ಬೆಂಗಳೂರು: ಹೊಟ್ಟೆ ಹಾಗೂ ತಲೆಗೆ ಡ್ರಾಗನ್ನಿಂದ ಚುಚ್ಚಿ ಸ್ಥಳೀಯ ಕಾಂಗ್ರೆಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ಬಿಡದಿ ಬಳಿ ನಡೆದಿದೆ.
ರಾಮನಗರ ಜಿಲ್ಲೆಯ ಗಂಟಪ್ಪ ಕೊಲೆಯಾದ ದುರ್ದೈವಿಯಾಗಿದ್ದಾರೆ. ಇಲ್ಲಿನ ಬಿಡದಿ ಹೋಬಳಿ ಬಾನಂದೂರು ಗ್ರಾಮದ ನಿವಾಸಿಯಾಗಿರುವ ಗಂಟಪ್ಪ ಅವರನ್ನು ಭೈರವನದೊಡ್ಡಿ ಸಮೀಪ ಇರುವ ಅವರದ್ದೇ ತೋಟದ ಬೈಕ್ ಸರ್ವಿಸ್ ಸ್ಟೇಷನ್ ಮನೆಯಲ್ಲಿ ಕೊಲೆ ಮಾಡಲಾಗಿದೆ.
ತೋಟದ ಬೈಕ್ ಸರ್ವಿಸ್ ಸ್ಟೇಷನ್ ಮನೆಯಲ್ಲಿ ನಿನ್ನೆ ರಾತ್ರಿ 11ರ ವೇಳೆ ಗಂಟಪ್ಪ ಅವರನ್ನು ಡ್ರಾಗನ್ ನಿಂದ ಚುಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಜಮೀನು ವಿವಾದದ ಹಿನ್ನಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದ ತಕ್ಷಣವೇ ಬಿಡದಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.