ತೆಲಂಗಾಣದಲ್ಲಿ ಶಾಲೆಗಳ ಪುನರಾರಂಭಕ್ಕೆ ಹೈಕೋರ್ಟ್ ತಡೆ

Prasthutha|

ತೆಲಂಗಾಣ : ಕೊರೋನಾ ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ಶಾಲೆಗಳನ್ನು ಸೆ.1ರಿಂದ ಪುನರಾರಂಭಿಸುವ ರಾಜ್ಯ ಸರಕಾರದ ನಿರ್ಧಾರವನ್ನು ತೆಲಂಗಾಣ ಉಚ್ಚ ನ್ಯಾಯಾಲಯವು ತಡೆ ಹಿಡಿದಿದೆ. ಭೌತಿಕ ತರಗತಿಗಳು ಕಡ್ಡಾಯವಲ್ಲ ಎಂದು ಘೋಷಿಸಿದ ಅದು, ರಾಜ್ಯಾದ್ಯಂತ ಶಾಲೆಗಳನ್ನು ಪುನರಾರಂಭಿಸಲು ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿಯೊಂದನ್ನು ಸೆ.4ರೊಳಗೆ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದೆ.ಖಾಸಗಿ ಅಥವಾ ಸರಕಾರಿ ಶಾಲೆಗಳ ಕೆಜಿಯಿಂದ ಹಿಡಿದು 12ನೇ ತರಗತಿಯವರೆಗಿನ ಯಾವುದೇ ವಿದ್ಯಾರ್ಥಿಯನ್ನು ಸೆ.1ರಿಂದ ಭೌತಿಕ ತರಗತಿಗಳಿಗೆ ಹಾಜರಾಗುವಂತೆ ಬಲವಂತಗೊಳಿಸುವಂತಿಲ್ಲ ಎಂದು ಹೇಳಿದೆ.

- Advertisement -

ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದಂತೆಯೂ ಅದು ತಾಕೀತು ಮಾಡಿದೆ. 8ರಿಂದ 12ರವರೆಗಿನ ತರಗತಿಗಳಿಗಳಿಗಾಗಿ ಸೆ.1ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ಸರಕಾರವು ಪ್ರಕಟಿಸಿತ್ತು.

ಆಫ್ಲೈನ್ ತರಗತಿಗಳನ್ನು ನಡೆಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆಯೂ ಸರಕಾರಕ್ಕೆ ಸೂಚಿಸಿರುವ ನ್ಯಾಯಾಲಯವು,ಆಫ್ಲೈನ್ ತರಗತಿಗಳನ್ನು ಪುನರಾರಂಭಿಸಬೇಕೇ ಅಥವಾ ಆನ್ಲೈನ್ ತರಗತಿಗಳನ್ನು ಮುಂದುವರಿಸಬೇಕೆ ಎನ್ನುವುದನ್ನು ನಿರ್ಧರಿಸಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿದೆ.

Join Whatsapp