ತೆಲಂಗಾಣ ಹೊಸ ಸಚಿವಾಲಯದಲ್ಲಿ ಮಂದಿರ ಮಸೀದಿ ಚರ್ಚ್ | ಭಾವೈಕ್ಯತೆಯ ಸಂಕೇತ ಎಂದ ಮುಖ್ಯಮಂತ್ರಿ ಕೆಸಿಆರ್

Prasthutha News

ತೆಲಂಗಾಣದ ಹೊಸ ಸಚಿವಾಲಯದಲ್ಲಿ ಎರಡು ಮಸೀದಿಗಳು, ಮಂದಿರ ಹಾಗೂ ಚರ್ಚ್ ಇರಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಇದು ಭಾವೈಕ್ಯತೆಯ ಸಂಕೇತ ಎಂದವರು ಹೇಳಿದ್ದು, ಆ ಮೂಲಕ ಸಚಿವಾಲಯ ಕಟ್ಟಡ ಕಾಮಗಾರಿ ನಡೆಯುವಾಗ ಹಾನಿಗೊಂಡಿದ್ದ ಮಸೀದಿ ಹಾಗೂ ಮಂದಿರಕ್ಕೆ ಒಂದು ತಾರ್ಕಿಕ ಅಂತ್ಯ ಕಂಡಂತಾಗುತ್ತದೆ ಎನ್ನಲಾಗಿದೆ. ಈ ವರ್ಷದ ಜುಲೈನಲ್ಲಿ ಹಳೆಯ ಸಚಿವಾಲಯ ಕಟ್ಟಡವನ್ನು ಒಡೆದು ಹೊಸ ಸಚಿವಾಲಯದ ನಿರ್ಮಾಣಕ್ಕೆ ನವೀಕರಣ ಕಾಮಗಾರಿ ನಡೆಯುತ್ತಿದ್ದಾಗ ಅದರ ಅವಶೇಷಗಳು ಬಿದ್ದು ಅಲ್ಲಿದ್ದ ಎರಡು ಮಸೀದಿ ಹಾಗೂ ಒಂದು ದೇವಸ್ಥಾನಕ್ಕೆ ಹಾನಿಯಾಗಿತ್ತು. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಕೂಡಲೇ ಆ ಕುರಿತು ತನ್ನ ಕ್ಷಮೆಯನ್ನು ಕೂಡಾ ಕೇಳಿದ್ದರು.

ಇದೀಗ ಹೊಸ ಸಚಿವಾಲಯದ ನಿರ್ಮಾಣ ಮಾಡುವಾಗ ಅಲ್ಲಿ ಈ ಹಿಂದೆ ಇದ್ದ ಅದೇ ಸ್ಥಳದಲ್ಲಿ ಎರಡು ಮಸೀದಿಗಳು, ಮಂದಿರ ಮತ್ತು ಹೊಸದಾಗಿ ಒಂದು ಚರ್ಚ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಹಸಿರು ನಿಶಾನೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಕೆಸಿಆರ್, “ಈ ನಿರ್ಧಾರ ಇದು ಭಾವೈಕ್ಯತೆಯ ಸಂದೇಶವನ್ನು ಸಾರುತ್ತದೆ. ಇದು ಗಂಗಾ ಜಮುನಾ ತೇಝಾಬ್ ನ ಸಂಕೇತವಾಗಿದೆ. ಈ ಮೂರೂ ಧರ್ಮದ ಧಾರ್ಮಿಕ ಸ್ಥಳಗಳಿಗೆ ಒಂದೇ ಸಮಯದಲ್ಲಿ ಶಿಲಾನ್ಯಾಸ ಕೂಡಾ ನಡೆಯಲಿದೆ” ಎಂದವರು ಹೇಳಿದ್ದಾರೆ.

ತೆಲಂಗಾಣದ ಪ್ರಗತಿ ಭವನದಲ್ಲಿ ಹಿರಿಯ ಮುಸ್ಲಿಮ್ ಧಾರ್ಮಿಕ ನಾಯಕರುಗಳು ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡಿನ ಸದಸ್ಯರನ್ನೊಳಗೊಂಡ ನಿಯೋಗದೊಂದಿಗೆ ಮಾತುಕತೆ ನಡೆಸಿದ ಕೆಸಿಆರ್, ತಲಾ 750 ಚದರ ವಿಸ್ತೀರ್ಣದಲ್ಲಿ ಎರಡು ಮಸೀದಿಗಳನ್ನು ಈ ಹಿಂದೆ ಇದ್ದ ಅದೇ ಸ್ಥಳದಲ್ಲಿ ನಿರ್ಮಿಸುವ ಹಾಗೂ ಅಲ್ಲಿಯೇ ಒಂದು ಇಮಾಂ ವಸತಿ ನಿಲಯವನ್ನು ನಿರ್ಮಿಸುವ ನಿರ್ಧಾರ ಪ್ರಕಟಿಸಿದರು. ಮಂದಿರ ಕೂಡಾ 1500 ಚದರ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದ್ದು, ಕ್ರೈಸ್ತರ ನಿಯೋಗ ಕೂಡಾ ಚರ್ಚ್ ನಿರ್ಮಿಸುವಂತೆ ಆಗ್ರಹಿಸಿತ್ತು. ಮಸೀದಿ ನಿರ್ಮಾಣದ ಬಳಿಕ ಅದನ್ನು ವಕ್ಫ್ ಬೋರ್ಡಿಗೆ ಹಾಗೂ ಮಂದಿರ ನಿರ್ಮಾಣದ ಬಳಿಕ ಅದನ್ನು  ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ ಎನ್ನಲಾಗಿದೆ.

ಈ ನಡುವೆ ಕೆಲ ಮಾಧ್ಯಮಗಳು ಅಲ್ಲಿ ‘ಎರಡು’ ಮಸೀದಿ ನಿರ್ಮಾಣ ಮಾಡಲಾಗುತ್ತದೆ ಎಂಬುವುದನ್ನು ಮಾತ್ರ ಎತ್ತಿ ತೋರಿಸುತ್ತಾ ಎಂದಿನಂತೆ ತಮ್ಮ ಪೂರ್ವಾಗ್ರಹ ಪೀಡಿತ ಮನೋಸ್ಥಿತಿಯನ್ನು ಹೊರಹಾಕುತ್ತಿವೆ


Prasthutha News

Leave a Reply

Your email address will not be published. Required fields are marked *