲೇರಿ ಈ ಪ್ರಕರಣವು ಬಗೆಹರಿದಿತ್ತು. “ಭೇಟಿ ಬಚಾವೋ ಭೇಟಿ ಪಡಾವೋ ” ಎಂದು ಭಾಷಣ ಬೀಗುವ ಪ್ರಧಾನಿಗೆ ಈ ಮಾತಿನ ಅರ್ಥ ತಿಳಿಯದಿರುವುದು ಹಾಸ್ಯಾಸ್ಪದ.

 ಉಡುಪಿಯ ಈ ಪ್ರಕರಣದ ಹಿಂದೆ ಅನೇಕ ರಾಜಕೀಯ ಶಕ್ತಿಗಳು ಲಾಭ ಗಳಿಸಲು ಪ್ರಯತ್ನಿಸುತ್ತಿದೆ. ಅಲ್ಲಿನ ಶಾಸಕರೇ ತಾನೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ಬೇಡದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಒಂದು ಪಂಗಡಕ್ಕೆ ಸೀಮಿತವಾದ ನಿಲುವುಗಳನ್ನು ಹೊಂದಿಕೊಂಡು ಅಲ್ಪಸಂಖ್ಯಾತರ ಹಕ್ಕುಗಳನ್ನು ಅವಗಣಿಸುವುದು ನಿಜಕ್ಕೂ ಅಸಾಂವಿಧಾನಕವೇ ಸರಿ. ಕಾಲೇಜುಗಳಲ್ಲಿ ಹಿಜಾಬಿಗೆ ನಿರ್ಬಂಧ ವಿಧಿಸುವುದಾದರೆ ಇತರ ಧಾರ್ಮಿಕ ಪೂಜೆಗಳು ಕಾಲೇಜುಗಳಲ್ಲಿ ನಡೆಯುತ್ತಿಲ್ಲವೇ.? ಅಂದರೆ ಅವುಗಳನ್ನು ರದ್ದುಗೊಳಿಸಿ ಎಂದಲ್ಲ. ಶೈಕ್ಷಣಿಕ ವಾತಾವರಣದಲ್ಲಿ ಹಿಂದಿನ ಪರಂಪರೆಯೇ ಮುಂದುವರಿಸುವುದು ಅನಿವಾರ್ಯವಾಗಿದೆ.

ಭಾರತದ ಸಂವಿಧಾನವು ಎಲ್ಲಾ ಪ್ರಜೆಗಳಿಗೂ ಸಮಾನ ಅವಕಾಶ, ಹಕ್ಕುಗಳನ್ನು ನೀಡಿದ್ದರೂ ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕೆಲವು  ದಿನಗಳ ಮುಂಚೆ “ಮತಾಂತರ ನಿಷೇಧ ಕಾಯಿದೆ” ಎಂಬ ಸಂವಿಧಾನ ವಿರೋಧಿ ಕಾಯಿದೆಯನ್ನು ಸರ್ಕಾರವು ವಿಧಾನಮಂಡಲದಲ್ಲಿ ಮಂಡಿಸಿದೆ. ಪ್ರಸ್ತುತ ಈ ಕಾಯಿದೆ ಉತ್ತರಪ್ರದೇಶ ಸೇರಿದಂತೆ ನಾಲ್ಕಾರು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಈ ವಿಧೇಯಕದಲ್ಲಿ ಉಲ್ಲೇಖವಾಗಿರುವ ಅಂಶಗಳು ಸಂವಿಧಾನ ವಿರೋಧಿ ಹಾಗೂ ಅಲ್ಪಸಂಖ್ಯಾತ ಹಕ್ಕುಗಳ ಉಲ್ಲಂಘನೆ ಎಂಬುದರಲ್ಲಿ ಸಂದೇಹವಿಲ್ಲ. ಅಲ್ಪಸಂಖ್ಯಾತರು ಕೇವಲ ತಮ್ಮ ಧರ್ಮದ ಹೆಸರಿನಲ್ಲಿ ಹಲ್ಲೆಗೊಳಗಾಗುತ್ತಿದ್ದಾರೆ. “ಭಾರತೀಯ ಯುವ ಜನತೆ ಆಕಾಂಕ್ಷೆಗಳು ಮತ್ತು ಭವಿಷ್ಯದ ದೃಷ್ಟಿ” ವರದಿಯ ಪ್ರಕಾರ ಸ್ನೇಹಿತರಿಂದ ತಾರತಮ್ಯ ಎದುರಿಸುವ  ಮುಸಲ್ಮಾನರು 44%  ಕ್ರಿಶ್ಚಿಯನ್ನರು 18 %  ಸಿಕ್ಕರು 8% ಎಂದು ಉಲ್ಲೇಖಿಸಿದೆ.

  ಧಾರ್ಮಿಕ ಕೇಂದ್ರಗಳು ಭಾರತದ ವಿಶಿಷ್ಟ ಲಕ್ಷಣವಾದ “ವೈವಿಧ್ಯತೆಯಲ್ಲಿ ಏಕತೆ”ಯನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ. ಇಂದು ಸಮಾಜದಲ್ಲಿ ಒಂದು ಧರ್ಮದ ಧಾರ್ಮಿಕ ಕೇಂದ್ರಗಳನ್ನು ಹಾಗೂ ಆಚಾರಗಳನ್ನು ನಿರ್ಣಾಮಗೊಳಿಸಲು ಷಡ್ಯಂತ್ರ ನಡೆಯುತ್ತಿದೆ. ಅನೇಕ ಸ್ವಾಮೀಜಿಗಳಿಂದ ಇಂತಹ ಹೇಳಿಕೆಗಳು ಕೂಡಾ ಬಹಿರಂಗವಾಗಿ ಹೊರ ಬಂದಿವೆ. ಧರ್ಮ ಗುರುಗಳು ಧರ್ಮಗಳನ್ನು ರಾಜಕೀಯದೊಂದಿಗೆ ಮಿಶ್ರಣ ಗೊಳಿಸುವುದು ಸಲ್ಲದು. ಏಕೆಂದರೆ ರಾಜಕೀಯ ಹಾಗೂ ಧರ್ಮ ಮಿಶ್ರಿತವಾದರೆ ವ್ಯವಸ್ಥೆಗೆ ಗಂಡಾಂತರ ಎದುರಾಗುವುದರಲ್ಲಿ ಸಂಶಯವಿಲ್ಲ. ಬೆಂಗಳೂರಿನ ರೈಲ್ವೆ ತಾಣದಲ್ಲಿ ನಮಾಜು ಕೊಠಡಿಗೆ ಕೆಲ ಬಜರಂಗಿಗಳು ದಾಳಿಮಾಡಿದರು. ಆದರೆ ಪಕ್ಕದಲ್ಲೇ ತಮ್ಮ ಧರ್ಮದ ಪೂಜಾ ಕೇಂದ್ರವು ಇರುವುದು ಅವರಿಗೆ ತಿಳಿಯದೇ ಏನಲ್ಲ. ಈ ದಾಳಿಯು ಹೇಯ ಕೃತ್ಯ ವಾಗಿದ್ದರೂ ಆಡಳಿತರೂಢರು ಮಾತು ಬಿಚ್ಚಲಿಲ್ಲ. ಧರ್ಮದ ನಡುವಿನ  ಸಾಮರಸ್ಯವನ್ನು ಗಟ್ಟಿಗೊಳಿಸಬೇಕಾದವರೇ ಛಿದ್ರಗೊಳಿಸಲು ಹೊರಟಿದ್ದಾರೆ.

 ಅಲ್ಪಸಂಖ್ಯಾತರ ಹಕ್ಕುಗಳು ಪ್ರಶ್ನಿಸಲ್ಪಟ್ಟಿರುವ ಈ ಕಾಲಘಟ್ಟದಲ್ಲಿ ತಮ್ಮ ಹಕ್ಕುಗಳನ್ನು ಉಳಿಸಲು ಅಲ್ಪಸಂಖ್ಯಾತರು ಮುಂದೆ ಬರಬೇಕಾಗಿದೆ. ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ವೋಟ್ ಬ್ಯಾಂಕ್ ಆಗಿ ಮಾರ್ಪಡದೆ ಪ್ರಜಾತಂತ್ರ ವ್ಯವಸ್ಥೆಗೆ ಅನುಗುಣವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ.

Join Whatsapp