ಸುಳ್ಯ: ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಬೆಳ್ಳಾರೆಯ ಕಳಂಜ ನಿವಾಸಿ ಮುಹಮ್ಮದ್ ಮಸೂದ್ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಪ್ರಕರಣ ಸಂಬಂಧ 8 ಮಂದಿ ಬಜರಂಗದಳದ ಕಾರ್ಯಕರ್ತರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಬಜರಂಗ ದಳದ ಕಾರ್ಯಕರ್ತರಾದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ್ ಬಂಧಿತರಾಗಿದ್ದಾರೆ.
ಮಾರಣಾಂತಿಕ ಹಲ್ಲೆಯಿಂದ ಗಂಭೀರ ಗಾಯಗೊಂಡ ಮಸೂದ್ (19) ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿದ್ದರು.
ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿಯಾದ ಮುಹಮ್ಮದ್ ಮಸೂದ್ ಒಂದು ತಿಂಗಳ ಹಿಂದೆ ಸುಳ್ಯದ ಕಳಂಜ ಗ್ರಾಮದಲ್ಲಿರುವ ತನ್ನ ಅಜ್ಜ ಅಬ್ಬು ಮುಕ್ರಿ ಅವರ ಮನೆಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಸುಧೀರ್ ಎಂಬಾತನ ಮತ್ತು ಮಸೂದ್ ನಡುವೆ ಹೊಡೆದಾಟ ನಡೆದಿದೆ. ಇದೇ ವಿಷಯ ಮುಂದಿಟ್ಟು ದುಷ್ಕರ್ಮಿಗಳು ಮಾತುಕತೆಯಲ್ಲಿ ಪ್ರಕರಣ ಮುಗಿಸುವುದಾಗಿ ರಾತ್ರಿ ಮಸೂದ್ ರನ್ನು ಕರೆಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡು ಅಸ್ವಸ್ಥರಾಗಿ ಬಿದ್ದಿದ್ದ ಮಸೂದ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.