ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆ ದಾಖಲಾತಿ ಪರಿಶೀಲನೆ ಆಗಸ್ಟ್ ಅಂತ್ಯದ ವೇಳೆಗೆ ಪೂರ್ಣ; ಇನ್ನೊಂದು ವಾರದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಟ, ಶುಲ್ಕ ನಿಗದಿ

Prasthutha|

ಬೆಂಗಳೂರು: ರಾಜ್ಯದಲ್ಲಿ ವೃತ್ತಿ ಶಿಕ್ಷಣ ಕೋರ್ಸ್ ಗಳ ಸೀಟು ಹಂಚಿಕೆ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸನ್ನದ್ಧವಾಗಿದ್ದು, ಇದೇ 18 ರಿಂದ ದಾಖಲಾತಿ ಪರಿಶೀಲನೆ ಪ್ರಾರಂಭವಾಗಲಿದೆ. ಈ ಬಾರಿ ಬಹುತೇಕ ಎಲ್ಲಾ ಪ್ರಕ್ರಿಯೆಗಳು ಆನ್ ಲೈನ್ ಮೂಲಕವೇ ನಡೆಯುತ್ತಿದೆ. ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ಅಧ್ಯಯನ ಪ್ರಮಾಣ ಪತ್ರಗಳನ್ನು ಈಗಾಗಲೇ ಅಪ್ ಲೋಡ್ ಮಾಡಿದ್ದು, ಏನಾದರೂ ಲೋಪದೋಷಗಳಿದ್ದರೆ ಅವುಗಳನ್ನು ಪರಿಹರಿಸಲು ಅಭ್ಯರ್ಥಿಗಳಿಗೆ ಎರಡು ದಿನಗಳ ಕಾಲ ಎಡಿಟ್ ಆಪ್ಷನ್ ನೀಡಲಾಗಿದೆ.

- Advertisement -


ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಇದೇ ಮೊದಲ ಬಾರಿಗೆ ಶಾಲಾ ಅಧ್ಯಯನ ಪ್ರಮಾಣ ಪತ್ರಗಳನ್ನು ಶಿಕ್ಷಣ ಇಲಾಖೆ ಹಾಗೂ ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಕಂದಾಯ ಇಲಾಖೆ ಅಪ್ ಲೋಡ್ ಮಾಡುತ್ತಿದೆ. ಇದರ ಜೊತೆಗೆ ಕ್ರೀಡಾ ಕೋಟದ ದಾಖಲೆಗಳನ್ನು ಯುವ ಜನ ಸೇವೆ, ಕ್ರೀಡಾ ಇಲಾಖೆ ಹಾಗೂ ಎನ್.ಸಿ.ಸಿ, ಸೇನೆಯಲ್ಲಿ ಕೆಲಸ ಮಾಡಿರುವ, ಮಾಡುತ್ತಿರುವವರ ದಾಖಲೆಗಳನ್ನು ರಕ್ಷಣಾ ಸಚಿವಾಲಯ ಪರಿಶೀಲಿಸುತ್ತಿದೆ. ಇದರಿಂದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಬಹುತೇಕ ವಿದ್ಯಾರ್ಥಿಗಳ ಮುಖಾಮುಖಿ ಭೇಟಿ ಕಡಿಮೆಯಾಗಲಿದೆ.


ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ ಎಸ್ ಅವರು ಈ ಮಾಹಿತಿ ನೀಡಿದರು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದಾಖಲೆಗಳನ್ನು ಸಲ್ಲಿಸಿ ಮೀಸಲಾತಿ ಕ್ಲೈಮ್ ಮಾಡಿದ ಕೆಲವರ ದಾಖಲೆಗಳು ಮೂಲ ದಾಖಲೆಗಳ ಜೊತೆ ತಾಳೆಯಾಗುತ್ತಿಲ್ಲ. ಹೀಗಾಗಿ ಎಡಿಟ್ ಆಪ್ಷನ್ ಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕೆಲ ಅಭ್ಯರ್ಥಿಗಳು ದಾಖಲೆಗಳನ್ನು ಸಲ್ಲಿಸಿದ್ದರೂ ಸಹ ಕಂದಾಯ ಇಲಾಖೆಯ ಎಸ್.ಡಿ. ಸಂಖ್ಯೆ ಮತ್ತಿತರ ವಿವರಗಳನ್ನು ಕೆಇಎಗೆ ಸರಿಯಾಗಿ ಅಪ್ ಲೋಡ್ ಮಾಡದ ಕಾರಣ ಸ್ವಲ್ಪ ಮಟ್ಟಿಗೆ ಗೊಂದಲ ನಿರ್ಮಾಣವಾಗಿದ್ದು, ಇದಕ್ಕಾಗಿ ಎಡಿಟ್ ಮಾಡಿ ಅಪ್ ಲೋಡ್ ಮಾಡಲು ಅನುವು ಮಾಡಲಾಗಿದೆ.

- Advertisement -


ಇದಲ್ಲದೇ ಒಂದರಿಂದ 10 ನೇ ತರಗತಿ ವರೆಗೆ ಎಲ್ಲಿ ಅಧ್ಯಯನ ಮಾಡಲಾಗಿದೆ ಎಂಬ ದಾಖಲಾತಿಗಳನ್ನು ಆಯಾ ಶಾಲೆಗಳ ಬಿಇಓಗಳು ಡಿಎಸ್ಇ ಕೀ ಮೂಲಕ ಡಿಜಿಟಲ್ ಸಹಿ ಮಾಡಿ ಅಪ್ ಲೋಡ್ ಮಾಡುತ್ತಾರೆ. ನಂತರ ವಿದ್ಯಾರ್ಥಿಗಳಿಗೆ ಈ ಸಂಬಂಧ ಸಂದೇಶ ಬರುತ್ತದೆ. ಉದಾಹರಣೆಗೆ ಒಂದರಿಂದ ನಾಲ್ಕನೇ ತರಗತಿವರೆಗೆ ಚಾಮರಾಜನಗರದಲ್ಲಿ ಅಧ್ಯಯನ ಮಾಡಿ, 5 ರಿಂದ 10 ರ ವರೆಗೆ ಮೈಸೂರಿನಲ್ಲಿ ಓದಿದಿದ್ದರೆ ಎರಡು ಬಿಇಓಗಳ ಕಚೇರಿಯಿಂದ ದಾಖಲಾತಿಗಳನ್ನು ಅಪ್ ಲೋಡ್ ಮಾಡುವುದು ಕಡ್ಡಾಯವಾಗಿದೆ.


ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ 371 ಜೆ ಅಡಿ ಅರ್ಜಿ ಸಲ್ಲಿಸುವವರು ಅಸಿಸ್ಟೆಂಟ್ ಕಮೀಷನರ್ ನೀಡಿರುವ ಪ್ರಮಾಣ ಪತ್ರದ ಸಂಖ್ಯೆಯನ್ನು ಅರ್ಜಿ ಜೊತೆ ಅಪ್ ಲೋಡ್ ಮಾಡಬೇಕಾಗುತ್ತದೆ. ಕ್ರೀಡೆಗಳಲ್ಲಿ ಪಾಲ್ಗೊಂಡ ವಿಶೇಷ ಕ್ಯಾಟಗೆರಿ ವಿಭಾಗದ ವಿದ್ಯಾರ್ಥಿಗಳ ದಾಖಲಾತಿಗಳನ್ನು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ, ಸೇನೆಯಲ್ಲಿ ಕೆಲಸ ಮಾಡಿದವರ ವಿಶೇಷ ಕೋಟಾ ದಾಖಲೆಗಳನ್ನು ರಕ್ಷಣಾ ಇಲಾಖೆಗೆ ಕಳುಹಿಸಿ ದಾಖಲೆಗಳನ್ನು ಪರಿಶೀಲನೆಗೊಳಪಡಿಸಲಾಗುತ್ತಿದೆ.

ದಾಖಲಾತಿ ಪರಿಶೀಲನೆ ಬಹುತೇಕ ಆಗಸ್ಟ್ 28 ಇಲ್ಲವೆ 29 ರ ವೇಳೆಗೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಸಿಬಿಎಸ್ಸಿ, ಐಸಿಸಿಎಸ್ಸಿ ವಿಭಾಗದಲ್ಲಿ ಅಧ್ಯಯನ ಮಾಡಿದ್ದರೆ ಸಂಬಂಧಪಟ್ಟ ಮಂಡಳಿಗಳ ಮೂಲಕವೇ ವಿದ್ಯಾರ್ಥಿಗಳ ದಾಖಲೆಗಳನ್ನು ಕಳುಹಿಸಿ ಅಲ್ಲಿಂದ ಪರಿಶೀಲನೆ ಮಾಡಿ ದಾಖಲೆಗಳನ್ನು ತರಿಸಿಕೊಳ್ಳಲಾಗುತ್ತಿದೆ.
ಆದಷ್ಟು ಬೇಗ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾದರೆ ಸಿಇಟಿ ಮತ್ತು ನೀಟ್ ಎರಡೂ ವಿಭಾಗಗಳ ಸೀಟು ಹಂಚಿಕೆ ಪ್ರಕ್ರಿಯೆ ಒಟ್ಟೊಟ್ಟಿಗೆ ನಡೆಸಲಾಗುವುದು. ಒಂದು ವೇಳೆ ನೀಟ್ ಫಲಿತಾಂಶ ವಿಳಂಬವಾದರೆ ಇಂಜಿನಿಯರಿಂಗ್ ಕೋರ್ಸ್ ಗಳ ಸೀಟು ಹಂಚಿಕೆ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ವಿಶೇಷ ಸುತ್ತಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು.


ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ನಿಗದಿ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಒಂದು ವಾರ ಇಲ್ಲವೆ ಹತ್ತು ದಿನಗಳಲ್ಲಿ ವೆಬ್ ಸೈಟ್ ಮೂಲಕ ಇದನ್ನು ಪ್ರಕಟಿಸಲಾಗುತ್ತದೆ. ನಂತರ ಮಾಕ್ ಅಲಾಟ್ ಮೆಂಟ್ ಮಾಡಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ಆಯ್ಕೆಗಳಿರುತ್ತವೆ. ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಒಟ್ಟು ಎರಡು ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಕೊನೆಗೆ ವಿಶೇಷ ಸುತ್ತಿನ ಆಯ್ಕೆ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗುತ್ತದೆ.


ಈ ಬಾರಿ 2.16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1.75 ಲಕ್ಷ ಸಿಇಟಿ ಶ್ರೇಯಾಂಕ ನೀಡಲಾಗಿದೆ. 66 ಸಾವಿರ ಸರ್ಕಾರಿ ಸೀಟು ದೊರೆಯಲಿದೆ. ಸೀಟು ಹಂಚಿಕೆಯಾದ ನಂತರ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪಾಲಕರು ಕಾಲೇಜು ಮತ್ತು ಅಲ್ಲಿನ ಪರಿಸರ ನೋಡಿದ ನಂತರವೇ ಪ್ರವೇಶ ಪಡೆಯುವಂತೆ ಕೆಇಎ ಮನವಿ ಮಾಡಿದೆ.


ಕಳೆದ ವರ್ಷ ಸಿಇಟಿ ಪರೀಕ್ಷೆ ಬರೆದಿದ್ದ 24 ಸಾವಿರ ವಿದ್ಯಾರ್ಥಿಗಳು ಫಲಿತಾಂಶವನ್ನು ತಿರಸ್ಕರಿಸಿ ಈ ಬಾರಿಯೂ ಕೂಡ ಪರೀಕ್ಷೆ ಬರೆದಿದ್ದಾರೆ. ಅವರಿಗೂ ಇದೇ ವರ್ಷದ ನಿಯಮ ಅನ್ವಯಿಸಬೇಕು ಎಂಬ ಬೇಡಿಕೆ ಇದೆ. ಆದರೆ ಕಳೆದ ವರ್ಷ ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ ಕೋವಿಡ್ ಕಾರಣದಿಂದ ಸಿಇಟಿ ಪರೀಕ್ಷೆಯ ಅಂಕಗಳನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗಿತ್ತು. ಈ ಬಾರಿ ಪಿಯುಸಿ ಮತ್ತು ಸಿಇಟಿ ಎರಡೂ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದ ಪಿಯುಸಿ ಅಂಕಗಳನ್ನು ಈ ಬಾರಿ ಪರಿಗಣನೆ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ವಿದ್ಯಾರ್ಥಿಗಳು ಸರ್ಕಾರದ ತೀರ್ಮಾನ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ನೀಡುವ ಆದೇಶದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ. ಎಸ್. ತಿಳಿಸಿದ್ದಾರೆ.



Join Whatsapp