ಬೆಂಗಳೂರು: ದೇವಸ್ಥಾನಕ್ಕೆ ಬೀಗ ಹಾಕಿ ಪ್ರಧಾನ ಅರ್ಚಕ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿನಡೆದಿದೆ.
ಇಲ್ಲಿನ ಬಯಲು ಬಸವಣ್ಣದೇವಸ್ಥಾನದ ಅರ್ಚಕ ದೇವರ ಪೂಜಾ ಕಾರ್ಯದಲ್ಲಿ ಭಕ್ತರಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ದೇವಸ್ಥಾನದ ಟ್ರಸ್ಟ್, ಅರ್ಚಕನನ್ನು ವಜಾ ಮಾಡಿದ್ದು, ದೇವಾಲಯಕ್ಕೇ ಬೀಗ ಹಾಕಿ ಪೂಜಾರಿ ಪರಾರಿಯಾಗಿದ್ದಾರೆ.
ಗೌರಿಬಿದನೂರು ಮೂಲದ ಕೃಷ್ಣಮೂರ್ತಿ ಎಂಬವರನ್ನು ಬಯಲು ಬಸವಣ್ಣ ದೇವಾಲಯ ಸೇವಾ ಟ್ರಸ್ಟ್ ಕಳೆದ 11 ವರ್ಷಗಳಿಂದ ಪೂಜಾರಿಯಾಗಿ ನೇಮಿಸಿತ್ತು. ದಿನ ಕಳೆದಂತೆ ಹಣ ಕೊಟ್ಟವರಿಗೆ ಪೂಜೆ, ಹಣ ಕೊಡದವರಿಗೆ ಪೂಜೆ ಮಾಡಿಕೊಡದೆ ತಾರತಮ್ಯ ಮಾಡುತ್ತಿದ್ದರು ಎಂಬ ಆರೋಪ ವ್ಯಾಪಕವಾಗಿತ್ತು.
ಈ ಮಧ್ಯೆ, ಭಕ್ತರ ಕಾಣಿಕೆ ಹಣವನ್ನು ತಾನೇ ಪಡೆದು ಟ್ರಸ್ಟ್ ಗೆ ಮೋಸ ಮಾಡಿರುವ ಆರೋಪವೂ ಎದುರಾದ ಹಿನ್ನೆಲೆಯಲ್ಲಿ ಅರ್ಚಕನನ್ನು ಟ್ರಸ್ಟ್ ನವರು ವಜಾ ಮಾಡಿದ್ದರು. ಆದರೆ ಎರಡು ದಿನಗಳಿಂದ ದೇವಾಲಯದ ಬಾಗಿಲು ತೆಗೆಯದೆ, ಅರ್ಚಕ ಬೀಗ ಎತ್ತಿಕೊಂಡು ನಾಪತ್ತೆಯಾಗಿದ್ದಾರೆ. ಇದೀಗ ಟ್ರಸ್ಟ್ ನವರು ಬಾಗಿಲು ತೆಗೆದು ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.