ನೀರಾವರಿ ಇಲಾಖೆ ಅವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ. ಶಿವಕುಮಾರ್ ಆಗ್ರಹ

Prasthutha: June 19, 2021

ಬೆಂಗಳೂರು: ‘ನೀರಾವರಿ ಇಲಾಖೆಯಲ್ಲಿ ನಿಯಮಾವಳಿ ಉಲ್ಲಂಘಿಸಿ 20 ಸಾವಿರ ಕೋಟಿ ರುಪಾಯಿ ಕಾಮಗಾರಿ ಟೆಂಡರ್ ಕರೆಯಲಾಗಿದೆ ಎಂದು ಬಿಜೆಪಿ ನಾಯಕರೇ ಆರೋಪ ಮಾಡಿದ್ದು, ಈ ಬಗ್ಗೆ ಮೌನ ವಹಿಸುವ ಮೂಲಕ ಮುಖ್ಯಮಂತ್ರಿಗಳು ಈ ಆರೋಪ ನಿಜ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹಗರಣದ ತನಿಖೆಗೆ ಸರಕಾರ ಜಂಟಿ ಸದನ ಸಮಿತಿ ರಚಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮನ ಹೆಸರೆಳುವವರ ಪಕ್ಷದಲ್ಲಿ ರಾಮಾಯಣ, ಮಹಾಭಾರತ ಎಲ್ಲವೂ ನಡೆಯುತ್ತಿದೆ. ಬಿಜೆಪಿಯ ಯುದ್ಧಕಾಂಡ, ಜನಸಾಮಾನ್ಯರ ಕರ್ಮಕಾಂಡ. ಇದು ಮುಗಿಯದ (ನೆವರ್ ಎಂಡಿಗ್) ನರಕಯಾತನೆಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ನಾನು ಸದನದಲ್ಲಿ ಈ ಬಗ್ಗೆ ಭವಿಷ್ಯ ಹೇಳಿದ್ದೆ. ಕರ್ನಾಟಕ ಹೆಲ್ತ್ ಟೂರಿಸಂಗೆ ಪ್ರಸಿದ್ಧಿ. ಆದರೆ ಅದೀಗ ಹೆಲ್ ಟೂರಿಸಂ (ನರಕ ಯಾತ್ರೆ) ಆಗಿದೆ. ಜನ ಉದ್ಯೋಗಕ್ಕೆ ಹುಡುಕಾಟ, ಜೀವನ ನಡೆಸಲು ಪರದಾಟ ನಡೆಸುತ್ತಿದ್ದಾರೆ. ಕೋವಿಡ್  ಪರಿಸ್ಥಿತಿಯಿಂದ ರಾಜ್ಯದಲ್ಲಿ 30 ಲಕ್ಷ ಉದ್ಯೋಗ ನಷ್ಟವಾಗಿದೆ. ಈ ವಿಚಾರದಲ್ಲಿ ನಾನು ಎರಡು ಸಮಿತಿಗಳನ್ನು ಮಾಡಿದ್ದು, ಒಂದು ವಾರದಲ್ಲಿ ವರದಿ ನೀಡಲಿದೆ ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ಬಿಜೆಪಿಯವರಿಗೆ ಹೆಚ್ಚು ಮಾತನಾಡಲು ನಾವು ಅವಕಾಶ ಕೊಡಬೇಕು. ರಾಜ್ಯಕ್ಕೆ ಅವರೇ ಸಂದೇಶ ನೀಡುತ್ತಿದ್ದಾರೆ. ಅವರು ಆಡಳಿತ ಪಕ್ಷದ ಜನರ ಪ್ರತಿನಿಧಿಗಳು. ಅವರಿಗೆ ನಮಗಿಂತ ಹೆಚ್ಚಿನ ಸತ್ಯ ಗೊತ್ತಿರುತ್ತದೆ. ವಿಶ್ವನಾಥ್ ಅವರು ನೀರಾವರಿ ಇಲಾಖೆ ಅವ್ಯವಹಾರದ ಬಗ್ಗೆ ಮಾಡಿರುವ ಆರೋಪ ಸಂಬಂಧ ನನಗೂ ಮಾಹಿತಿ ಇದೆ. 10 ಕೋಟಿ ರೂ. ಕಾಮಗಾರಿಗೆ 20 ಕೋಟಿ ರೂ. ಅಂದಾಜು ವೆಚ್ಚ ಸಿದ್ಧವಾಗಿದೆ. ಈ ಸರ್ಕಾರ ಬಂದ ಮೇಲೆ ಆರ್ಥಿಕ ಸಮಸ್ಯೆ ಇದ್ದರೂ, ನೀರಾವರಿ ಇಲಾಖೆಯಲ್ಲಿ ಹೇಗೆ ನಿಯಮಗಳ ಉಲ್ಲಂಘನೆ ಮಾಡಿ ಕಾಮಗಾರಿಗಳಿಗೆ ಅನುಮತಿ ನೀಡಲಾಗುತ್ತಿದೆ ಎಂಬುದೂ ತಿಳಿದಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ನಾನು ಸುಮ್ಮನಿದ್ದೆ. ಇನ್ನು ಏನೆಲ್ಲಾ ಮಾಡುತ್ತಾರೋ ಮಾಡಲಿ, ಸದನದಲ್ಲಿ ಎಲ್ಲವನ್ನೂ ಒಟ್ಟಿಗೆ ಚರ್ಚೆ ಮಾಡೋಣ ಅಂತಾ ಕಾಯುತ್ತಿದ್ದೆವು. ಈ ಮಧ್ಯದಲ್ಲಿ ವಿಶ್ವನಾಥ್ ಅವರು ರಾಜ್ಯದ ಜನರ ಮುಂದೆ ಈ ವಿಚಾರ ಬಿಚ್ಚಿಟ್ಟಿದ್ದಾರೆ. ಮುಖ್ಯಮಂತ್ರಿಗಳ ಬಳಿ ಈ ಇಲಾಖೆ ಇದ್ದು, ಈ ಬಗ್ಗೆ ಅವರು ಸ್ಪಷ್ಟನೆ ನೀಡದೇ ಅಧಿಕಾರಿಗಳ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಈ ಆರೋಪ ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಬೇಕು. ಬೇಕಾದರೆ ಸಮಿತಿಗೆ ನಿಮ್ಮ ಪಕ್ಷದವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರನ್ನು ಸಮಿತಿಗೆ ಸೇರಿಸಿ. ಈ ವಿಚಾರ ಚರ್ಚಿಸಲು ತಕ್ಷಣ ಅಧಿವೇಶನ ಕರೆಯಿರಿ. ಈಗ ನಿಮ್ಮ ಕುರ್ಚಿ ಬಿಗಿಯಾಗಿದೆ. ಅಧಿವೇಶನ ಕರೆಯಲು ಯಾವುದೇ ಆತಂಕವಿಲ್ಲ. ವಿಮಾನ ನಿಲ್ದಾಣದಿಂದ ಕುಮಾರಕೃಪಾವರೆಗೂ ನಿಮ್ಮ ಸಿನಿಮಾದ ದೃಶ್ಯವನ್ನು ರಾಜ್ಯದ ಜನ ಕಣ್ತುಂಬಿಕೊಂಡಿದ್ದಾರೆ. ಕೇರಳದಲ್ಲಿ ಅಧಿವೇಶನ ಆರಂಭವಾಗಿದೆ, ಇದೇ 21ರಿಂದ ತಮಿಳುನಾಡಿನಲ್ಲಿ ನಡೆಯಲಿದೆ. ನಿಮಗೆ ಅಧಿವೇಶನ ಕರೆಯಲು ಇಷ್ಟವಿಲ್ಲದಿದ್ದರೆ ವರ್ಚುವಲ್ ಸಭೆಯನ್ನಾದರೂ ಕರೆಯಿರಿ. ಪ್ರಧಾನಮಂತ್ರಿಗಳು ಸಭೆ ನಡೆಸುವಂತೆ ನೀವೂ ವರ್ಚುವಲ್ ಮೂಲಕ ಮಾಡಿ. ಹೆಚ್ಚೆಂದರೆ 300 ಜನ ಇರುತ್ತಾರೆ. ಅಲ್ಲೇ ಚರ್ಚೆ ಮಾಡೋಣ. ಈ ವಿಚಾರದಲ್ಲಿ ನಿಮ್ಮ ನಾಯಕರು ಏನು ಹೇಳುತ್ತಾರೋ ಹೇಳಲಿ, ನೀವು ಏನು ಸ್ಪಷ್ಟನೆ ಕೊಡುತ್ತೀರೋ ಕೊಡಿ. ಈ ವಿಚಾರವನ್ನು ಜನಸಾಮಾನ್ಯರ ಮುಂದೆ ಇಡೋಣ. ನಿಮಗೆ ಈ ಸಭೆ ನಡೆಸಲು ಆಗದಿದ್ದರೆ ಹೇಳಿ, ನಾವೇ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ಪರಸ್ಪರ ಯಾವ ಪದಬಳಕೆ ಮಾಡಿದ್ದಾರೆ ಎಂದರೆ, ಹುಚ್ಚರು, ಅರೆ ಹುಚ್ಚರು, 420ಗಳು, ಲೂಟಿಕೋರರು ಸೇರಿದಂತೆ ಅಸಂವಿಧಾನಿಕ ಪದಗಳನ್ನೂ ಬಳಕೆ ಮಾಡಿದ್ದು, ಅವುಗಳು ನನ್ನ ಬಾಯಲ್ಲಿ ಬರೋದು ಬೇಡ. ಬಾಂಬೆ ಟೀಂನ 17 ಜನರೇ ಇದಕ್ಕೆಲ್ಲ ಕಾರಣ ಅಂತಿದ್ದಾರೆ. ಈ ಪದ ಬಳಕೆ, ತಿಕ್ಕಾಟ, ಭ್ರಷ್ಟಾಚಾರ, ಬಿಜೆಪಿಯ ಕಮಿಷನ್ ವಿಚಾರ ಎಲ್ಲವನ್ನು ಸದನದಲ್ಲಿ ಮಾತನಾಡೋಣ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ದೂರವಾಣಿ ಕದ್ದಾಲಿಕೆ ದೂರಿನ ತನಿಖೆಯನ್ನು ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಸಿಬಿಐಗೆ ವಹಿಸಿದ್ದರು. ಈಗ ಅವರದೇ ಪಕ್ಷದ ಬೆಲ್ಲದ್ ಅವರು ಕದ್ದಾಲಿಕೆ ಆರೋಪ ಮಾಡಿರುವಾಗ ಯಾಕೆ ಬೆಂಗಳೂರು ಪೊಲೀಸ್ ಆಯುಕ್ತರಿಂದ ತನಿಖೆ ನಡೆಸುತ್ತಿದ್ದಾರೆ? ನಾನು ಕಮಿಷನರ್ ಅವರು ಒಳ್ಳೆಯ ಕೆಲಸ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಅವರು ನಿರೀಕ್ಷೆ ಹುಸಿ ಮಾಡುತ್ತಿದ್ದಾರೆ. ಬಡ್ತಿ ಸಿಕ್ಕ ಕಾರಣ ಅನೇಕ ಕೇಸ್ ಗಳನ್ನು ಮುಚ್ಚಿಹಾಕಲು ತರಾತುರಿಯಲ್ಲಿದ್ದಾರೆ. ಮುಂದೆ  ಈ ವಿಚಾರದಲ್ಲಿ ಏನು ಮಾಡಬೇಕೆಂದು ಪಕ್ಷ ತೀರ್ಮಾನಿಸಲಿದೆ ಎಂದಿದ್ದಾರೆ.

ನನ್ನ ದೂರವಾಣಿ ಕರೆ ಕದ್ದಾಲಿಕೆಯಾಗುತ್ತಿದೆ ಎಂದಾಗ ಅಶೋಕ್ ಅವರು ಇದು ಕಾಂಗ್ರೆಸ್ ಸಂಸ್ಕೃತಿ ಎಂದಿದ್ದರು. ಹಾಗಾದ್ರೆ ಬೆಲ್ಲದ್ ಅವರ ದೂರವಾಣಿ ಕರೆ ಕದ್ದಾಲಿಕೆ ಯಾರ ಸಂಸ್ಕೃತಿ? ನನ್ನ ದೂರವಾಣಿ ಕರೆ ಕದ್ದಾಲಿಕೆ ಈ ಕಾಲಕ್ಕೆ ಮುಗಿಯುವುದಿಲ್ಲ. ನನ್ನನ್ನು ಎಷ್ಟು ಸಂಸ್ಥೆಗಳು ಬೆನ್ನತ್ತಿವೆ ಎಂಬ ವಿಚಾರ ಈಗ ಬೇಡ. ಬಿಜೆಪಿಯ ಆಂತರಿಕ ಬಿಕ್ಕಟ್ಟನ್ನು ವಿರೋಧ ಪಕ್ಷದವರು ಬಳಸಿಕೊಳ್ಳುತ್ತಿಲ್ಲ ಅಂತಾ ಸಚಿವ ಈಶ್ವರಪ್ಪನವರೇ ಅಪ್ಪಣೆ ಕೊಡಿಸಿದ್ದಾರೆ. ಇದೆಲ್ಲವನ್ನೂ ನಾವು ಸದನದಲ್ಲೇ ಚರ್ಚೆ ಮಾಡೋಣ ಎಂದು ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ:

ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಮುಖ್ಯಮಂತ್ರಿಯಾಗಲು ನನಗೆ, ಸಿದ್ದರಾಮಯ್ಯ ಅವರಿಗೆ, ಖರ್ಗೆ ಅವರಿಗೆ, ಪರಮೇಶ್ವರ್ ಅವರಿಗೆ, ಇನ್ನೂ ಯಾರ್ಯಾರಿಗೋ ಆಸೆ ಇರಬಹುದು. ಆದರೆ ನಮ್ಮ ಕರ್ತವ್ಯ ಮುಖ್ಯಮಂತ್ರಿ ಆಗೋದಲ್ಲ. ಈ ರಾಜ್ಯದಲ್ಲಿ ಜನಪರ ಕೆಲಸ ಮಾಡಲು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವುದಾಗಿದೆ. ಎಲ್ಲರೂ ಹದ್ದು-ಬಸ್ತಿನಲ್ಲಿರಬೇಕು ಎಂದು ನಾನೂ ಹೇಳಿದ್ದೇನೆ, ದೆಹಲಿ ನಾಯಕರೂ ಹೇಳಿದ್ದಾರೆ. ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿರಬಹುದು. ಈ ವಿಚಾರವಾಗಿ ಕರೆದು ನಾನು ವಿವರಣೆ ಕೇಳಿದ್ದೇನೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಇಲ್ಲಿದ್ದೇನೆ. ನನಗೆ ಪಕ್ಷ ಮುಖ್ಯ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಅಂತಾ ನಾನು ಮೊದಲ ದಿನವೇ ಹೇಳಿ ಪ್ರತಿಜ್ಞೆ ಸ್ವೀಕರಿಸಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.  

ಡೆತ್ ಆಡಿಟ್ ಮಾಡಿ, ಎಲ್ಲ ಮೃತರಿಗೂ ಪರಿಹಾರ ನೀಡಿ:

ರಾಜ್ಯದಲ್ಲಿ ಆದಾಯವಿಲ್ಲದೆ, ವ್ಯಾಪಾರಿಗಳು, ಕಾರ್ಮಿಕರು ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕೋವಿಡ್ ಸಮಯದಲ್ಲಿ ಆಗಿರುವ ನಷ್ಟವನ್ನು ಅಂದಾಜು ಮಾಡಲಾಗುತ್ತಿಲ್ಲ. ರಾಜ್ಯದಲ್ಲಿ ಕೊವಿಡ್ ನಿಂದ ಸತ್ತವರ ಡೆತ್ ಆಡಿಟ್ ಮಾಡಿ ಎಂದು ನಾವು ಒತ್ತಾಯ ಮಾಡುತ್ತಿದ್ದೇವೆ. ಆದರೆ ಸರ್ಕಾರ ಅದನ್ನು ಮಾಡದೇ ಸತ್ತವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಪಂಚಾಯಿತಿ ಹಾಗೂ ಬೂತ್ ಮಟ್ಟದ ಕಾರ್ಯಕರ್ತರು, ಕಳೆದ ವರ್ಷ ಮಾರ್ಚ್ ನಿಂದ ಇಲ್ಲಿಯವರೆಗೂ ಎಷ್ಟು ಜನ ಕೋವಿಡ್ ನಿಂದ ಸತ್ತಿದ್ದಾರೆ ಎಂಬುದರ ಮಾಹಿತಿ ಕಲೆಹಾಕಿ, 1 ಲಕ್ಷ ಪರಿಹಾರಕ್ಕೆ ತಹಶೀಲ್ದಾರರಿಗೆ ಅರ್ಜಿ ನೀಡಬೇಕು. ನಂತರ ನಾನು ಒಂದು ನಂಬರ್ ಕಳುಹಿಸಿಕಡುತ್ತೇನೆ. ಅದಕ್ಕೆ ನೀವು ಮಾಹಿತಿ ಕಳುಹಿಸಬೇಕು. ನಾನು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಎಲ್ಲ ಹಿರಿಯ ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಿ ಹಣ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರ ಘೋಷಿಸಿದ ಪರಿಹಾರ ಎಲ್ಲರಿಗೂ ಸಿಕ್ಕಿಲ್ಲ. ಅವರು ಯಾವುದಾದರೂ ಮಾನದಂಡ ಅನುಸರಿಸಲಿ.  ನಾವೂ ಒಂದು ಪಟ್ಟಿ ಮಾಡುತ್ತೇವೆ. ಪರಿಹಾರ ಕೊಡಿಸುವ ವಿಚಾರದಲ್ಲಿ ಪಕ್ಷಬೇಧ ಬೇಡ. ಯಾವುದೇ ಪಕ್ಷ, ವರ್ಗದ ಯಾರೇ ಮೃತಪಟ್ಟಿದ್ದರೂ ಅವರ ಮಾಹಿತಿ ಪಡೆದು ಕಳುಹಿಸಿ. ಅನೇಕರು ಕೊರೋನಾ ಎಂದು ಹೇಳಿದರೆ ಮೃತದೇಹ ಕೊಡುವುದಿಲ್ಲ ಎಂದು ಕೋವಿಡ್ ಸಾವನ್ನು ಪ್ರಕಟಿಸಿಯೇ ಇಲ್ಲ. ಅಂತಹವರೆಲ್ಲರೂ ಅಫಿಡವಿಟ್ ಹಾಕಿ, ತಹಶೀಲ್ದಾರರಿಗೆ ಅರ್ಜಿ ಕೊಟ್ಟು ಪರಿಹಾರ ಪಡೆಯಲು ನೋಂದಣಿ ಮಾಡಿಸಬೇಕು. ಸರ್ಕಾರ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ. ಅವರೇ ತಂದಿರುವ ಕಾಯಿಲೆಯಿಂದ ಜನ ಸತ್ತಿದ್ದಾರೆ. ಈಗ ಪರಿಹಾರ ಕೊಡಲಿ ಬಿಡಿ. ಈ ಸರ್ಕಾರ ಮುಚ್ಚಿಡುತ್ತಿರುವುದನ್ನು ಬಿಚ್ಚಿಡುವುದೇ ನಮ್ಮ ಕೆಲಸ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ವ್ಯಾಕ್ಸಿನೇಟ್ ಕರ್ನಾಟಕ ಕಾರ್ಯಕ್ರಮ:

ಇಂದು ರಾಹುಲ್ ಗಾಂಧಿ ಅವರ ಜನ್ಮದಿನ. ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಪಕ್ಷ ಸದಾ ಜನರ ಕಷ್ಟಕ್ಕೆ ಸ್ಪಂದಿಸಿಕೊಂಡು ಬರುತ್ತಿದೆ. ಜನ ಹಾಗೂ ದೇಶಕ್ಕಾಗಿ ಈ ಪಕ್ಷ ತ್ಯಾಗ ಮಾಡಿಕೊಂಡು ಬಂದಿದೆ. ಕೋವಿಡ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಮಾರ್ಗದರ್ಶನವನ್ನು ಆಡಳಿತ ಪಕ್ಷದವರು ಲೇವಡಿ ಮಾಡಿದ್ದರು. ಅವರ ಸಲಹೆ ಕೇಳಿದ್ದರೆ ಇಂದಿನ ದುಸ್ಥಿತಿಯನ್ನು ತಡೆಯಬಹುದಿತ್ತು. ಆದರೆ ಸರ್ಕಾರ ಅದನ್ನು ಮಾಡಲಿಲ್ಲ. ಕೆಲವು ದಿನಗಳ ನಂತರ ರಾಹುಲ್ ಗಾಂಧಿ ಅವರ ಸಲಹೆ, ವಿಚಾರ, ಚಿಂತನೆಗಳನ್ನು ಮಾಧ್ಯಮಗಳು ಜನರಿಗೆ ತಿಳಿಸುವ ಪ್ರಯತ್ನ ಮಾಡಿದವು.

ಈ ಪವಿತ್ರ ದಿನ ರಾಜ್ಯದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತಾಗಬೇಕು ಎಂದು ಕಾಂಗ್ರೆಸ್ ಪಕ್ಷ ವ್ಯಾಕ್ಸಿನೇಟ್ ಕರ್ನಾಟಕ ಎಂಬ ಅಭಿಯಾನ ಮಾಡುತ್ತಿದ್ದು, ಇದರಲ್ಲಿ 17 ವರ್ಷದೊಳಗಿನ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಲಸಿಕೆ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ತಮ್ಮದೇ ಆದ ರೀತಿಯಲ್ಲಿ 2 ನಿಮಿಷದೊಳಗಿನ ವಿಡಿಯೋ ಮಾಡಿ, ಅದನ್ನು ಜುಲೈ 1ರ ಒಳಗಾಗಿ www.vaccinatekarnataka.com ಗೆ ಅಪ್ ಲೋಡ್ ಮಾಡಿ. ಈ ವಿಡಿಯೋಗಳನ್ನು ಹಾಡು, ನೃತ್ಯ, ಸಂಗೀತ, ಕಲೆ ಸೇರಿದಂತೆ ಸೃಜನಾತ್ಮಕವಾಗಿ ಮಾಡಿ ಕಳುಹಿಸಬಹುದು. ಅತ್ಯುತ್ತಮ ವಿಡಿಯೋ ಮಾಡಿದ 100 ಮಂದಿಗೆ ನಾವು ಆಂಡ್ರಾಯ್ಡ್ ಟ್ಯಾಬ್ ಗಳನ್ನು ಬಹುಮಾನವಾಗಿ ವಿತರಿಸುತ್ತೇವೆ.

ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಎಲ್ಲ ಪಕ್ಷದವರು, ಜನಸಾಮಾನ್ಯರ ಕಾರ್ಯಕ್ರಮ. ದೇಶದಲ್ಲಿ ಶೇ.5 ರಷ್ಟು ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲಾಗಿಲ್ಲ ಎಂಬ ವರದಿ ಬಂದಿವೆ. 3ನೇ ಅಲೆ ಎದುರಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.  ಕೊರೋನಾ ಸಮಯದಲ್ಲಿ ಆರ್ಥಿಕ ಹೊಡೆತ ಬಿದ್ದಿದ್ದು, ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಹೀಗಾಗಿ ಈ ಸಮಸ್ಯೆಯಿಂದ ಹೊರಬರಲು ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.  3ನೇ ಅಲೆ ವೇಳೆಗೆ ಶೇ.80 ರಷ್ಟು ಜನರಿಗೆ ಲಸಿಕೆ ಕೊಟ್ಟರೆ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಹೀಗಾಗಿ ಈ ಪವಿತ್ರ ದಿನ ನಾನು ನಮ್ಮ ಮಕ್ಕಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಪ್ರಕಟಿಸುತ್ತಿದ್ದೇವೆ ಡಿಕೆಶಿ ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ