ಜೈಲಿನಲ್ಲೇ ಇದ್ದ ಆರೋಪಿಗಾಗಿ 20 ವರ್ಷ ಹುಡುಕಾಟ ನಡೆಸಿದ ಪೊಲೀಸರು!

Prasthutha|

ಮುಂಬೈ: ಜೈಲಿನಲ್ಲೇ ಇದ್ದ ಆರೋಪಿಗಾಗಿ ಪೊಲೀಸರು 20 ವರ್ಷಗಳ ಕಾಲ ಹುಡುಕಾಟ ನಡೆಸಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ.

- Advertisement -

ಜೈಲಿನಲ್ಲೇ ಇದ್ದ ಆರೋಪಿಗಾಗಿ ಪೊಲೀಸರು 20 ವರ್ಷಗಳ ಕಾಲ ಹುಡುಕಾಟ ನಡೆಸಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪರೋಕ್ಷವಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

1999 ರ ಕೊಲೆ ಪ್ರಕರಣದಲ್ಲಿ ಛೋಟಾ ಶಕೀಲ್ ಗ್ಯಾಂಗ್‌ನ ಶಾರ್ಪ್ ಶೂಟರ್ ಎಂದು ಹೇಳಲಾದ ಆರೋಪಿಯನ್ನು 20 ವರ್ಷಗಳಿಂದ ಪತ್ತೆಹಚ್ಚಲು ಮುಂಬೈ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆದರೆ ಆರೋಪಿಯ ಸುಳಿವು ಪೊಲೀಸರಿಗೆ ಪತ್ತೆಯಾಗಿರಲಿಲ್ಲ.
ಈ ಆರೋಪಿಯು 5 ವರ್ಷಗಳ ಕಾಲ ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲೇ ಇದ್ದರು ಎಂದು ಇದೀಗ ಬಯಲಾಗಿದೆ.

- Advertisement -

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (Maharashtra Control of Organised Crime Act) MCOCA ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್ ಅವರು 1999 ರಲ್ಲಿ ಬಾಂಬೆ ಅಮಾನ್ ಸಮಿತಿಯ ಅಧ್ಯಕ್ಷ ವಾಹಿದ್ ಅಲಿ ಖಾನ್ ಅವರನ್ನು ಹತ್ಯೆಗೈದ ಆರೋಪಿ ಮಾಹಿರ್ ಸಿದ್ದಿಕಿಯನ್ನು ಖುಲಾಸೆಗೊಳಿಸಿದ್ದಾರೆ. ಪ್ರಾಸಿಕ್ಯೂಷನ್ ವಾದದಲ್ಲಿ ನ್ಯಾಯಾಲಯವು ಅನೇಕ ವ್ಯತ್ಯಾಸಗಳನ್ನು ಕಂಡುಕೊಂಡ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ.

ಜುಲೈ 1999 ರಲ್ಲಿ ಮುಂಬೈನ ಎಲ್ ಟಿ ಮಾರ್ಗ್ ಪ್ರದೇಶದಲ್ಲಿ ಸಿದ್ದಿಕಿ ಮತ್ತು ಸಹ-ಆರೋಪಿಗಳು ವಾಹಿದ್ ಅಲಿ ಖಾನ್ ಎಂಬವರನ್ನು ಗುಂಡಿಕ್ಕಿ ಕೊಂದಿದ್ದರು. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು.

ಮೇ 2019 ರಲ್ಲಿ, ಪೊಲೀಸರು ಮಾಹಿರ್ ಸಿದ್ದಿಕಿಯನ್ನು ಪತ್ತೆಹಚ್ಚಿ ಬಂಧಿಸಿದರು. ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ದೊರೆತ ನಂತರ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ತನಿಖೆಯ ವೇಳೆ, ಸಿದ್ದಿಕಿ ಮತ್ತು ಛೋಟಾ ಶಕೀಲ್ ಸೇರಿದಂತೆ ಆರು ಮಂದಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ. ಅಲ್ಲದೆ, ಛೋಟಾ ಶಕೀಲ್‌ನ ನಿರ್ದೇಶನದ ಮೇರೆಗೆ ಈ ಅಪರಾಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿರ್ ಸಿದ್ದಿಕಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸುವ ಸಮಯದಲ್ಲಿ, ಘಟನೆಯ ದಿನಾಂಕದಿಂದ ಬಂಧಿಸುವವರೆಗೂ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು.

ಆದರೆ ಆರೋಪಿ 2014 ಮತ್ತು 2019 ರ ನಡುವೆ ಮತ್ತೊಂದು ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದು, ಆರೋಪಿಯನ್ನು ಸಿಐಡಿ ಬಂಧಿಸಿತ್ತು ಎಂದು ತಿಳಿದುಬಂದಿದೆ. ಹಾಗಾದರೆ ಜೈಲಿನಲ್ಲಿದ್ದ ಆತನನ್ನು ಪತ್ತೆ ಹಚ್ಚಲು ಪೊಲೀಸರು ಹೇಗೆ ವಿಫಲರಾದರು ಎಂದು ಕೋರ್ಟ್‌ ಪ್ರಶ್ನೆ ಮಾಡಿದೆ.

Join Whatsapp