ಕೋಟ್ಯಂತರ ಕಾರ್ಯಕರ್ತರ ಬಲವಿರುವ ಕಾಂಗ್ರೆಸ್ ಗೆ ಒಬ್ಬ ನಾಯಕನ ನಿರ್ಗಮನ ಯಾವ ಪರಿಣಾಮವನ್ನೂ ಬೀರದು

Prasthutha|

ಗುಲಾಂ ನಬಿ ಆಝಾದ್ ರಾಜೀನಾಮೆಗೆ ಸಿದ್ದು ಪ್ರತಿಕ್ರಿಯೆ

- Advertisement -

ಬೆಂಗಳೂರು: ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮೇಲೆ ಒಬ್ಬ ನಾಯಕರ ನಿರ್ಗಮನ ಯಾವ ಪರಿಣಾಮವನ್ನು ಬೀರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗುಲಾಂ ನಬಿ ಆಝಾದ್ ರಾಜೀನಾಮೆ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಒಬ್ಬ ವ್ಯಕ್ತಿಯ ನಿರ್ಗಮನದಿಂದ ವಿಚಲಿತರಾಗದೆ ದೇಶ ಉಳಿಸುವ ಕರ್ತವ್ಯವನ್ನು ಜವಾಬ್ದಾರಿಯಿಂದ, ಸಂಘಟಿತರಾಗಿ ನಿಭಾಯಿಸಲು ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಕಟಿಬದ್ಧರಾಗಬೇಕೆಂದು ಮನವಿ ಮಾಡಿದ್ದಾರೆ.

ಗುಲಾಂ ನಬೀ ಆಜಾದ್ ಅವರು ರಾಜೀನಾಮೆ ನೀಡಿರುವ ಹೊತ್ತು ಹಾಗೂ ಅವರ ರಾಜೀನಾಮೆ ಪತ್ರದ ಒಕ್ಕಣೆಯನ್ನು ನೋಡಿದರೆ ತಮಗೆ ಆಗಿರುವ ನೋವನ್ನು ವ್ಯಕ್ತಪಡಿಸುವ ಸದುದ್ದೇಶಕ್ಕಿಂತಲೂ, ನಮ್ಮ ಪ್ರಮುಖ ಎದುರಾಳಿ ಪಕ್ಷವನ್ನು ಖುಷಿಪಡಿಸುವ ದುರುದ್ದೇಶ ಇದ್ದಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

- Advertisement -

ಇಂದಿರಾಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ನಾಲ್ವರು ಪ್ರಧಾನಿಗಳ ಸಂಪುಟದಲ್ಲಿ ದೀರ್ಘಕಾಲ ಸಚಿವರಾಗಿದ್ದ ಆಜಾದ್ ಅವರು ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಪಕ್ಷದ ವಿವಿಧ ಘಟಕಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿದ್ದವರು. ಇನ್ನೇನು ಬೇಕಿತ್ತು ಅವರಿಗೆ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ 50 ವರ್ಷಗಳ ಕಾಲ ಪಕ್ಷದಿಂದಲೇ ಅಧಿಕಾರ-ಅವಕಾಶಗಳನ್ನು ಪಡೆದ ಆಜಾದ್ ಉಂಡ ಮನೆಗೆ ಎರಡು ಬಗೆಯಬಾರದಿತ್ತು ಎಂದಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಗುಲಾಂ ನಬಿ ಮಾಡಿರುವ ಆರೋಪಗಳನ್ನು ಕಟು ಶಬ್ದಗಳಲ್ಲಿ ಟೀಕಿಸಿರುವ ಸಿದ್ದರಾಮಯ್ಯ, ರಾಹುಲ್ ನಡೆ ಬದಲಾದ ಸನ್ನಿವೇಷದ ಅಗತ್ಯವಾಗಿದೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

Join Whatsapp