ಬಿಡುವು ನೀಡಿದ ಮಳೆ; ಬೆಳೆ-ಆಸ್ತಿಪಾಸ್ತಿ ನಷ್ಟಕ್ಕೆ ಶೀಘ್ರ ಪರಿಹಾರ ನೀಡುವಂತೆ ಸಂತ್ರಸ್ತರ ಮನವಿ

Prasthutha|

ಹಾಸನ: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಎಡೆಬಿಡದೆ ಸುರಿದು ಅಪಾರ ಹಾನಿ ಮಾಡಿರುವ ಮಳೆ ಈಗ ಗಣನೀಯವಾಗಿ ಕ್ಷೀಣಿಸಿದೆ.

- Advertisement -

ಮಲೆನಾಡು ಭಾಗದ ತಾಲೂಕುಗಳಾದ ಸಕಲೇಶಪುರ, ಬೇಲೂರು, ಆಲೂರು, ಅರಕಲಗೂಡು ಸೇರಿದಂತೆ ಬಹುತೇಕ ಕಡೆ ವರುಣನ ಆರ್ಭಟ ಕಡಿಮೆಯಾಗಿದೆ. ಕೆಲವೆಡೆ ಸಣ್ಣ ಪ್ರಮಾಣದಲ್ಲಿ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.

ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಗೊರೂರಿನ ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇಂದು ಅಣೆಕಟ್ಟೆಗೆ 9374 ಕ್ಯುಸೆಕ್ ಹರಿದು ಬರುತ್ತಿದ್ದು, ಜಲಾಶಯದಿಂದ 4850 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿಗಳಾಗಿದ್ದು, ಇಂದು 2920.50 ಅಡಿ ನೀರಿದೆ. ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಆಗಿದ್ದು, ಹಾಲಿ 35.653 ಟಿಎಂಸಿ ನೀರಿದೆ.

- Advertisement -

ಜಿಲ್ಲೆಯಲ್ಲಿ ಮಳೆ ಏನೋ ಬಿಡುವುದು ನೀಡಿದೆ. ಆದರೆ ಹುಚ್ಚು ಮಳೆಯಿಂದ ಆಗಿರುವ ಹಾನಿಗೆ ಶೀಘ್ರವೇ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತವೇ ನೀಡಿರುವ ಮಾಹಿತಿಯಂತೆ ಜೂ. 1 ರಿಂದ ಈ ವರೆಗೆ ಜಿಲ್ಲೆಯಲ್ಲಿ ಸುಮಾರು 421ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 28 ಮನೆಗಳು ಸಂಪೂರ್ಣ ಕುಸಿದಿವೆ. ಹಾಗೆಯೇ ಒಟ್ಟಾರೆ 224 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಫಿ ಬೆಳೆಗೆ ದೊಡ್ಡ ಕಂಟಕ ಎದುರಾಗಿದೆ.

ಸಕಲೇಶಪುರ ತಾಲೂಕು ಹೆತ್ತೂರು, ಯಸಳೂರು, ಹಾನುಬಾಳ್, ಬೇಲೂರು ಮೊದಲಾದ ಕಡೆಗಳಲ್ಲಿ ನಿರಂತರ ಸುರಿದ ಭಾರೀ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಫಿ ಕಾಯಿ ಹಣ್ಣಾಗುವ ಮುನ್ನವೇ ಉದುರಿ ಮಣ್ಣುಪಾಲಾಗುತ್ತಿದೆ. ಇದರಿಂದ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ನಷ್ಟದ ಮಾಹಿತಿ ಪಡೆದು ಕೂಡಲೇ ಪರಿಹಾರ ಹಣ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.



Join Whatsapp