ಟ್ವೀಟ್ ಗೆ ಸ್ಪಂದಿಸಿದ SDPI ನಾಯಕ | ಜಿದ್ದಾದಲ್ಲಿ ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರು ಐಎಸ್ಎಫ್ ನೆರವಿನಿಂದ ತವರಿಗೆ

Prasthutha|

ಜಿದ್ದಾ:‌ ಪ್ರಾಯೋಜಕನು ಹುರೂಬ್ (ಪಲಾಯನಗೊಂಡಿದ್ದರೆಂದು ಸರಕಾರಕ್ಕೆ ತಿಳಿಸುವುದು ) ಹಾಕಿದ ಕಾರಣದಿಂದಾಗಿ ಸೌದಿ ಅರೇಬಿಯಾದ ಜಿದ್ದಾದಲ್ಲಿ ಆಹಾರ, ವಸತಿ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದ ಮೂವರು ಅನಿವಾಸಿ ಭಾರತೀಯ ಕಾರ್ಮಿಕರನ್ನು ಇಂಡಿಯನ್ ಸೋಶಿಯಲ್ ಫೋರಂ ಸಮಸ್ಯೆಯಿಂದ ಪಾರುಗೊಳಿಸಿ ತವರಿಗೆ ಕಳುಹಿಸಿದೆ.

- Advertisement -

ಸರ್ವಣನ್, ಗಣಪ್ಪ, ಸಲ್ಮಾನ್ ಎಂಬವರು ಪ್ರಾಯೋಜಕನಿಂದ ಹುರೂಬ್ ಹೇರಲ್ಪಟ್ಟ ಭಾರತೀಯ ಕಾರ್ಮಿಕರಾಗಿದ್ದಾರೆ. ಸಂತ್ರಸ್ತರಲ್ಲಿ ಸಲ್ಮಾನ್ ಎಂಬಾತ ಜುಲೈ 25ರಂದು ಎಸ್.ಡಿ.ಪಿ.ಐ ನಾಯಕ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಅವರಿಗೆ ಟ್ವೀಟ್ ಮಾಡಿ ತಮ್ಮ ಸಂಕಷ್ಟವನ್ನು ತಿಳಿಸಿ ನೆರವಾಗುವಂತೆ ಕೋರಿದ್ದ.

“ನಾವು ರೆಸ್ಟೋರೆಂಟ್ ಒಂದರಲ್ಲಿ‌ ಕೆಲಸ ಮಾಡುತ್ತಿದ್ದೆವು. ಇಕಾಮ ನವೀಕರಿಸದ ಕುರಿತು ಪ್ರಾಯೋಜಕನೊಂದಿಗೆ ಜಗಳವಾಗಿ ತೊರೆದುಬಂದಿದ್ದೆವು. ನಮಗೆ ಹುರೂಬ್ ಹಾಕಲಾಗಿದೆ. ಊಟ , ವಸತಿ ಇಲ್ಲದೆ ಕಷ್ಟಪಡುತ್ತಿದ್ದೇವೆ. ನಮ್ಮನ್ನು ಹೇಗಾದರೂ ಮಾಡಿ ರಕ್ಷಿಸಿ. ಇದು ನಮಗೆ ಕೊನೆಯ ಆಯ್ಕೆ. ಎಲ್ಲರೊಂದಿಗೂ ಸಹಾಯ ಯಾಚಿಸಿದ್ದೇವೆ. ಯಾರೂ ನಮ್ಮನ್ನು ನೆರವಾಗಲು ಮುಂದೆ ಬಂದಿಲ್ಲ” ಎಂದು ಟ್ವೀಟ್ ಮಾಡಿದ್ದ.

- Advertisement -

ಕೂಡಲೇ ಟ್ವೀಟ್ ಗೆ ಸ್ಪಂದಿಸಿದ ಮಜೀದ್ ರವರು ಈ ಕುರಿತು ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾಗೆ ಮಾಹಿತಿಯನ್ನು ನೀಡಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು.

ಟ್ವೀಟನ್ನು ಆಧಾರವಾಗಿಟ್ಟುಕೊಂಡು ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಕರ್ನಾಟಕ ರಾಜ್ಯಾಧ್ಯಕ್ಷ ಕಲಂದರ್ ಶಾ ಮತ್ತು ಸದಸ್ಯ ರಶೀಫ್ ಸಂತ್ರಸ್ತರನ್ನು ಹುಡುಕಿ ಭೇಟಿಯಾಗಿ ಸಮಸ್ಯೆಯನ್ನು ಬಗೆಹರಿಸಿದರು. ಅದೆ ವೇಳೆ, ಐ.ಎಸ್.ಎಫ್ ಸದಸ್ಯ ಅಶ್ರಫ಼್ ಬಜ್ಪೆ ಅವರು ರಾಯಭಾರಿ ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಪೂರೈಸಿದರು ಮತ್ತು ಬೆಂಗಳೂರಿನ ಸಮಾಜ ಸೇವಕ ಝಿಯಾ ಎಂಬವರು ಸಂತ್ರಸ್ತರು ಊರಿಗೆ ಮರಳಲು ಬೇಕಾದ ಟಿಕೆಟ್ ದೇಣಿಗೆ ನೀಡಿದ್ದು ಸೆ.5ರಂದು ಸಂತ್ರಸ್ತರು ತವರು ಸೇರಿದ್ದಾರೆ.

Join Whatsapp