ಕಾನ್ಪುರ: ಅಶ್ಲೀಲ ವೀಡಿಯೊಗಳನ್ನು ಮಾಡುವ ಮೂಲಕ ಯವತಿಯನ್ನು ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ವಿದ್ಯಾರ್ಥಿ ಮುಖ್ಯಸ್ಥ ಪ್ರಿನ್ಸ್ ಶ್ರೀವಾಸ್ತವ ನನ್ನು ಕಾಕದೇವ್ ಪೊಲೀಸರು ಸೋಮವಾರ ರಾತ್ರಿ ಕಾನ್ಪುರದಲ್ಲಿ ಬಂಧಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ನೂರಾರು ಬಜರಂಗದಳದ ಕಾರ್ಯಕರ್ತರು ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿ ಗದ್ದಲ ಎಬ್ಬಿಸಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪ್ರಿನ್ಸ್ ಲಾಲಾ ವಿರುದ್ಧ ಗಂಭೀರ ಸೆಕ್ಷನ್ ಅಡಿಯಲ್ಲಿ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಕ್ಕೂ ಮೊದಲೇ ಆತ ಪೆಟ್ರೋಲ್ ಬಂಕ್ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಯುವತಿಯ ದೂರಿನಂತೆ ಎಫ್ಐಆರ್ ದಾಖಲಿಸಿದ ನಂತರ ಆರೋಪಿ ಪ್ರಿನ್ಸ್ ನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಸ್ವರೂಪ್ ನಗರ ಎಸಿಪಿ ಬ್ರಿಜ್ ನಾರಾಯಣ್ ತಿಳಿಸಿದ್ದಾರೆ.
ಯುವತಿಯೊಬ್ಬಳಿಗೆ ಆಕೆಯ ಗೆಳತಿ ಮತ್ತು ಪ್ರಿನ್ಸ್ ಮಾದಕವಸ್ತುವನ್ನು ನೀಡುವ ಮೂಲಕ ಅಶ್ಲೀಲ ವೀಡಿಯೊವನ್ನು ಮಾಡಿ ,ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣ ಕೀಳುತ್ತಿದ್ದರು. ಇದರಿಂದ ಬೇಸತ್ತ ಆಕೆ ಆಗಸ್ಟ್ 6 ರಂದು ಕಾಕದೇವ್ ಪೊಲೀಸ್ ಠಾಣೆಯಲ್ಲಿ ತನ್ನ ಸ್ನೇಹಿತೆ ಮತ್ತು ಪ್ರಿನ್ಸ್ ವಿರುದ್ಧ ಹಲ್ಲೆ, ಸುಲಿಗೆ, ಕೊಲೆ ಬೆದರಿಕೆ ಸೇರಿದಂತೆ ಗಂಭೀರ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಳು.