ದ್ರಾವಿಡ ನೆಲದಲ್ಲಿ ಫಲಕೊಡದ ಹಿಂದುತ್ವ

Prasthutha|

-ಎನ್.ರವಿಕುಮಾರ್

- Advertisement -

ದ್ರಾವಿಡ ನೆಲ ತಮಿಳುನಾಡಿನಲ್ಲಿ ಈ ಬಾರಿ ನೆಲೆಯೂರಲೇಬೇಕೆಂದು ಶತಾಯಗತಾಯ ಪ್ರಯತ್ನ ನಡೆಸಿದ್ದ ಬಿಜೆಪಿಗೆ ಖ್ಯಾತ ತಮಿಳು ನಟರಾದ ವಿಜಯ್ ದಳಪತಿ, ವಿಜಯ್ ಸೇತುಪತಿ, ಅಜಿತ್ ಅವರು ಕೊಟ್ಟ ಹೊಡೆತಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಂಗಾಲಾಗಿ ಹೋಗುವಂತಾಗಿದೆ. ಈ ನಾಯಕ ನಟರು ರಾಜಕೀಯ ಪಕ್ಷಾಧಾರಿತವಾಗಿ ಮಾತಾಡಿದ್ದಲ್ಲ. ಈ ಹೊತ್ತಿನ ಭಾರತದ ರಾಜಕೀಯ ಪರಿಸ್ಥಿತಿಯನ್ನು ಹೇಗೆ ಅವಲೋಕಿಸಬೇಕು ಎಂಬುದನ್ನು ತಮ್ಮ ನಡೆಯ ಮೂಲಕ ಸಂದೇಶ ರವಾನಿಸುವ ಮೂಲಕ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದ್ದಾರೆ. ಇದು ಮಾತ್ರ ಬಿಜೆಪಿಗೆ ಅಸಹನೀಯವಾಗಿದೆ.

ತಮಿಳುನಾಡಿನ ಖ್ಯಾತ ನಟ ವಿಜಯ್ ದಳಪತಿ ತಮ್ಮ ಮನೆಯಿಂದ ಹತ್ತಿರವೇ ಇರುವ ನೀಲಾಂಗರೈನ ಮತಗಟ್ಟೆಗೆ ಮತದಾನ ಮಾಡಲು ತಮ್ಮ ನೆಚ್ಚಿನ ಸೈಕಲ್‌ ನಲ್ಲಿ ಬಂದರು. ಕ್ಷಣ ಮಾತ್ರದಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಯಿತು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳು ತಮ್ಮ ತಮ್ಮ ಜಾಲತಾಣಗಳಲ್ಲಿ ಎಕ್ಸ್ಲೂಸಿವ್ ಸುದ್ದಿಯಾಗಿ ಪ್ರಕಟಿಸಿದವು. ವಿಜಯ್ ಅವರ ಸೈಕಲ್ ಸವಾರಿ ಕ್ಷಣ ಮಾತ್ರದಲ್ಲಿ ರಾಜಕೀಯ ಬಿರುಗಾಳಿಯನ್ನೆ ಎಬ್ಬಿಸಿತು. ವಿಜಯ್‌ರ ಅಪಾರ ಅಭಿಮಾನಿಗಳು ತಮ್ಮ ನಾಯಕ ನಟನ ಈ ಸೈಕಲ್ ಸವಾರಿ ಬಿಜೆಪಿಗೆ ಕೊಟ್ಟ ‘ಮಾಸ್ಟರ್ ಸ್ಟ್ರೋಕ್’ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದರು. ವಿಜಯ್ ರೈಡ್ ಮಾಡಿದ ಸೈಕಲ್ ಕೆಂಪು ಮತ್ತು ಕಪ್ಪುಬಣ್ಣದಿಂದ ಕೂಡಿದ್ದರಿಂದ ಅವರು ಡಿಎಂಕೆ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ ಎಂಬಂತೆಯೂ ಡಿಎಂಕೆ ಸಿಕ್ಕ ಅವಕಾಶವನ್ನು ಲಾಭ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿತು. ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿಯ ಸೈಕಲ್ ಸವಾರಿ ಪ್ರಧಾನಿಯ 56 ಇಂಚು ಎದೆಯನ್ನು ನಡುಗಿಸಿಬಿಟ್ಟಿದೆ ಎಂದೇ ತಮಿಳುನಾಡಿನ ರಾಜಕೀಯ ತಜ್ಞರು ವಿಶ್ಲೇಷಿಸತೊಡಗಿದ್ದಾರೆ. ಅಂತಿಮವಾಗಿ ನಟ ವಿಜಯ್ ಅವರ ವಕ್ತಾರ ರಿಯಾಝ್ ಕೆ.ಅಹ್ಮದ್ ಅವರು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ವಿಜಯ್ ಅವರ ಮನೆಯ ಹಿಂಭಾಗದಲ್ಲಿರುವ ಮತದಾನ ಕೇಂದ್ರಕ್ಕೆ ಹೋಗುವ ರಸ್ತೆ ಕಿರಿದಾಗಿದ್ದು, ಪಾರ್ಕಿಂಗ್ ಮತ್ತು ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ವಿಜಯ್ ಅವರು ಸೈಕಲ್ ನಲ್ಲಿ ಮತದಾನಕ್ಕೆ ಹೋಗಿದ್ದಾರೆ. ಇದರಲ್ಲಿ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ತಮಿಳುನಾಡಿನ ರಾಜಕಾರಣದಲ್ಲಿ ನಟ ವಿಜಯ ದಳಪತಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಆರಂಭದಿಂದಲೂ ರಾಜಕೀಯ ಹೇಳಿಕೆಗಳಿಂದ ದೂರವೇ ಉಳಿದಿದ್ದಾರೆ. ಹೀಗಿರುವಾಗ ವಿಜಯ್ ಅವರ ಇವತ್ತಿನ ನಡೆ ಬಿಜೆಪಿ ವಿರುದ್ಧವಾಗಿತ್ತು ಎಂದು ವ್ಯಾಪಕ ಟ್ರೋಲ್‌ ಗೆ ತುತ್ತಾಗಲು ಕಾರಣವೂ ಇದೆ. ಅವರು ಸೈಕಲ್ ಮೇಲೆ ಬಂದಿದ್ದಕ್ಕೂ, ಡೀಸೆಲ್-ಪೆಟ್ರೋಲ್ ದರ ಏರಿಕೆಯಾಗಿರುವುದೂ ಕಾಕತಾಳೀಯವೆ. ಜೊತೆಗೆ ಅವರ ಸೈಕಲ್ ಬಣ್ಣ ಕಪ್ಪು-ಕೆಂಪಿನ ಕಾಂಬಿನೇಷನ್ ಹೊಂದಿರುವುದು ಕೂಡ.

ವಿಜಯ್ ಅವರ ಸೈಕಲ್ ಸವಾರಿ ಸಂದರ್ಭವನ್ನು ರಾಜಕೀಯ ವ್ಯಾಖ್ಯಾನಕ್ಕೆ ದಕ್ಕಿಸಿಕೊಂಡ ತಮಿಳುನಾಡಿಗೆ ಕಾರಣವೂ ಇದೆ. ಕಳೆದ ವರ್ಷವಷ್ಟೆ ರಿಲೀಸ್ ಆದ ವಿಜಯ್ ಅಭಿನಯದ ‘ಮರ್ಸೆಲ್’ ಸಿನಿಮಾ ತಮಿಳುನಾಡಿನ ಅಭಿಮಾನಿಗಳನ್ನಷ್ಟೆ ಅಲ್ಲ. ದೇಶಾದ್ಯಂತ ಚರ್ಚೆಗೆ ಕಾರಣವಾಯಿತು. ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಮಾಫಿಯಾ ವಿರುದ್ಧ ಹೋರಾಟದ ಕಥೆಯನ್ನೊಳಗೊಂಡ ಈ ಚಿತ್ರದಲ್ಲಿ ದೇಶದ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ. ಜಿಎಸ್ ಟಿ, ನೋಟು ಡಿಮಾನಿಟೈಸೇಷನ್ ಕ್ರಮಗಳ ನಿರರ್ಥಕತೆಯನ್ನು ಮತ್ತು ಹಿಂದುತ್ವದ ರಾಜಕೀಕರಣವನ್ನು ಪವರ್ ಫುಲ್ ಡೈಲಾಗ್ ಗಳಿಂದ ಪ್ರಶ್ನೆ ಮಾಡಿದಂತಿತ್ತು. ಈ ಚಿತ್ರವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಇದೇ ದಳಪತಿ ವಿಜಯ್ ಪ್ರವಾಹದಿಂದ ನಲುಗಿದ ಕೇರಳಕ್ಕೆ ಮಿಡಿದ ರೀತಿ ಸ್ಮರಣೀಯವಾದದ್ದು, ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 70 ಲಕ್ಷ ರೂ.ಗಳನ್ನು ನೀಡಿದರೆ. ಕೇರಳದ ತಮ್ಮ ಅಭಿಮಾನಿ ಸಂಘಟನೆಗಳ ಮೂಲಕ 10 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಅನ್ನ, ಆರೋಗ್ಯ, ಬಟ್ಟೆಯ ಸರಕುಗಳನ್ನು ಕೇರಳದ ಸಂತ್ರಸ್ತರಿಗೆ ಹಂಚಿದರು. ಇದನ್ನು ಸಹಿಸಿಕೊಳ್ಳದ ಬಿಜೆಪಿ ವಿಜಯ್ ಅವರ ಧರ್ಮವನ್ನು ಕೆದಕಿ ಕಿಡಿಗೇಡಿತನ ಬಯಲು ಮಾಡಿಕೊಂಡಿತು.

ವಿಜಯ್ ದಳಪತಿ ಕ್ರೈಸ್ತ ಧರ್ಮಕ್ಕೆ ಸೇರಿದವರು, ಹಿಂದೂ ವಿರೋಧಿ ಭಾವನೆ ಹೊಂದಿದ್ದಾರೆ ಎಂದ ತಮಿಳುನಾಡು ಬಿಜೆಪಿ ನಾಯಕ ಎ ರಾಜಾ ಎಂಬಾತ ವಿಜಯ ಮೂಲ ಹೆಸರು ‘ಜೋಸೆಫ್ ವಿಜಯ್ ಚಂದ್ರಶೇಖರ್’ ಎಂದಿದ್ದು ಅದನ್ನು ಮುಚ್ಚಿಟ್ಟಿದ್ದು ಏಕೆ ಎಂದು ಮಾನವೀಯ ನೆರವನ್ನು ಧರ್ಮದ್ವೇಷಕ್ಕೆ ಗುರಿಮಾಡುವ ನೀಚತನಕ್ಕಿಳಿದರು. ಇದೇ ಮಾನವೀಯ ಗುಣಗಳಿಂದ, ಸಂವೇದನಾಶೀಲ ಗುಣಗಳಿಂದ ಹಾಗೂ ತಮ್ಮ ನಟನಾ ಕೌಶಲ್ಯದಿಂದ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದ ವಿಜಯ್ ಅವರ ಮೇಲೆ ಬಿಜೆಪಿಯ ಈ ಕಿಡಿಗೇಡಿ ಅಸ್ತ್ರ ಪ್ರಯೋಗ ಯಾವುದೇ ಪರಿಣಾಮ ಬೀರಲಿಲ್ಲ. ಪೆರಿಯಾರ್ ಅವರ ವೈಚಾರಿಕ ಸಂಘರ್ಷದ ಅಸ್ಮಿತೆಯನ್ನು ಮತ್ತು ಅದೇ ಕಾಲಕ್ಕೆ ಧರ್ಮಸಹಿಷ್ಣುತೆಯನ್ನು ಉಳಿಸಿಕೊಂಡು ಪರಿಪಾಲಿಸಿಕೊಂಡೇ ಬರುತ್ತಿರುವ ದ್ರಾವಿಡ ಸಮುದಾಯ ಆರ್ಯಸಿದ್ಧಾಂತ ಪ್ರೇರಿತ ಬಿಜೆಪಿಯ ಈ ಕುತಂತ್ರಕ್ಕೆ ಸೊಪ್ಪು ಹಾಕಲಿಲ್ಲ.

ಇದೇ ವಿಜಯ್ ಅವರು ಕೋವಿಡ್ ವಿರುದ್ಧದ ಹೋರಾಟಕ್ಕಾಗಿ 1.30 ಕೋಟಿ ರೂ.ಗಳನ್ನು ಉದಾತ್ತವಾಗಿ ದೇಣಿಗೆ ನೀಡಿ ಮಾನವೀಯತೆಯನ್ನು ಮೆರೆದರು. ಭಾರತದ ಯಾವ ನಟನೂ ಇಷ್ಟೊಂದು ಬೃಹತ್ ಮೊತ್ತವನ್ನು ಸಂಕಷ್ಟ ಕಾಲಕ್ಕೆ ನೀಡಿದ ಉದಾಹರಣೆಗಳಿಲ್ಲ. ಕೋವಿಡ್ ಕಾಲದಲ್ಲಿ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದರೆ, 25 ಲಕ್ಷ ರೂ.ಗಳನ್ನು ತಮಿಳುನಾಡಿನ ಮುಖ್ಯಮಂತ್ರಿಗಳ ಪರಿಹಾರ ನಿಧಿ, 10 ಲಕ್ಷ ರೂ.ಗಳನ್ನು ಕೇರಳಕ್ಕೆ, ಕರ್ನಾಟಕ, ಆಂಧ್ರ, ತೆಲಂಗಾಣ, ಪಾಂಡಿಚೆರಿ ರಾಜ್ಯಗಳಿಗೂ ತಲಾ 5 ಲಕ್ಷ ರೂ.ಗಳನ್ನು ನೀಡಿದ ವಿಜಯ್ ದಕ್ಷಿಣ ಭಾರತೀಯ ಚಿತ್ರರಂಗದ ನೌಕರರ ಸಂಘಕ್ಕೆ 25 ಲಕ್ಷ ರೂ.ಗಳನ್ನು ನೀಡುವ ಮೂಲಕ ಸಿನಿಮಾ ಕಾರ್ಮಿಕರ ತುತ್ತಿಗೆ ನೆರವಾದರು. ಭಾರತೀಯ ಚಿತ್ರರಂಗದ ಯಾವೊಬ್ಬ ನಾಯಕ ನಟರಾಗಲಿ, ವಿಜಯ್ ಅವರ ಧರ್ಮವನ್ನು ಪ್ರಶ್ನಿಸುವ ದೇಶಭಕ್ತರಾದ ನಾಯಕರು ವಿಜಯ್ ಅವರ ಸಮಕ್ಕೂ ಬರಲಿಲ್ಲ. ಕಳೆದ ವರ್ಷ ನಟ ವಿಜಯ್ ಮತ್ತು ಇನ್ನೋರ್ವ ಖ್ಯಾತ ನಟ ಅಜಿತ್ ಅವರ ಮನೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಯಿತು. ವಿಜಯ್ ಮನೆಯಲ್ಲಿ ಏನೂ ಸಿಗಲಿಲ್ಲವೆಂದು ಆದಾಯ ಇಲಾಖೆ ಅಧಿಕಾರಿಗಳು ಬರಿಗೈಲಿ ಹಿಂದಿರುಗಿದರು. ಇದು ಬಿಜೆಪಿ ವಿಜಯ್ ಅವರನ್ನು ಗುರಿಯಾಗಿಸಿಕೊಂಡೆ ಮಾಡಿದೆ ಎಂದು ಅಭಿಮಾನಿಗಳು ತಿರುಗಿ ಬಿದ್ದರು. ವಿಜಯ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷಗಳು ನಡೆದವು. ನೈವೇಲಿಯಲ್ಲಿ ವಿಜಯ್ ಅವರ ‘ಮಾಸ್ಟರ್’ ಸಿನಿಮಾದ ಚಿತ್ರೀಕರಣದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿ ಅಡ್ಡಿ ಪಡಿಸಿದರು. ಆದರೆ ತಲೈವ ವಿಜಯ್ ತುಟಿ ಬಿಚ್ಚದೆ ನುಂಗಿಕೊಂಡಿದ್ದರು.

ತಮಿಳುನಾಡಿನ ಇನ್ನೋರ್ವ ಖ್ಯಾತ ನಟ, ನಿರ್ದೇಶಕ, ಸಾಹಿತಿ ಹಾಗೂ ಮುಖ್ಯಧಾರೆಯ ಕಥಾ ಹಂದರ ಚಿತ್ರಗಳಿಂದಲೇ ಜನರನ್ನು ಸೆಳೆದಿರುವ ವಿಜಯ್ ಸೇತುಪತಿ ತಮಿಳುನಾಡಿನ ಬಹುತ್ವವನ್ನು ಉಳಿಸಿಕೊಳ್ಳುವಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದರು. ಚುನಾವಣೆಯಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತ ಕೇಳುವವರಿಗೆ ನನ್ನ ಮತವಿಲ್ಲ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಕೊಡಬೇಕಾದ ಸಂದೇಶವನ್ನು ಕೊಟ್ಟರು.

ವಿಜಯ್ ದಳಪತಿ ಅವರ ಮನೆ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲೇ ನಟ ಅಜಿತ್ ಅವರ ಮನೆಯ ಮೇಲೆ ಐಟಿ ರೈಡ್ ನಡೆದಿತ್ತು. ದೊಡ್ಡ ದೊಡ್ಡ ಬಂಡವಾಳಶಾಹಿಗಳ ಮನೆಗಳ ಮೇಲೆ ದಾಳಿ ನಡೆಸದೆ, ಕಲಾವಿದರ ಮನೆಗಳ ಮೇಲೆ ದಾಳಿ ಏಕೆ ಎಂದು ಅವತ್ತೇ ಅಜಿತ್ ಕೇಂದ್ರ ಸರಕಾರದ ಧೋರಣೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು.

ಅಜಿತ್ ಇವತ್ತು ಮತದಾನದ ಸಾಲಿನಲ್ಲಿ ಕೆಂಪು ದಾರವುಳ್ಳ ಕಪ್ಪುಬಣ್ಣದ ಮಾಸ್ಕ್ ಧರಿಸಿ ನಿಂತಿದ್ದು ವ್ಯಾಪಕವಾಗಿ ಅವರ ಅಭಿಮಾನಿಗಳಿಗೆ ತಲುಪಿಸಬೇಕಾದ ಸಂದೇಶವನ್ನು ತಲುಪಿಸಿತು. ನಟರ ಈ ನಡೆಯನ್ನು ನಿಜವಾದ ದೇಶಪ್ರೇಮ, ಸಾಮಾಜಿಕ ಹೊಣೆಗಾರಿಕೆ ಎಂದೆಲ್ಲಾ ವ್ಯಾಖ್ಯಾನಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕನಸಿನ ಮಾತೇ ಸರಿ. ಅದು ಬಿಜೆಪಿಗೂ ಗೊತ್ತಿದೆ. ಆದರೆ ತಮಿಳುನಾಡಿನಲ್ಲಿ ತಾವು ಹೇಳಿದಂತೆ ಕೇಳುವ ಸರಕಾರವೊಂದು ಬಂದರೆ ಸಾಕು ಎಂದು ಬಯಸುತ್ತಿರುವ ಬಿಜೆಪಿ ಖ್ಯಾತ ನಟ ರಜನಿಕಾಂತ್‌ಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ದಯಪಾಲಿಸಿತ್ತು. ಇದರಿಂದಾಗುವ ಲಾಭದ ನಿರೀಕ್ಷೆಯಲ್ಲಿರುವಾಗಲೆ ವಿಜಯ್ ದಳಪತಿ, ವಿಜಯ್ ಸೇತುಪತಿ, ಅಜಿತ್ ಎಂಬ ನಟರು ತಮಿಳುನಾಡಿನ ಮತದಾರರಿಗೆ ಕೊಡಬೇಕಾದ ಸಂದೇಶವನ್ನು ನಿಖರವಾಗಿ ಕೊಟ್ಟು ಬಿಜೆಪಿಯ ಆಸೆಗೆ ತಣ್ಣೀರೆರಚಿದ್ದಾರೆ. ಈ ನಟರ ಒಂದು ಮಾತು, ಒಂದು ಸೈಕಲ್ ಸವಾರಿ, ಧರಿಸಿದ ಮಾಸ್ಕ್‌ ನ ಬಣ್ಣ ಕೂಡ ಎಷ್ಟೆಲ್ಲಾ ರಾಜಕೀಯ ಮಾತಾಡುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿ.

ಈ ದೇಶದ ಒಟ್ಟಾರೆ ರಾಜಕಾರಣವನ್ನು ಅವಲೋಕಿಸುವಾಗ ಇತರೆ ಎಲ್ಲಾ ರಾಜ್ಯಗಳ ರಾಜಕೀಯ ಒಂದು ಕಡೆಯಾದರೆ ತಮಿಳುನಾಡಿನ ರಾಜಕೀಯವೇ ಮತ್ತೊಂದು ಕಡೆ ಇಟ್ಟು ನೋಡಬೇಕಾಗುತ್ತದೆ. ಸ್ವಾತಂತ್ರ್ಯ ಬಂದ ಮೊದಲ 20 ವರ್ಷಗಳ ಕಾಲ ಕಾಂಗ್ರೆಸ್‌ ನ ಹಿಡಿತದಲ್ಲಿದ್ದ ತಮಿಳುನಾಡು 1967ರ ನಂತರದಿಂದ ಇಂದಿನ ವರೆಗೂ ಪ್ರಾದೇಶಿಕ ಪಕ್ಷಗಳದ್ದೇ ಪಾರಮ್ಯ, ತಾನೊಂದು ರಾಷ್ಟ್ರೀಯ ಪಕ್ಷವೆಂಬ ಕಾಂಗ್ರೆಸ್‌ ನ ಅಹಂಕಾರವನ್ನು ಮುರಿದು ಮೂಲೆಗಟ್ಟಿದ ತಮಿಳರು, ತಮಿಳು ರಾಷ್ಟ್ರೀಯವಾದವನ್ನು, ದ್ರಾವಿಡ ಅಸ್ಮಿತೆಯನ್ನು ಪ್ರಖರವಾಗಿ ಈ ಹೊತ್ತಿಗೂ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಚಳವಳಿ-ಸಿನಿಮಾ ಮತ್ತು ರಾಜಕೀಯ ಒಂದಕ್ಕೊಂದು ಬಿಡಿಸಲಾರದ ನಂಟು. ವೈದಿಕ ಧರ್ಮದ ವಿರುದ್ಧ ತೀವ್ರಗಾಮಿ ಪರಿಯಾರ್ ಚಳವಳಿಯ ಗಟ್ಟಿ ನೆಲವಾದ ತಮಿಳುನಾಡಿನಲ್ಲಿ ಪರಿಯಾರ್ ಅವರ ಪ್ರಗತಿಪರ ಸಿದ್ಧಾಂತ ಪ್ರೇರಿತವಾದ ರಾಜಕೀಯವನ್ನು ಮುನ್ನಡೆಸಲು ಹುಟ್ಟಿಕೊಂಡಿದ್ದೆ ದ್ರಾವಿಡ ಮುನ್ನೆತ್ರ ಕಳಗಂ(ಡಿಎಂಕೆ), ಡಿಎಂಕೆ ಒಡೆದು ಹೋಳಾಗಿ ಎಐಎಡಿಎಂಕೆ(ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಮೈತಳೆದು ಎಂ.ಜಿ.ರಾಮಚಂದ್ರ ಎಂಬ ಸೂಪರ್ ಸ್ಟಾರ್ ನಟನ ನಾಯಕತ್ವವನ್ನು ಕಂಡಿತು. ಡಿಎಂಕೆಯ ಕರುಣಾನಿಧಿ ಕೂಡ ಚಿತ್ರಸಾಹಿತಿಯಾಗಿದ್ದವರು, ಎಂ.ಜಿ ಆರ್, ಜಯಲಲಿತಾ, ಈಗ ರಾಜಕೀಯವಾಗಿರುವ ವಿಜಯಕಾಂತ್, ಕಮಲ್ ಹಾಸನ್ ಅವರೆಲ್ಲಾ ತಮ್ಮ ಸಿನಿಮಾ ಜೀವನದ ಮೂಲಕವೇ ತಮಿಳುನಾಡಿನ ಅಭಿಮಾನಿಗಳಿಗೆ ಆರಾಧ್ಯ ದೈವದಂತೆ ಕಂಡವರು. ಇಲ್ಲಿ ರಾಷ್ಟ್ರೀಯ ಪಕ್ಷಗಳ ದೊಡ್ಡಾಟಕ್ಕೆ ಜಾಗವಿಲ್ಲ.

ತಮಿಳುನಾಡಿನ ರಾಜಕೀಯ ಪಕ್ಷಗಳಲ್ಲಿ ಎಷ್ಟೇ ರಾಜಕೀಯ ಅಧಿಕಾರ ಪೈಪೋಟಿ ಇದ್ದರೂ ತಮಿಳು ಸಂಸ್ಕೃತಿ, ಸ್ವಾಭಿಮಾನವನ್ನು ಅವರು ಬಿಟ್ಟುಕೊಡುವುದಿಲ್ಲ. ಧರ್ಮಸಹಿಷ್ಣುತೆ, ಅಸ್ಪೃಶ್ಯತೆ, ಸಮಾನತೆ, ಶಿಕ್ಷಣ ಇವುಗಳ ವಿಷಯ ಬಂದಾಗ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಒಂದೇ ದನಿಯಲ್ಲಿ ಮಾತಾಡುತ್ತವೆ. ಇಲ್ಲಿನ ಸಿನಿಮಾಗಳು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಲಯಗಳ ಅವ್ಯವಸ್ಥೆ ಮತ್ತು ಕಪಟತನಗಳ ಬಗ್ಗೆ ಮಾತನಾಡುತ್ತವೆ. ರಂಜನೆ, ಬೋಧನೆ ಮತ್ತು ವ್ಯವಹಾರ ಎಂಬ ಸಿದ್ಧ ಮಾದರಿಗಳನ್ನು ನುಚ್ಚು ನೂರು ಮಾಡುವ ಇಲ್ಲಿನ ಚಿತ್ರರಂಗ ಭಾರತೀಯ ಚಿತ್ರರಂಗಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿನ ನಟರು ಬಂಡಾಯ ದನಿಯಾಗಿ ಕಾಣುತ್ತಾರೆ. ತಮಿಳು ಸಿನಿಮಾ ಇಂಡಸ್ಟ್ರಿ ಕೇವಲ ಅನ್ನದ ಪ್ರಶ್ನೆಯಾಗಿ ಇಲ್ಲಿ ಉಳಿದಿಲ್ಲ. ವೈಚಾರಿಕ ಎಚ್ಚರವನ್ನು ಕಾಯ್ದುಕೊಳ್ಳುವ ಮಾಧ್ಯಮವಾಗಿ ಮುನ್ನೆಡೆದಿದೆ. ತಮಿಳುನಾಡಿನಲ್ಲಿದ್ದ ಜಾತಿ, ಧರ್ಮಾಧಾರಿತ ಕನ್ಸರ್ವೇಟಿವ್ ಕಲ್ಚರ್ ಮತ್ತು ಸಿದ್ದಮಾದರಿಯ ಸಾಮಾಜಿಕ ಆಚರಣೆಗಳನ್ನು ಒಡೆದು ನುಚ್ಚುನೂರು ಮಾಡಿ ಪ್ರಗತಿಪರ, ಜೀವಪರ, ಧರ್ಮ ಸಹಿಷ್ಣುತೆಯ ಬೀಜತತ್ವ ಪ್ರತಿಪಾದನೆಯನ್ನು ಸಾಮಾಜಿಕ ಹೊಣೆಗಾರಿಕೆಯಂತೆ ನಿರ್ವಹಿಸಿದವರಲ್ಲಿ ಕೆ.ಬಾಲಚಂದರ್, ಮಣಿರತ್ನಂ, ಪ.ರಂಜಿತ್, ಕಮಲ್ ಹಾಸನ್, ದಳಪತಿ ವಿಜಯ್, ಸೇತುಪತಿ ವಿಜಯ್, ಪಾರ್ಥಿಬನ್, ಸುಶೀಂಥರನ್ ಇತ್ತೀಚೆಗಿನ ಶಶಿಕುಮಾರ್ ನಂತಹ ನಟ, ನಿರ್ದೇಶಕರನ್ನು ಕೊಟ್ಟ ಹೆಗ್ಗಳಿಕೆ ತಮಿಳುನಾಡಿನದ್ದು, ಅಧಿಕಾರಕ್ಕಾಗಿ ಧರ್ಮ, ದೇವರು,ದೇಶಭಕ್ತಿಯನ್ನು ಮಾರ್ಕೆಟಿಂಗ್ ಮಾಡುವವರಿಗೆ ಅಷ್ಟು ಸುಲಭವಾಗಿ ಈ ನೆಲ ದಕ್ಕುವುದಿಲ್ಲ ಎಂಬುದು ಭದ್ರವಾಗಿರುವ ಮತಪೆಟ್ಟಿಗೆಗಳಲ್ಲಿ ಕಾಣುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ್ರೋಹಿ ಎಂಬ ವಧಾಸ್ಥಾನದಲ್ಲಿ ಕಟ್ಟಿರುವಾಗ ಪ್ರತಿಭಟನೆ, ಪ್ರತಿರೋಧಗಳು ಸೈಕಲ್ ಸವಾರಿಯಾಗಿಯೂ, ಮಾಸ್ಕ್ ರೂಪದಲ್ಲೂ ವ್ಯಕ್ತವಾಗಬಹುದು.

Join Whatsapp