ಹೈದರಾಬಾದ್ : ಕೋವಿಡ್ ಪ್ರಕರಣಗಳು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಲಾಕ್ ಡೌನ್ ಸಂಪೂರ್ಣ ಹಿಂಪಡೆಯಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವಿಕೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂಬುದನ್ನು ಸಚಿವ ಸಂಪುಟದಲ್ಲಿ ದೃಢಪಡಿಸಿಕೊಳ್ಳಲಾಗಿದೆ. ಹೀಗಾಗಿ, ಭಾನುವಾರದಿಂದ ಲಾಕ್ ಡೌನ್ ಸಂಬಂಧ ವಿಧಿಸಿದ್ದ ಎಲ್ಲಾ ನಿಯಮಗಳನ್ನು ಹಿಂಪಡೆಯುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ದೇಶದ ಇತರ ರಾಜ್ಯಗಳಿಗಿಂತ ತೆಲಂಗಾಣದಲ್ಲಿ ಕೋವಿಡ್ ನಿಯಂತ್ರಣ ತ್ವರಿತಗತಿಯಲ್ಲಿ ಆಗಿದೆ ಎಂದು ಸಚಿವ ಸಂಪುಟದ ಸಭೆಯ ಬಳಿಕ ಬಿಡುಗಡೆಗೊಳಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಲ್ಲಾ ಸಿದ್ಧತೆಗಳೊಂದಿಗೆ ಜು.1ರಿಂದಲೇ ಎಲ್ಲಾ ಶಾಲೆಗಳನ್ನೂ ತೆರೆಯುವಂತೆ ನಿರ್ದೇಶಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಆದಾಗ್ಯೂ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಹರಡುವುದನ್ನು ತಡೆಯಲು ನಾಗರಿಕರು ಸಹಕರಿಸುವಂತೆ ಸರಕಾರ ಜನತೆಗೆ ಮನವಿ ಮಾಡಿದೆ.