ಕಲಬುರಗಿ: ಕಳೆದ ಮೂರು ತಿಂಗಳಿನಿಂದ ಸಿಐಡಿ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಪಿಎಸ್ ಐ ಪರೀಕ್ಷೆ ಅಕ್ರಮದ ಮತ್ತೋರ್ವ ಮಹಿಳಾ ಆರೋಪಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ರಚನಾ ಹನುಮಂತ ಮುತ್ತಲಗೇರಿ(25) ಬಂಧಿತ ಆರೋಪಿ.
ಸಿಐಡಿ ತನಿಖೆ ವೇಳೆ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ನಲ್ಲಿ ವ್ಯತ್ಯಾಸ ಕಂಡುಬಂದು ತನ್ನ ವಿರುದ್ಧ ಬೆಂಗಳೂರು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎಂಬ ಸುಳಿವು ಸಿಗುತ್ತಿದ್ದಂತೆ ರಚನಾ ನಾಪತ್ತೆಯಾಗಿದ್ದಳು. ಮೂರು ತಿಂಗಳಿಂದ ಸತತವಾಗಿ ಸ್ಥಳ ಬದಲಾವಣೆ ಮಾಡಿಕೊಂಡು ತೆಲೆ ಮರೆಸಿಕೊಂಡಿದ್ದ ರಚನಾಗಾಗಿ ಬೆಂಗಳೂರು, ಕಲಬುರಗಿ ಸಿಐಡಿ ಅಧಿಕಾರಿಗಳು ನಿರಂತರವಾಗಿ ಹುಡುಕಾಟ ನಡೆಸಿದ್ದರು. ನಿನ್ನೆ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದ ತಂಡ ರಚನಾಳನ್ನು ವಶಕ್ಕೆ ಪಡೆದಿದ್ದಾರೆ.