ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಮಧ್ಯಾಹ್ನ ತರಾತುರಿಯಲ್ಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಅವಕಾಶ ನೀಡಿದ್ದು, ಕಾನೂನು ಸಚಿವ ಮಾಧುಸ್ವಾಮಿ ವಿಧೇಯಕವನ್ನು ಮಂಡಿಸಿದ್ದಾರೆ.
ವಿಧೇಯಕದ ಪ್ರತಿ ನೀಡದೆ ಮಂಡನೆಗೆ ಅವಕಾಶ ನೀಡಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಸರಕಾರ ಕಳ್ಳತನದಿಂದ ವಿಧೇಯಕವನ್ನು ಮಂಡಿಸಿದೆ. ಇಂತ ಕೆಟ್ಟ ಸರಕಾರ ಕರ್ನಾಟಕದ ಇತಿಹಾಸದಲ್ಲಿ ನೋಡಿಲ್ಲ ಎಂದು ಹೇಳಿದರು.
ವಿಧೇಯಕದಲ್ಲಿರುವ ಪ್ರಮುಖ ಅಂಶ: ಬಲವಂತದ ಮತಾಂತರ ಮಾಡುವಂತಿಲ್ಲ, ಯಾವುದೇ ವ್ಯಕ್ತಿ ಮತಾಂತರ ಹೊಂದಬೇಕಾದರೆ ಸಕ್ಷಮ ಪ್ರಾಧಿಕಾರದ ಮುಂದೆ 2 ತಿಂಗಳ ಮೊದಲೇ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇನ್ನು ಮತಾಂತರ ಪ್ರಕ್ರಿಯೆ ಗೌಪ್ಯವಾಗಿಡುವಂತಿಲ್ಲ, ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಿ ಬಂಧಿಸುವ ಅವಕಾಶ ಇರುತ್ತದೆ. ಹೀಗೆ ಹಲವು ಅಂಶಗಳನ್ನು ಹೊಂದಿರುವ ಈ ಕಾಯ್ದೆ ವಿರುದ್ಧ ಈಗಾಗಲೇ ಹಲವರು ವಿರೋಧ ವ್ಯಕ್ತಡಿಸಿದ್ದು, ಕ್ರೈಸ್ತ ಸಮುದಾಯದ ನಿಯೋಗ ಇತ್ತೇಚೆಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಾಯ್ದೆ ಜಾರಿಗೊಳಿಸದಂತೆ ಮನವಿ ಮಾಡಿತ್ತು.