ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾದ 7 ಹೊಸ ವಿವಿಗಳ ವರದಿ ನೀಡಲು ಆದೇಶಿಸಿದ ಸರ್ಕಾರ

Prasthutha|

ಬೆಂಗಳೂರು: ರಾಜ್ಯದಲ್ಲಿ ಸ್ಥಾಪನೆಯಾಗಿರುವ 7 ವಿಶ್ವವಿದ್ಯಾಲಯಗಳ ಕುರಿತು ಕೂಡಲೇ ವರದಿ ನೀಡಲು ಸರಕಾರ ಆದೇಶಿಸಿದೆ. ಈ ವಿವಿಗಳ ಸ್ಥಾಪನೆಯ ಉದ್ದೇಶ ಮತ್ತು ಆದೇಶದಲ್ಲಿ ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸಿರುವ ಬಗ್ಗೆ ವಿಶ್ವವಿದ್ಯಾಲಯವಾರು ಪ್ರತ್ಯೇಕ ವರದಿ ನೀಡಬೇಕು ಎಂದು ಉನ್ನತ ಶಿಕ್ಷನ ಸಚಿವ ಡಾ. ಎಂ.ಸಿ. ಸುಧಾಕರ್ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

- Advertisement -

ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕಾದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ-2000, ಯುಜಿಸಿ, ಎಐಸಿಟಿಇ ಹಾಗೂ ಇನ್ನಿತರ ಅಪೆಕ್ಸ್ ಸಂಸ್ಥೆಗಳು ನಿಗದಿಪಡಿಸಿರುವ ಮಾನದಂಡಗಳು ಹಾಗೂ ಸರ್ಕಾರದ ಇತರೆ ನೀತಿ ನಿಯಮಗಳನ್ವಯ ಅವಶ್ಯವಿರುವ ಭೂಮಿ, ಮೂಲ ಸೌಕರ್ಯ, ಬೋಧಕ/ಬೋಧಕೇತರ ಸಿಬ್ಬಂದಿ ವಿವರ ಹಾಗೂ ಇವುಗಳಿಗೆ ತಗಲುವ ಅಂದಾಜು ವೆಚ್ಚವನ್ನು ನುರಿತ ಶಿಕ್ಷಣ ತಜ್ಞರ ಸಮಿತಿ ರಚಿಸಿ ವರದಿ ಪಡೆಯಬೇಕಾಗುತ್ತದೆ. ಇ‌ನ್ನಿತರ ನಿಬಂಧನೆಗಳೂ ಇವೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಮಾದರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ತಜ್ಞರು ನೀಡಿರುವ ಹಾಗೂ 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಹೊಸ 7 ವಿವಿಗಳ ಸ್ಥಾಪನೆಗೆ ವಿಧಿಸಿರುವ ಷರತ್ತುಗಳ ಅನ್ವಯ ವಿಶ್ವವಿದ್ಯಾಲಯವಾರು ಪರಾಮರ್ಶಿಸಿ, ಸಾಧಕ-ಬಾಧಕಗಳನ್ನು ಒಳಗೊಂಡ ವಿಸ್ತೃತ ವರದಿಯನ್ನು ಸಿದ್ಧಪಡಿಸಬೇಕು. ಮುಖ್ಯಮಂತ್ರಿ ಅವರ ಅವಗಾಹನೆಗೆ ಸಲ್ಲಿಸಬೇಕಾಗಿರುವ ಕಾರಣ ಕಡತವನ್ನು ಕೂಡಲೇ ಮಂಡಿಸುವಂತೆ ಸಚಿವರು ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.



Join Whatsapp