ಬೆಂಗಳೂರು: ನೂರಕ್ಕೂ ಅಧಿಕ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಎಲ್ಲರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದೇನೆ. ಜತೆಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇನೆ. ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಕುರಿತು ಹೈಕಮಾಂಡ್ ನ ಎದುರು ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ. ನಂತರ ಹೈಕಮಾಂಡ್ ನಿಧಾರ ಕೈಗೊಳ್ಳುವುದು ಕಾಂಗ್ರೆಸ್ ಪಕ್ಷದ ಪದ್ಧತಿ ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನಾವು ಕೇವಲ ಶಿಫಾರಸು ಮಾಡುತ್ತೇವೆ. ಆದರೆ ಇಂತಹವರಿಗೆ ಟಿಕೆಟ್ ನೀಡಿ ಎಂದು ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಒಮ್ಮತದ ಶಿಫಾರಸು ಮಾಡಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವಿಬ್ಬರೂ ಕೂತು ಚರ್ಚೆ ಮಾಡಿ ಒಮ್ಮತದ ಶಿಫಾರಸು ಮಾಡಿದ್ದೇವೆ. ಸದ್ಯಕ್ಕೆ ಕೇವಲ ಎರಡು ಸ್ಥಾನಗಳಿಗೆ ಮಾತ್ರ ಅವಕಾಶವಿದ್ದು, ಎಷ್ಟು ಹೆಸರು ನೀಡಲು ಸಾಧ್ಯ? ನಾವು ಎಲ್ಲಾ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಶಿಫಾರಸು ಮಾಡಿದ್ದೇವೆ. ಮುಂದೆ ಕೇಂದ್ರ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದರು.
ರಾಜ್ಯಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯಸಭೆ ಚುನಾವಣೆ ಟಿಕೆಟ್ ವಿಚಾರದಲ್ಲಿ ವ್ಯಾಪಕ ಒತ್ತಡ ಇತ್ತು. ಈ ವಿಚಾರವನ್ನು ನಾವು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದು, ಯಾವ, ಯಾವ ಪಕ್ಷಗಳು ಎಷ್ಟು ಮತ ಹೊಂದಿವೆ ಎಂಬ ಮಾಹಿತಿ ನೀಡಿದ್ದೇವೆ. ಹೀಗಾಗಿ ಹೈಕಮಾಂಡ್ ಯಾವ ಸೂಚನೆ ನೀಡುತ್ತದೆ ಎಂಬುದನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೆಡಿಎಸ್ ಈಗಾಗಲೇ ತನ್ನ ನಿರ್ಧಾರ ತಿಳಿಸಿದ್ದು, ಬಿಜೆಪಿಯವರು ಎಷ್ಟು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂಬ ಲೆಕ್ಕಾಚಾರ ನೋಡಿ ನಾವು ಎಷ್ಟು ಜನರನ್ನು ಕಣಕ್ಕಿಳಿಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದು ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯದವರನ್ನೇ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಕುರಿತು ಉತ್ತರಿಸಿದ ಅವರು, ‘ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ನಾವು ಪಕ್ಷಕ್ಕೆ ಯಾವ ರೀತಿ ಅನುಕೂಲವಾಗುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದ್ದಾರೆ.