ಹೊಸದಿಲ್ಲಿ: ಸೋಮವಾರ ಪ್ರಧಾನಿ ನರೇಂದ್ರ ಮೋದಿ ವರ್ಲ್ಡ್ ಇಕನಾಮಿಕ್ ಫೋರಂನಲ್ಲಿ ವರ್ಚುವಲ್ ಆಗಿ ಭಾಷಣ ಮಾಡುವ ವೇಳೆ ಅವರ ಟೆಲಿಪ್ರಾಂಪ್ಟರ್ ಕೈಕೊಟ್ಟ ಕಾರಣ ಮಾತನಾಡಲಾಗದೆ ಅವರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ಅವರ ವರ್ಚುವಲ್ ಭಾಷಣದ ವೇಳೆ ತಮ್ಮ ಸಿದ್ಧಪಡಿಸಿದ್ದ ಭಾಷಣವನ್ನು ಮೋದಿ ಆರಂಭಿಸಿ ಕೆಲವೇ ಸಮಯದಲ್ಲಿ ಟೆಲಿಪ್ರಾಂಪ್ಟರ್ ಕೈಕೊಟ್ಟಿತ್ತು. ಈ ವೇಳೆ ಕಕ್ಕಾಬಿಕ್ಕಿಯಾದ ಪ್ರಧಾನಿ ಮುಂದೆ ಏನು ಮಾತನಾಡಬೇಕು ಎಂದು ತೋಚದೆ ತೀವ್ರ ಮುಜುಗರಕ್ಕೆ ಒಳಗಾದರು.
ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಹೀಗಾಗಿರುವುದು ಅವರನ್ನು ವಸ್ತುಶಃ ಮುಜುಗರಕ್ಕೆ ತಳ್ಳಿತು. ಆಗ ಎಲ್ಲರಿಗೂ ನನ್ನ ಮಾತುಗಳು ಕೇಳಿಸುತ್ತಿವೆಯೇ ಎಂದು ಮೋದಿ ತಡವರಿಸಿ ಕೇಳಿದರು. ಈ ವೇಳೆ ತಾಂತ್ರಿಕ ಸಿಬ್ಬಂದಿ ಮೋದಿಯ ರಕ್ಷಣೆಗೆ ಬಂದರು. ಸ್ವಲ್ಪ ನಂತರ ಮೋದಿ ತಮ್ಮ ಭಾಷಣ ಆರಂಭಿಸಿದರೂ ಮತ್ತೆ ಮೊದಲಿನಿಂದಲೇ ಭಾಷಣ ಆರಂಭಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಪ್ರಧಾನಿಯ ಸುಳ್ಳನ್ನು ಟೆಲಿ ಪ್ರಾಂಪ್ಟರ್ ಗೂ ಸಹಿಸಲಾಗಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.