ತುಮಕೂರು: ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಉತ್ತಮ ಆಡಳಿತ ಸಿಕ್ಕಿಲ್ಲ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂಬುದಕ್ಕೆ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆಯೇ ಸಾಕ್ಷಿ. ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ನಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಶನಿವಾರ ನಡೆದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಒಳಗೊಂಡ ವಿಭಾಗೀಯ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷದ ವಿಭಾಗೀಯ ಮಟ್ಟದ ಸಭೆಯನ್ನು ಮಂಗಳೂರಿನಿಂದ ಆರಂಭಿಸಬೇಕಾಗಿತ್ತು. ಆದರೆ, ನಮ್ಮ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡೀಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಿನ್ನೆ ನಡೆಯಬೇಕಿದ್ದ ಸಭೆ ರದ್ದುಗೊಳಿಸಲಾಯಿತು. ಆಸ್ಕರ್ ಫರ್ನಾಂಡೀಸ್ ಅವರ ಆರೋಗ್ಯ ವಿಚಾರಿಸಲು ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ಮಂಗಳೂರಿಗೆ ತೆರಳಿದ್ದೆವು. ಹೀಗಾಗಿ ಈ ಸಭೆ ಈಗ ತುಮಕೂರಿನಿಂದ ಆರಂಭವಾಗಿದ್ದು, ಮುಂದೆ ಹುಬ್ಬಳ್ಳಿ, ಮೈಸೂರು, ಮಂಗಳೂರಿನಲ್ಲಿ ನಡೆಯಲಿದೆ. ನಾವು ಈಗಾಗಲೇ ಸಂಕಲ್ಪ ಯಾತ್ರೆ ಮೂಲಕ ಎಲ್ಲ ಬ್ಲಾಕ್ ಕಾಂಗ್ರೆಸ್ ನಾಯಕರ ಜತೆ ಮಾತನಾಡಿದ್ದೇವೆ. ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಈಗ ಎಐಸಿಸಿ ನಾಯಕರು ಜಿಲ್ಲಾ ಮಟ್ಟದ ನಾಯಕರ ಜತೆ ಸಭೆ ನಡೆಸುತ್ತಿದ್ದಾರೆ ಎಂದರು.
ಪಕ್ಷದ ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು. ಪ್ರತಿ ಜಿಲ್ಲೆಯಲ್ಲೂ ಸಾಮಾಜಿಕ, ರಾಜಕೀಯ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಇವುಗಳನ್ನು ಭವಿಷ್ಯದಲ್ಲಿ ನಿಭಾಯಿಸಬೇಕಾಗುತ್ತದೆ. ಹೀಗಾಗಿ ನಾವು ಪ್ರತಿ ಜಿಲ್ಲೆಗೂ ಪ್ರತ್ಯೇಕ ಕಾರ್ಯತಂತ್ರ ರೂಪಿಸಬೇಕಿದೆ. ಮುಂದೆ ಜಿಲ್ಲಾ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದೆ. ಇವುಗಳಿಗೆ ನಾವು ಸಜ್ಜಾಗಬೇಕು. ರಾಜ್ಯದ ಜನ ನಮ್ಮ ಆಡಳಿತವನ್ನು ಕಳೆದೆರಡು ವರ್ಷದ ಆಡಳಿತದ ಜತೆ ಹೋಲಿಕೆ ಮಾಡುತ್ತಿದ್ದಾರೆ. ಈಗಿನ ಸರ್ಕಾರ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅವರು ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ತಲ್ಲೀನರಾಗಿದ್ದಾರೆ. ನಾವು ಅವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಹೇಳಿದರು.
ಅವರು ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ ಎಂದರೆ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಆಡಳಿತ ಕೊಟ್ಟಿಲ್ಲ ಎಂದೇ ಅರ್ಥ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ನಾವು ಈಗಾಗಲೇ ಹೇಳಿದ್ದೇವೆ. ನಾವು ನಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗುತ್ತಿದ್ದೇವೆ. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.