ಬೆಂಗಳೂರು: ಪ್ರಾದೇಶಿಕವಾದದಿಂದ ರಾಷ್ಟ್ರದ ಏಕತೆ ಮತ್ತು ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂದು ಪಠ್ಯಪುಸ್ತಕ ಗಳಲ್ಲಿ ಉಲ್ಲೇಖಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ.
10ನೇ ತರಗತಿಯ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕದ ಹೊಸ ಆವೃತ್ತಿಯಲ್ಲಿ ರಾಜ್ಯಶಾಸ್ತ್ರ ವಿಷಯದ ‘ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು’ ಕುರಿತು ಅಧ್ಯಾಯದಲ್ಲಿ ಪ್ರಾದೇಶಿಕವಾದದ ಬಗ್ಗೆ ಪ್ರಸ್ತಾಪಿಸಲಾಗಿದೆ.
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ‘ಭಾಷಾ ಅಭಿಮಾನ, ಪ್ರಾದೇಶಿಕವಾದ ದೇಶ ಎದುರಿಸುತ್ತಿರುವ ಸಮಸ್ಯೆಗಳು. ರಾಷ್ಟ್ರವಾದಕ್ಕೆ ಇವು ಕಂಟಕ ಎಂದು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ನಾಡದ್ರೋಹಿಗಳಷ್ಟೇ ಇಂಥ ವಾದ ಮಾಡುತ್ತಾರೆ. ಕನ್ನಡತನ ಎಂಬುದು ಭಾರತೀಯತೆಗೆ ಪೂರಕವೇ ಹೊರತು ಮಾರಕವಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
‘ಭಾಷಾಭಿಮಾನ ರಾಷ್ಟ್ರೀಯತೆಯ ಶತ್ರು ಎಂದು ಹೇಳುವ ಪಠ್ಯವನ್ನು ಕನ್ನಡಿಗರು ಯಾಕೆ, ಹೇಗೆ ಸಹಿಸಿಕೊಳ್ಳಬೇಕು? ಮ. ರಾಮಮೂರ್ತಿ, ಅ.ನ. ಕೃಷ್ಣರಾಯರು, ಡಾ.ರಾಜಕುಮಾರ್ ಸೇರಿದಂತೆ ಕನ್ನಡ ಚಳವಳಿ ಕಟ್ಟಿಬೆಳೆಸಿದ ಸಾವಿರಾರು ಮಹಾನಾಯಕರಿಗೆ ಮಾಡಿದ ಅವಮಾನವಿದು’. ಪ್ರಾದೇಶಿಕವಾದವು ದೇಶದ ಸಮಸ್ಯೆ ಎಂದು ಬಿಂಬಿಸಿರುವ ಪಾಠವನ್ನು ಈ ಕೂಡಲೇ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ.