ಬೆಂಗಾವಲು ಇಲ್ಲ, ಶಿಷ್ಟಾಚಾರಗಳಿಲ್ಲ, ರಸ್ತೆ ತಡೆ ಇಲ್ಲ: ಯುಎಇ ಅಧ್ಯಕ್ಷರ ‘ನಡೆ’ಯನ್ನು ಕೊಂಡಾಡಿದ ನೆಟ್ಟಿಗರು!

Prasthutha|

ಅಬುಧಾಬಿ: ಯುಎಇ ಅಧ್ಯಕ್ಷರು ಬೆಂಗಾವಲು ಇಲ್ಲದೆ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸದಾ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಯಾವುದೇ ಭದ್ರತಾ ಪಡೆಗಳು ಇಲ್ಲದೆ ದೇಶದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಂಥದ್ದೊಂದು ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

- Advertisement -

ಹಸನ್ ಸಜ್ವಾನಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಯುಎಇ ಅಧ್ಯಕ್ಷರು ರಸ್ತೆಬದಿಯಲ್ಲಿ ನಡೆದುಕೊಂಡು ಹೊಗುತ್ತಿರುವ ವೀಡಿಯೋ ತುಣುಕನ್ನು ಟ್ವೀಟ್ ಮಾಡಿದ್ದು, “ಯಾವುದೇ ಬೆಂಗಾವಲು ಇಲ್ಲ, ಯಾವುದೇ ಶಿಷ್ಟಾಚಾರಗಳಿಲ್ಲ, ಯಾವುದೇ ರಸ್ತೆ ತಡೆಗಳಿಲ್ಲ… ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಜನ ಸಾಮಾನ್ಯರಂತೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಯುಎಇ ತುಂಬಾ ಸುರಕ್ಷಿತವಾಗಿದೆ. ನನ್ನ ಅಧ್ಯಕ್ಷರು ತುಂಬಾ ಸರಳ ವ್ಯಕ್ತಿಯಾಗಿದ್ದಾರೆ” ಎಂದು ಅವರು ವೀಡಿಯೋದೊಂದಿಗೆ ಬರೆದಿದ್ದಾರೆ.

ಈ ವೀಡಿಯೊವನ್ನು ಅತೀ ಕಡಿಮೆ ಸಮಯದಲ್ಲಿ ಅನೇಕ ಜನರು ಹಂಚಿಕೊಂಡಿದ್ದು, ಭಾರೀ ಪ್ರತಿಕ್ರಿಯೆಗಳೂ ಬಂದಿವೆ.

ಇದರೊಂದಿಗೆ, ಯುಎಇ ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಸೇರಿದಂತೆ ಇತರ ಯುಎಇ ರಾಷ್ಟ್ರೀಯ ನಾಯಕರು ಜನ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆದಾಡುವ ದೃಶ್ಯಗಳನ್ನು ಸಹ ಜನರು ಹಂಚಿಕೊಂಡಿದ್ದಾರೆ.

- Advertisement -