ಕಾಶಿ ವಿಶ್ವನಾಥ ದೇವಾಲಯದ ಬಳಿಯಿರುವ ಗ್ಯಾನ್ ವಾಪಿ ಮಸೀದಿಯ ಬಳಿಕ ಇದೀಗ ಸಂಘಪರಿವಾರ ಆಗ್ರಾದ ಜಹನಾರಾ ಮಸೀದಿಯನ್ನೂ ಗುರಿಯಾಗಿಸಿದೆ. ಮಸೀದಿಯ ತಳಹದಿಯಲ್ಲಿ ಶ್ರೀಕೃಷ್ಣನ ವಿಗ್ರಹವಿದೆ.ಅದನ್ನು ಕಂಡುಹಿಡಿಯಲು ಅರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾದ(ASI) ಗ್ರೌಂಡ್ ರೇಡಿಯೋಲಜಿ ಸರ್ವೇ ನಡೆಸಬೇಕೆಂದು ಕೋರಿ ಭಗವಾನ್ ಶ್ರೀ ಕೃಷ್ಣ ವಿರಾಜ್ಮಾನ್ ಸಂಘಟನೆ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಸಂಘಟನೆಯ ಪರವಾಗಿ ವಕೀಲರಾದ ಶೈಲೇಂದರ್ ಸಿಂಗ್ ಮತ್ತು ಮನೀಶ್ ಯಾದವ್ ಅವರು ಅರ್ಜಿ ಸಲ್ಲಿಸಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬನು ಮಥುರಾದ ಜಮಾನ್ಸ್ಥಾನ್ ದೇವಾಲಯವನ್ನು ಧ್ವಂಸಗೊಳಿಸಿ ಶ್ರೀಕೃಷ್ಣನ ವಿಗ್ರಹವನ್ನು ಆಗ್ರಾಗೆ ತೆಗೆದುಕೊಂಡು ಹೋಗಿ ಜಹನಾರಾ ಮಸೀದಿಯಡಿಯಲ್ಲಿ ಹೂತಿಟ್ಟಿದ್ದಾನೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮಥುರಾದಲ್ಲಿರುವ ಕಾಶಿಯ ಗ್ಯಾನ್ವಾಪಿ ಮಸೀದಿಯನ್ನು ಧ್ವಂಸಗೊಳಿಸುವಂತೆ ಕೋರಿ ಶ್ರೀ ಕೃಷ್ಣ ವಿರಾಜ್ಮಾನ್ ಸಂಘಟನೆಯು ಈ ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಕಳೆದ ವಾರ ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಕಾಶಿಯ ಗ್ಯಾನ್ವಾಪಿ ಮಸೀದಿಯಲ್ಲಿ ASI ಸಮೀಕ್ಷೆಗೆ ಅನುಮತಿ ನೀಡಿತ್ತು. ಕಾಶಿ ದೇವಾಲಯವನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಹಲವಾರು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ತೀರ್ಪು 1991 ರ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆಗೆ ವಿರುದ್ಧವಾಗಿದೆ ಎಂದು ಸಂಘಟನೆಗಳು ಆರೋಪಿಸಿದೆ. 1947 ರಿಂದ ಅಸ್ತಿತ್ವದಲ್ಲಿರುವ ಆರಾಧನಾಲಯಗಳು ಅದೇ ಸ್ಥಳದಲ್ಲಿರಬೇಕು ಎಂದು ಕಾನೂನು ಷರತ್ತು ವಿಧಿಸುತ್ತದೆ.