ರಾಷ್ಟ್ರ ಲಾಂಛನದಲ್ಲಿ ಶಾಂತಿಯ ಸಿಂಹವೇ ಇರಬೇಕೇ ಹೊರತು ಘರ್ಜನೆಯ ಸಿಂಹ ಬರಬಾರದು: ಡಿ.ಕೆ.ಶಿವಕುಮಾರ್

Prasthutha|

ಮೈಸೂರು: ‘ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಯಾವ ಲಾಂಛನ ಇತ್ತೊ ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಲಾಂಛನದಲ್ಲಿ ಶಾಂತಿಯ ಸಿಂಹವೇ ಇರಬೇಕೇ ಹೊರತು ಘರ್ಜನೆಯ ಸಿಂಹ ಬರಬಾರದು. ದೇಶದಲ್ಲಿ ಶಾಂತಿ ಇರಬೇಕೇ ಹೊರತು ಘರ್ಜನೆ ಇರಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

- Advertisement -

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ಆಗುತ್ತಿರುವ ಬೆಳವಣಿಗೆಗಳು ನಮ್ಮ ದೇಶ ಹಾಗೂ ರಾಜ್ಯದಲ್ಲಿ ಆಗಬಾರದು. ನಮಗೆ ಬಸವಣ್ಣ, ಕುವೆಂಪು, ಶಿಶುನಾಳ ಷರೀಫರು, ಕನಕದಾಸರ ಕರ್ನಾಟಕ ಬೇಕು. ರಾಜ್ಯ ಹಾಗೂ ದೇಶದಲ್ಲಿ ಜನರನ್ನು ವಿಭಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಭಾರತವನ್ನು ಜೋಡಿಸುವ ಪಾದಯಾತ್ರೆ ಮೂಲಕ ಇಡೀ ಭಾರತ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ ಸಾರಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರು ಕೊಟ್ಟ ಪರಿಹಾರವನ್ನು ಬಿಸಾಕಿದ ಮಹಿಳೆ ನಮಗೆ ಹಣ ಬೇಡ, ಶಾಂತಿ ಬೇಕು ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಕೇಳಬೇಕು. ಶಾಂತಿ ಕದಡುತ್ತಿರುವವರಿಗೆ ಈ ಪ್ರಶ್ನೆ ಕೇಳಬೇಕು. ಕುವೆಂಪು ಅವರು ಹೇಳಿರುವಂತೆ ಈ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಯಾರು ಕೂಡ ನಾವು ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಅದೆಲ್ಲವು ತಂದೆ, ತಾಯಿ ಹಾಗೂ ಭಗವಂತನ ಪ್ರೇರಣೆ. ಅವರು ನೆಮ್ಮದಿ ಹಾಗೂ ರಕ್ಷಣೆ ಕೇಳಿರುವುದರಲ್ಲಿ ತಪ್ಪಿಲ್ಲ. ನಾವು ಜನಪ್ರತಿನಿಧಿಗಳು ಎಲ್ಲ ಜನರನ್ನು ರಕ್ಷಿಸುತ್ತೇವೆ, ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದ್ದು, ನಾವು ಅವರಿಗೆ ರಕ್ಷಣೆ ನೀಡಬೇಕಿದೆ. ಸರ್ಕಾರ ಹಾಗೂ ರಾಜ್ಯದ ನಾಯಕತ್ವ ವಹಿಸಿಕೊಂಡಿರುವವರು ಈ ಬಗ್ಗೆ ಮೊದಲು ಗಮನ ವಹಿಸಬೇಕು. ರಾಜ್ಯದ ಅಲ್ಪಸಂಖ್ಯಾತ ವರ್ಗದ ಜನ ನೊಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಸಹಾಯ ಮಾಡಲು ಹೋದಾಗ ನೊಂದವರ ಭಾವನೆ ವ್ಯಕ್ತವಾಗಿದ್ದು, ಇದನ್ನು ಸರ್ಕಾರ ಗಮನಿಸಬೇಕು, ಎಚ್ಛೆತ್ತುಕೊಳ್ಳಬೇಕು ಎಂದು ಹೇಳಿದರು.

- Advertisement -

75ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಕಾರ್ಯಕ್ರಮ ಕುರಿತು ಕೇಳಿದ ಪ್ರಶ್ನೆಗೆ, ‘ರಾಹುಲ್ ಗಾಂಧಿ ಅವರ ನೇತೃತ್ವದ ಪಾದಯಾತ್ರೆ ಕೇರಳದಿಂದ ಚಾಮರಾಜನಗರ ಮಾರ್ಗವಾಗಿ ರಾಜ್ಯವನ್ನು ಪ್ರವೇಶಿಸಲಿದೆ. ಸುಮಾರು 350 ಕ್ಕೂ ಹೆಚ್ಚು ಕಿ.ಮೀ ಉದ್ದದ ಪಾದಯಾತ್ರೆ ರಾಜ್ಯದಲ್ಲಿ ನಡೆಯಲಿದೆ. ನಾಳೆ ಸಂಜೆ ಸುರ್ಜೆವಾಲ ಅವರು ಪಕ್ಷದ ಪದಾಧಿಕಾರಿಗಳು, ಶಾಸಕರು, ಪರಾಜಿತ ಅಭ್ಯರ್ಥಿಗಳ ಜತೆ ಜೂಮ್ ನಲ್ಲಿ ಸಭೆ ನಡೆಸಲಿದ್ದಾರೆ. ಈ ಮಧ್ಯೆ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿರುವ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ. ಆ.1 ರಿಂದ ಆ.10 ರವರೆಗೂ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ನಂತರ ಆ.15 ರಂದು 1 ಲಕ್ಷ್ಕ್ಕೂ ಹೆಚ್ಚು ಜನ ಪಕ್ಷಾತೀತವಾಗಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಲಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಟ್ಟದ್ದು, ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಮಾಡಿದ್ದು ಕಾಂಗ್ರೆಸ್’ ಎಂದು ಉತ್ತರಿಸಿದರು.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ವಿಚಾರವಾಗಿ ಬಿಜೆಪಿಗೆ ಹೆಚ್ಚು ಆಸಕ್ತಿ ಇದ್ದಂತಿದೆ ಎಂದು ಕೇಳಿದಾಗ, ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನುಡಿದಂತೆ ನಡೆದು ಆಡಳಿತ ನಡೆಸಿರುವ ಬಗ್ಗೆ ಹಾಗೂ ಅಧಿಕಾರ ಇದ್ದಾಗ ಎಲ್ಲ ಇಲಾಖೆಗಳಲ್ಲಿನ ಸಾಧನೆ ತಿಳಿಸಲಾಗುವುದು. ಹಾಲು, ಅಕ್ಕಿ, ರಸ್ತೆ, ರೈತ ಹಾಗೂ ಕೃಷಿ ವಿಚಾರಗಳ ಬಗ್ಗೆ ಜನರಿಗೆ ಮುಟ್ಟಿಸುವ ಕಾರ್ಯಕ್ರಮ ಇದಾಗಿದೆ’ ಎಂದು ತಿಳಿಸಿದರು.

ಈ ಕಾರ್ಯಕ್ರಮ ಕಾಂಗ್ರೆಸ್ ಗೆ ನಷ್ಟವಾಗುತ್ತದೆಯೇ, ಬಿಜೆಪಿ ಇದಕ್ಕೆ ಟೀಕೆ ಮಾಡುತ್ತಿರುವುದೇಕೆ ಎಂದು ಕೇಳಿದ ಪ್ರಶ್ನೆಗೆ, ‘ಅಸೂಯೆಗೆ ಮದ್ದಿಲ್ಲ. ನಮ್ಮ ಸರ್ಕಾರದ ಕಾರ್ಯಕ್ರಮಗಳಿಗೆ ಸರಿಸಮನಾಗಿ ಯೋಜನೆ ನೀಡಲು ಬಿಜೆಪಿಯವರಿಂದ ಸಾಧ್ಯವಾಗುತ್ತಿಲ್ಲ. ಬಿಜೆಪಿಯವರ ಕಳೆದ ಪ್ರಣಾಳಿಕೆ ತೆಗೆದು ನೋಡಿ. ಕಳೆದ ಮೂರು ವರ್ಷದಲ್ಲಿ ಅವರು ಎಷ್ಟು ಭರವಸೆ ಈಡೇರಿಸಿದ್ದಾರೆ ಪರಿಶೀಲಿಸಿ. ನಮ್ಮ ಸರ್ಕಾರ ಇದ್ದಾಗ ಕೊಟ್ಟ ಮಾತಿನಲ್ಲಿ ಶೇ.95ರಷ್ಟು ಭರವಸೆ ಈಡೇರಿಸಿದ್ದೇವೆ. ಅದಕ್ಕೆ ಅವರಿಗೆ ಹೊಟ್ಟೆಕಿಚ್ಚು. ಇದಕ್ಕೆ ಪರಿಹಾರ ಎಂದರೆ ಜನ ರಾಷ್ಟ್ರಧ್ವಜ ಹಿಡಿದು ಈ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ತಿಳಿಸಿದರು.

ಬಿಜೆಪಿ ಸಭೆ ಕುರಿತು ಕೇಳಿದ ಪ್ರಶ್ನೆಗೆ, ‘ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಈ ಆಕ್ರೋಶ ಹೆಚ್ಚಾಗುವ ಮುನ್ನ ಚುನಾವಣೆ ಮಾಡಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಸುದ್ದಿ ಇದೆ. ಪಕ್ಷದ ಸಂಘಟನೆ ಮಾಡುತ್ತಿದ್ದಾರೋ ಅಥವಾ ಸುದ್ದಿ ಹರಡಿಸುತ್ತಿದ್ದಾರೋ ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ’ ಎಂದು ಉತ್ತರಿಸಿದರು.

Join Whatsapp