ಮುಖ್ಯಮಂತ್ರಿಯವರ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | ಎಸ್.ಡಿ.ಪಿ.ಐ

Prasthutha|

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂದು ಹೇಳುವ ಮೂಲಕ ವ್ಯಾಪಕವಾಗಿರುವ ಅನೈತಿಕ ಪೊಲೀಸ್ ಗಿರಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಮತ್ತು ಅವರ ಈ ಧೋರಣೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದ್ದಾರೆ.

- Advertisement -

ಸಂಘಪರಿವಾರದ ಗೂಂಡಾಗಳು ಕ್ಷುಲ್ಲಕ ನೆಪ ವೊಡ್ಡಿ ಮುಸ್ಲಿಮ್ ಯುವಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಅರ್ಬಾಝ್ ಹತ್ಯೆಯ ನಂತರ ಬಾಗಲಕೋಟೆಯಲ್ಲೂ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇಂತಹ ಸರಣಿ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿಯವರು ದುಷ್ಕರ್ಮಿಗಳಿಗೆ ಪ್ರಚೋದಿಸುವ ಮತ್ತು ಅಭಯ ನೀಡುವ ಹೇಳಿಕೆ ನೀಡಿರುವುದು ವಿಪರ್ಯಾಸವಾಗಿದೆ. ಬೆಂಗಳೂರಿನಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿಯರವರು, ಘಟನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದರು.

ಆದರೆ ಇದೀಗ ಅವರು ರಾಜ್ಯದಲ್ಲಿ ಸಂಘಪರಿವಾರದ ಕಾರ್ಯಕರ್ತರು ನಿರಾತಂಕವಾಗಿ ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿ ಸಮರ್ಥಿಸುವ ಕಾರ್ಯದಲ್ಲಿ ತೊಡಗಿದ್ದು, ಇದು ಅವರ ದ್ವಿಮುಖ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಬೇಕಾದ ಮುಖ್ಯಮಂತ್ರಿಯವರಿಗೆ ಇಂತಹ ಬೇಜವಾಬ್ದಾರಿಯ ಹೇಳಿಕೆಗಳು ಭೂಷಣವಲ್ಲ. ವಾರದ ಹಿಂದೆ ಅನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಗೂಂಡಾಗಳಿಗೆ ಠಾಣೆಯಲ್ಲೇ ಜಾಮೀನು ದೊರಕುವಂತೆ ಪ್ರಭಾವ ಹೇರಿ ಅವರನ್ನು ಬರ ಮಾಡಿಕೊಂಡ ಶಾಸಕ ಉಮಾನಾಥ್ ಕೋಟ್ಯಾನ್ ರವರ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮುಖ್ಯಮಂತ್ರಿಯವರ ಈ ಹೇಳಿಕೆ ನಾಗರಿಕರಲ್ಲಿ ಅಭದ್ರತಾ ಭಾವವನ್ನು ಉಂಟು ಮಾಡಿದೆ.

- Advertisement -

ಸಂಘಪರಿವಾರದ ದುಷ್ಕೃತ್ಯಗಳು ರಾಜ್ಯವನ್ನು ಅರಾಜಕತೆ ಎಡೆಗೆ ಕೊಂಡೊಯ್ಯಲಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮುಖ್ಯಂತ್ರಿಯವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಬೇಕು. ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೊಳಗಾಗದೇ ಸ್ವತಂತ್ರವಾಗಿ, ದಕ್ಷವಾಗಿ ಕಾರ್ಯಾಚರಿಸುವ ವಾತಾವರಣವನ್ನು ಕಲ್ಪಿಸಿಕೊಡಬೇಕು. ಕಾನೂನಿನ ನಿಯಂತ್ರಣವಿಲ್ಲದೇ ನಿರ್ಭೀತಿಯಿಂದ ಅಪರಾಧ ಎಸಗುವ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು. ಮುಖ್ಯಮಂತ್ರಿಯವರು ಏಕಪಕ್ಷೀಯವಾಗಿ ಹೇಳಿಕೆ ನೀಡುವುದನ್ನು ಬಿಟ್ಟು, ಸಾಂವಿಧಾನಿಕ ಹುದ್ದೆಯ ಘನತೆಯನ್ನು ಅರಿತುಕೊಂಡು ವ್ಯವಹರಿಸಬೇಕು ಮತ್ತು ರಾಜ್ಯದ ಜನತೆಯ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಅಬ್ದುಲ್ ಹನ್ನಾನ್ ಹೇಳಿದ್ದಾರೆ.



Join Whatsapp