ಸಂಘ ಪರಿವಾರವು ಲವ್ ಜಿಹಾದ್ ಎಂಬ ಕಟ್ಟು ಕತೆಯನ್ನು ಹೇಗೆ ಅಪಾಯಕಾರಿಯಾಗಿ ಹರಡುತ್ತಿದೆ?

Prasthutha|

ನವದೆಹಲಿ: ಭಾರತವನ್ನು ಲವ್ ಜಿಹಾದ್ ಎಂಬ ಘೋರ ಕಲ್ಪನೆ ಮತ್ತೆ ಕಾಡುತ್ತಿದೆ. ಇದನ್ನು ಹಿಂದೆ ಭಾರತೀಯ ಜನತಾ ಪಕ್ಷವು ಪಕ್ಕಾ ರಾಜಕೀಯ ದಾಳವಾಗಿ ಉರುಳಿಸಿತ್ತು. ಇದರ ಕಾರಣಕ್ಕೆ 2013ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಕೋಮು ಗಲಭೆ ನಡೆದು 62 ಜನರ ಹತ್ಯೆಯಾಯಿತು. 50,000ಕ್ಕೂ ಅಧಿಕ ಮುಸ್ಲಿಮರು ನಿರಾಶ್ರಿತರಾದರು.

- Advertisement -

ಇದರಿಂದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಜನರು ಸಂಪೂರ್ಣವಾಗಿ ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡರು. ಲವ್ ಜಿಹಾದ್ ಗಾಳಿ ಆ ಪ್ರದೇಶದ ಸಾಮಾಜಿಕ ಸೌಹಾರ್ದವನ್ನು ಪೂರ್ಣ ಹಾಳು ಮಾಡಿತು. 1970ರಿಂದ ರೈತಾಪಿ ವರ್ಗವಾಗದ ಜಾಟ್ ಮತ್ತು ಮುಸ್ಲಿಮರು ಮಾಜಿ ಪ್ರಧಾನಿ ಚರಣ್ ಸಿಂಗ್ ರ ಪ್ರಯತ್ನದಿಂದ ಒಗ್ಗಟ್ಟಿನಿಂದ ಇದ್ದರು; ಅವರು ಈಗ ಬದ್ಧ ವೈರಿಗಳಾಗಿ ಬದಲಾದರು. ಇದರ ಫಲವನ್ನು ಈಗಲೂ ಕೇಸರಿ ಪಕ್ಷವು ಕೊಯ್ಲು ಮಾಡುತ್ತಿದೆ.

ಗುಜರಾತಿನ ಹೊರಗೆ ಪರಿಚಿತ ಮುಖವಲ್ಲದ ಅಮಿತ್ ಶಾ ಪಕ್ಷದ ಚುನಾವಣಾ ಉಸ್ತುವಾರಿಯಾಗಿ ಉತ್ತರ ಪ್ರದೇಶಕ್ಕೆ ಬಂದ ಕಾಲ. ಸಂಘ ಪರಿವಾರದ ಹಿಂದುತ್ವ ಪ್ರಯೋಗಾಲಯದ ಸೃಷ್ಟಿಯಾದ ಲವ್ ಜಿಹಾದ್ ಅದಾಗಲೇ ಕರ್ನಾಟಕದ ಕರಾವಳಿಯಲ್ಲಿ ಹಿಂದು – ಮುಸ್ಲಿಮರನ್ನು ದೂರ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದನ್ನು ಬಿಜೆಪಿ ಕಾರ್ಯಕರ್ತರು ಉತ್ತರ ಪ್ರದೇಶದ ಮೂಲೆ ಮೂಲೆಗಳಲ್ಲಿ ಪ್ರಚಾರ ಮಾಡಿದರು.

- Advertisement -

ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಮುಸ್ಲಿಮರ ವಿರುದ್ಧ ಜಾಟ್ ಜನರಲ್ಲಿ ಅಪನಂಬಿಕೆ ಉಂಟಾಗುವಂತೆ ಪ್ರಚಾರ ಮಾಡಿದರು. ಅವರು ಜಾಟ್ ಹಿರಿಯರನ್ನು ಭೇಟಿಯಾಗಿ ಅವರಲ್ಲಿ ಕಡು ಸಂಪ್ರದಾಯ ನಿಷ್ಠೆಯನ್ನು ಬಡಿದೆಬ್ಬಿಸಿದರು. 

 ಜಾಲ ತಾಣಗಳನ್ನು ಬಳಸಿಕೊಂಡು ಉಗ್ರರು ಮತ್ತು ಇಸ್ಲಾಂ ದೇಶಗಳಿಂದ ಹಣ ಪಡೆದು ಮದ್ರಸಾಗಳು ಹಿಂದೂ ಹುಡುಗಿಯರನ್ನು ಮತಾಂತರ ಮಾಡುವ ಕಸುಬಿನಲ್ಲಿ ತೊಡಗಿದೆ ಎಂಬ ಸುಳ್ಳನ್ನು ಯಶಸ್ವಿಯಾಗಿ ಪ್ರಚಾರ ಮಾಡಿದರು. ಈ ಮದ್ರಸಾಗಳು ಚೆನ್ನಾಗಿ ಕಾಣುವ ಹುಡುಗರನ್ನು ತಯಾರಿಸಿ, ಹಿಂದೂ ಹುಡುಗಿಯರನ್ನು ಆಕರ್ಷಿಸಿ ಕರೆತರಲು ತರಬೇತಿ ನೀಡುತ್ತವೆ ಎಂಬ ಸುಳ್ಳನ್ನು ಹರಿಯಬಿಡಲಾಯಿತು. ಒಳ್ಳೆಯ ಉಡುಗೆ, ಮೊಬೈಲ್, ಬೈಕ್ ಗಳನ್ನೆಲ್ಲ ಹಿಂದೂ ಹುಡುಗಿಯರನ್ನು ಸೆಳೆಯುವ ಮುಸ್ಲಿಂ ಯುವಕರಿಗೆ ನೀಡಲಾಗುತ್ತಿತ್ತು ಎನ್ನಲಾಯಿತು.

ಇದರ ಜೊತೆಗೆ ವಾಟ್ಸ್ ಯಾಪ್ ನಲ್ಲಿ ನಕಲಿ ವೀಡಿಯೋಗಳನ್ನು ಇದಕ್ಕೆ ಬೆಂಬಲವಾಗುವ ರೀತಿಯಲ್ಲಿ ತಯಾರಿಸಿ ಹರಿಯಬಿಡಲಾಗುತ್ತಿತ್ತು. ಇದರ ಪರಿಣಾಮ ಎಷ್ಟಿತ್ತೆಂದರೆ 2012ರಲ್ಲಿ ಪಶ್ಚಿಮ ಉತ್ತರ ಪ್ರದೇಶದ ಕಾಪ್ ಪಂಚಾಯತ್ ಒಂದು ಹೆಣ್ಣು ಮಕ್ಕಳು ಮೊಬೈಲ್ ಫೋನ್ ಹೊರಗೆ ಒಯ್ಯಬಾರದು ಎಂದು ಕಟ್ಟಪ್ಪಣೆ ಮಾಡಿತು. ಮುಸ್ಲಿಂ ಯುವಕರು ಮೊಬೈಲ್ ಅಂಗಡಿಗಳ ನಿರ್ವಹಣೆ ಮಾಡುವ ಸ್ಥಳಗಳನ್ನು ಹಿಂದೂ ಹುಡುಗಿಯರನ್ನು ಸಂಪರ್ಕಿಸುವ ತಾಣವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಪ್ರಚಾರ ವ್ಯವಸ್ಥಿತವಾಗಿ ನಡೆಯಿತು. ಮುಂದೆ ಪಶ್ಚಿಮ ಉತ್ತರ ಪ್ರದೇಶವಲ್ಲದೆ, ಹರಿಯಾಣದ ಹಲವು ಕಾಪ್ ಪಂಚಾಯತ್ ಗಳು ಸಹ ಹುಡುಗಿಯರು ಮೊಬೈಲ್ ಬಳಸುವ ಬಗ್ಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದವು.

ಹೀಗೆ ಅಪನಂಬಿಕೆಯ ಬೀಜ ಬಿತ್ತಿದ್ದು ಮುಂದೆ 2013ರಲ್ಲಿ ಮುಜಾಫರ್ ನಗರ ಕೋಮು ಗಲಭೆಗೆ ಕಾರಣವಾಯಿತು. ಇದು ಮುಸ್ಲಿಂ ಮತ್ತು ಹಿಂದೂ ಯುವಕರ ನಡುವೆ ಬೈಕಿನಲ್ಲಿ ಒಂದು ಸಣ್ಣ ಚಕಮಕಿಯಿಂದ ಆರಂಭಗೊಂಡು, ಒಬ್ಬ ಮುಸ್ಲಿಂ ಯುವಕನ ಕೊಲೆಗೆ ಕಾರಣವಾಯಿತು, ಮುಂದೆ ಅದು ಹಲವು ದಿನಗಳ ಕಾಲ ಕೋಮು ದ್ವೇಷದ ಜ್ವಾಲೆಯನ್ನು ಆ ಪ್ರದೇಶದಲ್ಲೆಲ್ಲ ಹರಡಿತು. 

ಪರಿಣಾಮಕಾರಿ ಗಲಭೆ ಸಾಧನವಾಗಿ ಲವ್ ಜಿಹಾದ್ 

ಕವಲ್ ಗ್ರಾಮದಲ್ಲಿ ಮುಸ್ಲಿಂ ಯುವಕನನ್ನು ಕೊಂದ ಇಬ್ಬರು ಜಾಟ್ ರನ್ನು ಒಂದು ಗುಂಪು ಕೊಚ್ಚಿ ಹಾಕಿತು.

ಇದೇ ಸಂದರ್ಭದವನ್ನು ಉಪಯೋಗಿಸಿಕೊಂಡ ಸಂಘ ಪರಿವಾರದವರು,  ತಾಲಿಬಾನ್ ನಡೆಸಿದ ಹತ್ಯೆಯೊಂದರ ವೀಡಿಯೋವನ್ನು ಕವಲ್ ಗ್ರಾಮದಲ್ಲಿ ನಡೆಯುತ್ತಿರುವ ಬರ್ಬರ ಹತ್ಯೆ ಎಂದು ಹರಿಯ ಬಿಟ್ಟರು. ತಮ್ಮ ತಂಗಿಯನ್ನು ಅನ್ಯ ಧರ್ಮದ ಯುವಕರಿಂದ ಉಳಿಸಲು ಹೋದ ಇಬ್ಬರು ಜಾಟ್ ಯುವಕರನ್ನು ಮುಸ್ಲಿಮರು ಕೊಚ್ಚಿ ಹಾಕಿದರು ಎಂಬ ಹಸೀ ಸುಳ್ಳನ್ನು ಅದಕ್ಕೆ ಸೇರಿಸಿದರು.

ಕೋಮು ಗಲಭೆಯನ್ನು ಜೋರಾಗಿ ಎಬ್ಬಿಸಲು ಕೊಲೆಯಾದ ಜಾಟ್ ಹುಡುಗರ ಶವದ ಮೆರವಣಿಗೆಯನ್ನು ಸಂಘ ಪರಿವಾರದವರು ವಿಶೇಷವಾಗಿ ನಡೆಸಿದರು. ಶವ ಸಂಸ್ಕಾರದಿಂದ ವಾಪಾಸು ಬರುವಾಗ ಗುಂಪು ಟ್ರಾಕ್ಟರ್ ಮತ್ತು ಬೈಕ್ ಗಳಲ್ಲಿ ಕವಲ್ ನ ಮುಸ್ಲಿಂ ಕಾಲೋನಿಯೊಳಕ್ಕೆ ನುಗ್ಗಿತು. ‘ಪಾಕಿಸ್ತಾನಕ್ಕೆ ಹೋಗಿ ಇಲ್ಲವೇ ಸ್ಮಶಾನಕ್ಕೆ ಹೋಗಿ’ ಎಂದು ಕೂಗುತ್ತ ಆ ಗುಂಪು ಮುಸ್ಲಿಮರ ಮನೆ ಅಂಗಡಿಗಳನ್ನು ಲೂಟಿ ಮಾಡಿತು, ಆ ಪ್ರದೇಶದ ಮಸೀದಿಗೆ ಬೆಂಕಿ ಹಾಕಿತು ಹಾಗೂ ಸಾಧ್ಯವಾದವರನ್ನೆಲ್ಲ ಚಚ್ಚತೊಡಗಿತು. ಹಿಂದೂ ಒಗ್ಗಟ್ಟು ಜಿಂದಾಬಾದ್, ಒಂದಕ್ಕೆ 100 ಕೊಲೆ ಎಂಬ ಘೋಷಣೆಗಳನ್ನು ಸಹ ಮೊಳಗಿದವು.

ಕೋಮು ಗಲಭೆ ಯೋಜನೆ ಇನ್ನೂ ಮುಗಿದಿರಲಿಲ್ಲ. ತಿರುಚಿದ ವೀಡಿಯೋ ಪ್ರಚಾರ ಪಡೆದಂತೆಯೇ, ಸಂಘ ಪರಿವಾರದ ಪ್ರಚಾರಕ್ಕೆ ಪಕ್ಕಾದ ಜಾಟ್ ನಾಯಕರು, ‘ಆಕ್ರಮಣಕಾರಿ ಮುಸ್ಲಿಮರ ವಿರುದ್ಧ ಜಾಟ್ ಗೌರವ ರಕ್ಷಣೆ’ ಎಂಬ ಕಾರ್ಯಸೂಚಿಯ ಮೇಲೆ ಮಹಾಪಂಚಾಯತ್ ಕೂಟ ಕರೆದರು. ಚಾರಿತ್ರಿಕವಾಗಿ ಮಹಾಪಂಚಾಯತಿಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯ ಇತ್ತು, ಈಗ ಇಲ್ಲ. ಕವಲ್ ಕೋಮು ಗಲಭೆಯ ಬಳಿಕ ಸೇರಿದ ಈ ಮಹಾಪಂಚಾಯತ್ ನಲ್ಲಿ ಬಿಜೆಪಿ ನಾಯಕರಾದ ಹುಕುಂ ಸಿಂಗ್, ಸಂಗೀತ್ ಸೋಮ್, ಸುರೇಶ್ ರಾಣಾ, ಅಲ್ಲದೆ ಭಾರತೀಯ ಕಿಸಾನ್ ಯೂನಿಯನ್ ನ ನರೇಶ್, ರಾಕೇಶ್ ಟಿಕಾಯತ್ ಭಾಗವಹಿಸಿದ್ದರು. ‘ನಿಮ್ಮ ಸೊಸೆಯರು ಮತ್ತು ಮಗಳಂದಿರನ್ನು ರಕ್ಷಿಸಿಕೊಳ್ಳಿ’ ಘೋಷಣೆಯೊಡನೆ ನಮ್ಮ ಹೆಣ್ಣು ಮಕ್ಕಳ ರಕ್ಷಣೆಯ ವಿಚಾರವನ್ನು ಮಹಾಪಂಚಾಯತ್ ಎತ್ತಿ ಹೇಳಿತು.

ಶವ ಯಾತ್ರೆಯಿಂದ ಹಿಂತಿರುಗಿದವರಂತೆಯೇ ಮಹಾಪಂಚಾಯತ್ ನಿಂದ ಹಿಂತಿರುಗುವವರೂ ದಾರಿಯಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕಿಳಿದರು. ಹಿಂಸೆಯನ್ನು ಎದುರಿಸಲು ಮುಸ್ಲಿಮರು ಆಗ ತಮ್ಮದೇ ಪಂಚಾಯತ್ ಗಳನ್ನು ನಡೆಸಿದರು. ಮುಂದಿನ ಕೆಲ ದಿನಗಳ ಕಾಲ ಮುಜಾಫರ್ ನಗರ ಮತ್ತು ಹತ್ತಿರದ ಪ್ರದೇಶಗಳಲ್ಲೆಲ್ಲ ಕೋಮು ಗಲಭೆ ನಡೆಯಿತು. ಆಗಿನ ಸಮಾಜವಾದಿ ಪಕ್ಷದ ಸರಕಾರವು ಇದನ್ನು ಹತೋಟಿಗೆ ತರಲಾಗದೆ ಸೋತಿತು.

ವಿಶ್ವ ಹಿಂದೂ ಪರಿಷತ್ತಿನ ನಾಯಕ ಅಶೋಕ ಸಿಂಘಾಲ್ ಆಗ ಹಿಂಸಾಚಾರವನ್ನು ಸಮರ್ಥಿಸಿದರು. “ಯಾವಾಗ ಈ ಸಮಾಜವು ಲವ್ ಜಿಹಾದಿಗಳ ಕಾಟವನ್ನು ತಡೆಯುವುದು ಅಸಾಧ್ಯವಾಯಿತೊ ಆಗ ಮಹಾಪಂಚಾಯತ್ ನ ಸೊಸೆಯರು ಮತ್ತು ಮಗಳಂದಿರನ್ನು ರಕ್ಷಿಸಿಕೊಳ್ಳಿ ಎಂಬುದಕ್ಕೆ ಏನು ಅಗತ್ಯವೋ ಆ ಗೌರವ ರಕ್ಷಣೆಯಲ್ಲಿ ಹಿಂಸಾಚಾರ ಸಹಜ.” ಎಂದು ಫರ್ಮಾನು ಹೊರಡಿಸಿದರು.

ರಾಜಕೀಯ ಪರಿಣಾಮ

ಭಾರತದಲ್ಲಿ ಭಾರೀ ಬದಲಾವಣೆ ಮಾಡಿದವುಗಳಲ್ಲಿ ಒಂದು ಲವ್ ಜಿಹಾದ್ ಪ್ರಚಾರ. ಆಗ ಈ ಪ್ರದೇಶಕ್ಕೆ ಭೇಟಿ ನೀಡಿದ ಪತ್ರಕರ್ತರಿಗೆ ಪಶ್ಚಿಮ ಉತ್ತರ ಪ್ರದೇಶದ ಈ ಸುತ್ತಿನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳು ಕಣ್ಣಿಗೆ ರಾಚುವಂತೆ ಆಗಿದ್ದವು. ಹಿಂದೂಗಳ ಸಂಖ್ಯೆ ಅಧಿಕ ಇರುವ ಊರುಗಳಿಂದ ಮುಸ್ಲಿಮರು ಊರು ಬಿಟ್ಟು ಬೇರೆ ಕಡೆಗೆ ವಲಸೆ ಹೋಗಿದ್ದರು. ಹಾಗೆಯೇ ಮುಸ್ಲಿಮರೇ ಅಧಿಕವಿರುವ ಊರುಗಳಲ್ಲಿ ಒಂದಷ್ಟು ಹಿಂದೂಗಳು ಸಹ ಊರು ಬಿಟ್ಟು ಪಲಾಯನ ಮಾಡಿದ್ದರು. ಕವಲ್ ಮತ್ತು ಕೆಲವು ಊರುಗಳಲ್ಲಿ ಜಾಟ್ ಮತ್ತು ಸೈನಿಗಳು ಊರು ಬಿಟ್ಟ ಮುಸ್ಲಿಮರ ಆಸ್ತಿ ಮತ್ತು ವಸ್ತುಗಳನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈಗಲೂ ಸಾವಿರಾರು ಮುಸ್ಲಿಮರು ಪರಿಹಾರ ಕೇಂದ್ರಗಳಲ್ಲಿ ಇದ್ದಾರೆ.

ಇದರ ಪೂರ್ಣ ಲಾಭ ಪಡೆದ ಬಿಜೆಪಿಯು 2014ರ ಚುನಾವಣೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡಿತು. ಹಿಂದೆ ಇಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಈ ಪ್ರದೇಶದಲ್ಲಿ ಹೆಚ್ಚು ಬಲ ಪಡೆದಿದ್ದ ಚರಣ್ ಸಿಂಗ್ ಅವರ ಮಗ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳವು ನಿರ್ನಾಮವಾಗಿತ್ತು.

ಆರೆಸ್ಸೆಸ್ ಬೆಂಬಲದ ಪ್ರಚಾರ

ಮುಜಾಫರ್ ನಗರ ಕೋಮು ಗಲಭೆ ತಣ್ಣಗಾಗುವ ಕಾಲ. 2013ರ ಸೆಪ್ಟಂಬರ್ ನಲ್ಲಿ ಆರೆಸ್ಸೆಸ್ ಹೊಸ ಪ್ರಚಾರ ಸರಕೊಂದನ್ನು ಎಲ್ಲ ಪತ್ರಕರ್ತರಿಗೆ ಕಳುಹಿಸಿತು. ಕೆಲವು ಸಂಗತಿ, ಮುಸ್ಲಿಂ ಗಂಡು/ಹಿಂದೂ ಹೆಣ್ಣು ಎಂಬುದು ಅದರ ತಲೆಬರಹ. ಆ ಮಿಂಚಂಚೆಯಲ್ಲಿ ಹಿಂದೂ ಹೆಂಡತಿಯರನ್ನು ಹೊಂದಿರುವ 73 ಮುಸ್ಲಿಂ ಪುರುಷರ ಪಟ್ಟಿ ಇತ್ತು. ಆದರೆ ಎಲ್ಲೂ ಲವ್ ಜಿಹಾದ್ ಶಬ್ದ ಬಳಸಿರಲಿಲ್ಲ.

ಚಿತ್ರ ನಿರ್ದೇಶಕರಾದ ಕೆ. ಆಸಿಫ್, ಮುಜಾಫರ್ ಆಲಿ, ನಟರುಗಳಾದ ಶಾರೂಕ್ ಖಾನ್, ಅಮೀರ್ ಖಾನ್, ಹಿಂದೂಸ್ತಾನಿ ಸಂಗೀತ ದಿಗ್ಗಜರಾದ ಉಸ್ತಾದ್ ಆಲಿ ಅಕ್ಬರ್ ಖಾನ್, ಉಸ್ತಾದ್ ವಿಲಾಯತ್ ಖಾನ್ ಎಂದು ಹಿಂದೂ ಹೆಂಡತಿಯರನ್ನು ಹೊಂದಿದವರ ಹೆಸರು ಆ ಪಟ್ಟಿಯಲ್ಲಿ ಇತ್ತು.

“ಮರಾಠಿ ಬ್ರಾಹ್ಮಣರಾದ ಡಾಕ್ಟರ್/ಮಾಡೆಲ್ ಅದಿತಿ ಗೋವಿತ್ರಿಕರ್ ಡಾ. ಮುಪ್ಫಾಜಲ್ ಲಕ್ಡಾವಾಲಾರನ್ನು ಮದುವೆಯಾಗಿದ್ದಾರೆ. ಅವರು ಈಗ ಬೇರೆಯಾಗಿದ್ದಾರೆ. ಲಕ್ಡಾವಾಲಾರು ಈಗ ಮೇಜರ್ ಜನರಲ್ ಟಿ. ಕೆ. ಕೌಲ್ ಅವರ ಮಗಳು ಪ್ರಿಯಾಂಕಾರನ್ನು ಮದುವೆಯಾಗಿದ್ದಾರೆ.” ಇದೂ ಆ ಇಮೇಲ್ ನಲ್ಲಿ ಇತ್ತು.

ಇನ್ನೂ ಹೇಳಬೇಕೆಂದರೆ ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾರೆ. “ಕ್ಲಾಸಿಕಲ್ ಸಂಗೀತಗಾರ ಆಲಿ ಅಕ್ಬರ್ ಖಾನ್ ಹಲವಾರು ಬಾರಿ ಮದುವೆಯಾಗಿದ್ದಾರೆ. ಅವರ ಒಬ್ಬ ಮಡದಿ ರಾಜದುಲಾರಿ ದೇವಿ. ಅವರ ಮಗಳು ಅನೀಸಾ ಟೀವಿ ನಿರ್ಮಾಪಕ ರಾಜೀವ್ ಚೌಧರಿಯವರನ್ನು ವರಿಸಿದ್ದಾರೆ. ವಿಶೇಷವೆಂದರೆ ಅಲಿ ಅಕ್ಬರ್ ಮತ್ತು ಮುಸ್ಲಿಂ ಮಡದಿ ಜುಬೈದಾ ತಮ್ಮ ಮಕ್ಕಳಿಗೆ ಹಿಂದೂ ಹೆಸರು ಇಟ್ಟಿದ್ದಾರೆ. ಆಶಿಸ್, ಧ್ಯಾನೇಶ್, ಅಮ್ರೇಶ್, ಪ್ರಾಣೇಶ್. ಇವರಲ್ಲಿ ಆಶಿಸ್ ತನ್ನನ್ನು ಹಿಂದೂ ಎಂದು ಘೋಷಿಸಿಕೊಂಡು ಮುಸ್ಲಿಂ ಹೆಂಡತಿ ಫಿರೋಜಾ ದೆಹ್ಲವಿಯಿಂದ ಬೇರೆ ಆಗಿದ್ದಾರೆ. ಆಶಿಸ್ ರ ಮಕ್ಕಳು ಮಗ ಫರಾಜ್ ಮತ್ತು ಮಗಳು ನುಸ್ರತ್. ಧ್ಯಾನೇಶ್ ರ ಮಗಳು ಸಹನಾ ಗುಪ್ತ ಎನ್ನುವ ಹಿಂದೂವನ್ನು ಮದುವೆಯಾಗಿದ್ದಾರೆ. ಧ್ಯಾನೇಶ್ ರ ಮಗ ಶಿರಾಜ್ ಖಾನ್.”

“ಸಿಂಗರ್ ಸುನಿಧಿ ಚೌಹಾಣ್ 18ರ ಪ್ರಾಯದಲ್ಲಿ ಓಡಿ ಹೋಗಿ ನೃತ್ಯ ನಿರ್ದೇಶಕ ಅಹ್ಮದ್ ಖಾನ್ ರ ತಮ್ಮ ಬಾಬ್ಬಿ ಖಾನ್ ಜೊತೆ ಮದುವೆಯಾಗಿದ್ದಾರೆ. ಆಕೆಯ ಕುಟುಂಬ ಈ ಮದುವೆಯನ್ನು ಒಪ್ಪದೆ ಆಕೆಯನ್ನು ತ್ಯಜಿಸುವುದಾಗಿ ಹೇಳಿತ್ತು. ಆದರೆ ಒಂದೇ ವರುಷದಲ್ಲಿ ಮದುವೆ ಮುರಿದು ಆಕೆ ತವರಿಗೆ ವಾಪಾಸಾದಳು. ಈಗ ಆಕೆ ಹಿಂದೂ ಒಬ್ಬಳನ್ನು ಮದುವೆಯಾಗಿದ್ದಾಳೆ” ಹೀಗೆ ಪಟ್ಟಿ ಬೆಳೆದಿದೆ.

ಇವೆಲ್ಲ ಎಲ್ಲಿ ಮೊಳಕೆಯೊಡೆಯುತ್ತವೆ?

ಅಂದಿನಿಂದ ಸಂಘ ಪರಿವಾರವು ಲವ್ ಜಿಹಾದ್ ಎನ್ನುವುದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಂತ್ರಗಾರಿಕೆಯಿಂದ ಪ್ರಚಾರ ಮಾಡುತ್ತದೆ. ಮೂಲದಲ್ಲಿ ಈ ಶಬ್ದ ಹುಟ್ಟಿದ್ದು ಹಿಂದೂ ಜನ ಜಾಗೃತಿ ಸಮಿತಿಯವರ ಮೂಲಕ 2007ರಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಹಿಂದೂ ಜನಜಾಗೃತಿ ಸಮಿತಿಯು ಸನಾತನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿತ್ತು. ಸನಾತನ ಸಂಸ್ಥೆಯು ಗೋವಾ ಬಾಂಬ್ ಸ್ಫೋಟ, ಕಮ್ಯೂನಿಸ್ಟ್ ನಾಯಕ ಗೋವಿಂದ ಪನ್ಸಾರೆ, ವಿಚಾರವಾದಿ ನರೇಂದ್ರ ದಾಬೋಲ್ಕರ್, ಸಂಶೋಧಕ ಎಂ. ಎಂ. ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಕೊಲೆಗಳ ಆರೋಪ ಹೊತ್ತಿದೆ.

ಕರಾವಳಿಯಲ್ಲಿ ಪಬ್ ದಾಳಿ, ಅನೈತಿಕ ಪೋಲೀಸ್ ಗಿರಿಯಂಥ ಅಕ್ರಮಗಳಲ್ಲಿ ಹಿಂ.ಜ.ಸಮಿತಿ ಇತ್ತು. ಅನ್ಯ ಧರ್ಮೀಯ ದಂಪತಿಯರ ಮೇಲೆ ಮತ್ತು ಒಟ್ಟಿಗೆ ಹೋಗುವ ಅನ್ಯ ಮತೀಯರ ಮೇಲೆ ಹಿಂಸಾತ್ಮಕ ದಾಳಿ ಇದರ ಜಾಯಮಾನ. ಹಿಂಜಸವು ಮುಸ್ಲಿಂ ಯುವಕರನ್ನು ‘ಲೈಂಗಿಕ ತೋಳಗಳು’ ಎಂದು ಕರೆಯುತ್ತದೆ. ಅವರಿಂದ ಕರಾವಳಿಯಲ್ಲಿ ಈಗಾಗಲೇ 30,000 ಹಿಂದೂ ಹುಡುಗಿಯರ ಮತಾಂತರ ಆಗಿದೆ ಎಂದೂ ಅದು ಹೇಳುತ್ತದೆ. ಅದಕ್ಕೆ ಕಾರಣ ಲವ್ ಜಿಹಾದ್ ಎಂಬುದು ಅದರ ಆರೋಪ.

(ಕೃಪೆ: ದಿ ವೈರ್)

Join Whatsapp