ಛತ್ತಿಸ್ಗಢ: ಸೆಲ್ಫಿ ತೆಗೆದುಕೊಳ್ಳುವಾಗ ಅಧಿಕಾರಿಯೊಬ್ಬರ ಮೊಬೈಲ್ ಕೈ ಜಾರಿ ಜಲಾಶಯಕ್ಕೆ ಬಿದ್ದಿದ್ದು, ಅದನ್ನು ಹುಡುಕಲು ಇಡೀ ಜಲಾಶಯದ ನೀರನ್ನು ಖಾಲಿ ಮಾಡಿಸಿದ ಪ್ರಸಂಗ ನಡೆದಿದೆ.
ಫುಡ್ ಇನ್ಸ್ಪೆಕ್ಟರ್ ರಾಜೇಶ್ ವಿಶ್ವಾಸ್ ಅವರ 1.25 ಲಕ್ಷ ರೂ. ಮೌಲ್ಯದ ಮೊಬೈಲ್ ಕೈಜಾರಿ ಜಲಾಶಯಕ್ಕೆ ಬಿದ್ದಿದೆ. ತನ್ನ ದುಬಾರಿ ಮೊಬೈಲ್ ಹೊರ ತೆಗೆಯಲು ಅವರು ಜಲಾಶಯದ ಬರೋಬ್ಬರಿ 21 ಲಕ್ಷ ಲೀಟರ್ ನೀರನ್ನು ಮೋಟಾರ್ ಬಳಸಿ ಖಾಲಿ ಮಾಡಿಸಿದ್ದಾರೆ.
ಈ ನೀರನ್ನು ಸುಮಾರು 1500 ಎಕರೆ ಕೃಷಿ ಭೂಮಿಗೆ ಬಳಕೆ ಮಾಡಿಕೊಳ್ಳಬಹುದಿತ್ತು ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ ಅವರು ಫುಡ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.
ಫುಡ್ ಇನ್ಸ್ಪೆಕ್ಟರ್ ರಾಜೇಶ್ ವಿಶ್ವಾಸ್ ರಜಾ ನಿಮಿತ್ತ ಕುಟುಂಬ ಸಮೇತ ಪಂಖಜೂರಿನ ಪ್ಯಾರಕೋಟೆ ಜಲಾಶಯಕ್ಕೆ ತೆರಳಿದ್ದರು. ಈ ವೇಳೆ ರಾಜೇಶ್ ಜಲಾಶಯದ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಅವರ ದುಬಾರಿ ಫೋನ್ ಕೈ ಜಾರಿ ನೀರಿನಲ್ಲಿ ಬಿದ್ದಿದೆ. ಈ ಜಲಾಶಯದಲ್ಲಿ ಸುಮಾರು 15 ಅಡಿಯಷ್ಟು ನೀರು ತುಂಬಿತ್ತು. ವರದಿಗಳ ಪ್ರಕಾರ, ತನ್ನ ಮೊಬೈಲನ್ನು ಹುಡುಕಲು ಜಲಾಶಯದಲ್ಲಿ ಸಂಗ್ರಹವಾಗಿದ್ದ 21 ಲಕ್ಷ ಲೀಟರ್ ನೀರನ್ನು ಅಧಿಕಾರಿ ಖಾಲಿ ಮಾಡಿಸಿದ್ದಾನೆ. ನೀರೆಲ್ಲಾ ಖಾಲಿಯಾದ ನಂತರ ಆತನ ಮೊಬೈಲ್ ಫೋನ್ ಸಿಕ್ಕಿದೆ ಎಂದು ತಿಳಿದುಬಂದಿದೆ.
ಜಲಸಂಪನ್ಮೂಲ ಅಧಿಕಾರಿಗೆ ನೋಟಿಸ್
ಈ ಘಟನೆ ನಂತರ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡದೆ ಇಷ್ಟೊಂದು ನೀರನ್ನು ಹೊರಬಿಡಲು ಹೇಗೆ ಒಪ್ಪಿಗೆ ನೀಡಲಾಗಿದೆ ಎಂಬುದರ ಬಗ್ಗೆ ತಕ್ಷಣವೇ ಉತ್ತರ ನೀಡಲು ಜಲಸಂಪನ್ಮೂಲ ಎಸ್‌ಡಿಒ ಆರ್ ಸಿ ದಿವಾರ್ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.
ಮೊಬೈಲ್ ಫೋನ್ಗಾಗಿ ಜಲಾಶಯದ ನೀರನ್ನು ಖಾಲಿ ಮಾಡಿರುವ ಈ ಪ್ರಕರಣ ವೈರಲ್ ಆದ ಬೆನ್ನಲ್ಲೇ, ಈ ಕುರಿತು ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಮೂಲಕ ಮಾಜಿ ಸಿಎಂ ರಾಜ್ಯದ ಭೂಪೇಶ್ ಬಘೇಲ್ ಸರ್ಕಾರವನ್ನು ಗುರಿಯಾಗಿಸಿ ಟೀಕಿಸಿದ್ದಾರೆ.
“ಭೂಪೇಶ್‌ಬಾಘೇಲ್ ಅವರ ಸರ್ವಾಧಿಕಾರದಲ್ಲಿ ಅಧಿಕಾರಿಗಳು ರಾಜ್ಯವನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಿದ್ದಾರೆ. ಇಂದು ಬಿಸಿಲಿನ ಬೇಗೆಯಲ್ಲಿ ಜನರು ಜೀವಜಲಕ್ಕಾಗಿ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ, ಕುಡಿಯುವ ನೀರಿಗೂ ವ್ಯವಸ್ಥೆ ಇಲ್ಲ. ಆದರೆ ಅಧಿಕಾರಿ ತನ್ನ ಮೊಬೈಲ್‌ಗಾಗಿ ಸುಮಾರು 21 ಲಕ್ಷ ಲೀಟರ್ ನೀರನ್ನು ವ್ಯರ್ಥ ಮಾಡಿದ್ದಾನೆ. ಈ ನೀರಿನಿಂದ ಒಂದೂವರೆ ಸಾವಿರ ಎಕರೆ ಜಮೀನು ನೀರಾವರಿಗೆ ಮಾಡಬಹುದಿತ್ತು” ಎಂದು ಆಕ್ರೋಶ ಹೊರ ಹಾಕಿದ್ದಾರೆ.