ನವದೆಹಲಿ: ಅಪರಾಧ ಕಾರ್ಯವಿಧಾನ ಗುರುತಿಸುವಿಕೆ (Criminal Procedure Identification) ಮಸೂದೆ-2022 ರ ಅಂಗೀಕಾರದ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷರಾದ ಒ.ಎಂ.ಎ ಸಲಾಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ಧ್ವನಿ ಮತಗಳ ಮೂಲಕ ಮಸೂದೆಯ ಅಂಗೀಕರಿಸಿರುವುದು ಗಂಭೀರ ಮತ್ತು ಕಳವಳಕಾರಿ ವಿಷಯವಾಗಿದೆ. ಬಂಧಿತ ಅಪರಾಧಿ ಅಥವಾ ಬಂಧಿಸಲ್ಪಡುವ ವ್ಯಕ್ತಿಗಳ ಕಣ್ಣಿನ ರೆಟಿನಾ ಮತ್ತು ಐರಿಸ್ ಸ್ಕ್ಯಾನ್ ಸೇರಿದಂತೆ ಭೌತಿಕ ಮತ್ತು ಜೈವಿಕ ಮಾದರಿಗಳನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಪೊಲೀಸ್ ಅಥವಾ ಜೈಲು ಅಧಿಕಾರಿಗಳಿಗೆ ಅವಕಾಶ ನೀಡುವುದು ಎಲ್ಲಾ ಪ್ರಕಾರದ ದುರುಪಯೋಗಕ್ಕೆ ಬಾಗಿಲು ತೆರೆದಂತಾಗಿದೆ. ಇದು ಕಾನೂನು ಜಾರಿ ಅಧಿಕಾರಿಗಳಿಗೆ ತಮಗೆ ಸೂಕ್ತವೆನಿಸುವ ಕಾನೂನನ್ನು ಅರ್ಥೈಸುವ ಅಧಿಕಾರವನ್ನು ಒದಗಿಸುತ್ತದೆ ಮತ್ತು ಅತ್ಯಂತ ಸಡಿಲತೆಯಿಂದ ಕೂಡಿದ್ದಾಗಿದೆ. ಈ ಮಸೂದೆಯು ಇಪ್ಪತ್ತೊಂದನೇ ಶತಮಾನದ ಮತ್ತೊಂದು ಕಠಿಣ ಕಾನೂನಾಗಿ ಬದಲಾಗುವ ಸಾಧ್ಯತೆಯಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಪ್ರತಿಪಕ್ಷಗಳು ಎತ್ತಿರುವ ಕಳವಳಗಳನ್ನು ಪರಿಹರಿಸದೆ ಈ ಮಸೂದೆಯನ್ನು ಅಂಗೀಕರಿಸಿರುವುದು ಆಡಳಿತ ಬಿಜೆಪಿ ಸರ್ಕಾರದ ನಿರಂಕುಶ ಪ್ರಭುತ್ವವನ್ನು ಎತ್ತಿ ತೋರಿಸುತ್ತದೆ ಎಂದು ಸಲಾಂ ಆರೋಪಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಗೆ ವಿವರಗಳನ್ನು (ಡೇಟಾ) ಕೂಡಿಹಾಕಿ ಸಂಗ್ರಹಿಸಿಡಲು ಅಧಿಕಾರವನ್ನು ನೀಡಿರುವುದು ಸಂವಿಧಾನದ ಅಡಿಯಲ್ಲಿ ಒದಗಿಸಲಾದ ಪ್ರತ್ಯೇಕತೆಯ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಮಸೂದೆಯು ಸಾಂವಿಧಾನಿಕ ನಿಬಂಧನೆಗಳಿಗೆ ಅಡ್ಡಿಪಡಿಸುತ್ತದೆ, ಆ ಮೂಲಕ ಪ್ರಜಾಪ್ರಭುತ್ವ ದೇಶವನ್ನು ನಿರೀಕ್ಷಣಾ ಕೇಂದ್ರವಾಗಿ ಪರಿವರ್ತಿಸುತ್ತದೆ. ಆಡಳಿತ ಪಕ್ಷಗಳು ಈ ಮಸೂದೆಯನ್ನು ನ್ಯಾಯಸಮ್ಮತ ರೀತಿಯಲ್ಲಿ ಸರಕಾರಿ ವಿರೋಧಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದಕ್ಕಾಗಿ ಬಳಸಿಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಸೂದೆಯು ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿರುವುದರಿಂದ ನ್ಯಾಯಾಂಗದ ಮಧ್ಯಸ್ಥಿಕೆಗಾಗಿ ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ. ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದಂತೆ ಮಸೂದೆಯು ಸಂವಿಧಾನದ ಮೌಲ್ಯಗಳನ್ನು ಒಳಗೊಂಡಿಲ್ಲ. ಆತುರತೆಯಿಂದ ಅಂಗೀಕರಿಸಿದ ಈ ಮಸೂದೆಯು ಅಸಂವಿಧಾನಿಕ ಮತ್ತು ಅಮಾನವೀಯವಾಗಿದ್ದು ಪ್ರಜ್ಞಾವಂತ ನಾಗರೀಕರು ಪ್ರತಿಭಟನೆಗೆ ಮುಂದಾಗಬೇಕಾಗಿದೆ ಎಂದು ಒ ಎಂ ಎ ಸಲಾಂ ಕರೆ ನೀಡಿದ್ದಾರೆ.