ಏಷ್ಯಾ ಕಪ್‌| ರೋಹಿತ್‌ ಅರ್ಧಶತಕದ ಮಿಂಚು, ಲಂಕಾ ಗೆಲುವಿಗೆ 174 ರನ್‌ ಗುರಿ

Prasthutha|

ದುಬೈ: ಏಷ್ಯಾ ಕಪ್‌ ಫೈನಲ್‌ ಆಸೆ ಜೀವಂತವಾಗಿರಿಸಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಲಂಕಾ ಗೆಲುವಿಗೆ ಟೀಮ್‌ ಇಂಡಿಯಾ 174 ರನ್‌ಗಳ ಗುರಿ ನೀಡಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ʻಡೂ ಆರ್‌ ಡೈʼ ಪಂದ್ಯದಲ್ಲಿ ಟಾಸ್‌ ಸೋತ ಭಾರತ, ನಾಯಕ ರೋಹಿತ್‌ ಶರ್ಮಾ ಗಳಿಸಿದ ಆಕರ್ಷಕ ಅರ್ಧಶತಕದ (72 ರನ್‌)  ನೆರವಿನಿಂದ 8 ವಿಕೆಟ್‌ ನಷ್ಟದಲ್ಲಿ 173 ರನ್‌ ಗಳಿಸಿದೆ.

- Advertisement -

ಸೂರ್ಯಕುಮಾರ್‌ ಯಾದವ್‌ 34 ರನ್‌ ಮತ್ತು ಹಾರ್ದಿಕ್‌ ಪಾಂಡ್ಯಾ, ರಿಷಭ್‌ ಪಂತ್‌ ತಲಾ 17 ರನ್‌ಗಳಿಸಿ ನಿರ್ಗಮಿಸಿದರು. ಕೊನೆಯಲ್ಲಿ ಆರ್‌ ಅಶ್ವಿನ್‌ 7 ಎಸೆತಗಳನ್ನು ಎದುರಿಸಿ 15 ರನ್‌ಗಳಿಸಿದರು.  ಶ್ರೀಲಂಕಾ ಪರ ಬೌಲಿಂಗ್‌ನಲ್ಲಿದಿಲ್ಶಾನ್‌ ಮಧುಶಂಕ ಮೂರು ವಿಕೆಟ್‌, ಚಮಿಕ ಕರುಣರತ್ನೆ ಮತ್ತು ದಸುನ್‌ ಶನಕ ತಲಾ ಎರಡು ವಿಕೆಟ್‌  ಪಡೆದರು.

ಆರಂಭಿಕನಾಗಿ ಬಂದ ಕೆಎಲ್‌ ರಾಹುಲ್‌, ಆರು ರನ್‌ ಗಳಿಸಿದ್ದ ವೇಳೆ ಮಹೇಶ್‌ ತೀಕ್ಷಣ ಎಸೆತದಲ್ಲಿ ಎಲ್‌ಬಿಡ್ಬ್ಲ್ಯೂಗೆ ಬಲಿಯಾದರು. ಲೆಗ್‌ಸ್ಟಂಪ್‌ನಿಂದ ಆಚೆಗೆ ಹೋಗುತ್ತಿದ್ದ ಚೆಂಡನ್ನು ಕ್ರೀಸ್‌ನಿಂದ ಮುಂದೆ ಬಂದು ಆಡಿದ್ದರು. ಆದರೂ ಮೈದಾನದ ಅಂಪೈರ್‌ ನೀಡಿದ್ದ ತೀರ್ಪನ್ನು ಟಿವಿ ಅಂಪೈರ್‌ ಎತ್ತಿಹಿಡಿದರು.

- Advertisement -

ಶೂನ್ಯಕ್ಕೆ ಮರಳಿದ ಕೊಹ್ಲಿ

ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಕೊಹ್ಲಿ ಬಂದಷ್ಟೇ ವೇಗದಲ್ಲಿ ಪೇವಿಲಿಯನ್‌ ಸೇರಿಕೊಂಡರು. ವೇಗಿ ದಿಲ್ಶನ್‌ ಮಧುಶಂಕ ಗುಡ್‌ಲೆಂತ್‌ ಎಸೆತವನ್ನು ಅಂದಾಜಿಸುವಲ್ಲಿ ವಿಫಲರಾದ ವಿರಾಟ್‌ ಕೊಹ್ಲಿ, ಕೆಟ್ಟ ಹೊಡೆತಕ್ಕೆ ಪ್ರಯತ್ನಿಸಿ ಕ್ಲೀನ್‌ ಬೌಲ್ಡ್‌ ಆದರು. ಲೀಗ್‌ ಹಂತದಲ್ಲಿ ಹಾಂಕಾಂಗ್‌ ವಿರುದ್ಧ ಮತ್ತು ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಕರ್ಷಕ ಅರ್ಧಶತಕ ದಾಖಲಿಸಿದ್ದ ಕೊಹ್ಲಿ, ಲಂಕಾ ವಿರುದ್ಧವೂ ಅಬ್ಬರಿಸುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ನಾಲ್ಕು ಎಸೆತಗಳಲ್ಲೇ ಇನ್ನಿಂಗ್ಸ್‌ ಮುಗಿಸಿದ ವಿರಾಟ್‌, ನಿರಾಸೆಯಿಂದಲೇ ಮರಳಿದರು. ಆ ಮೂಲಕ ಟೀಮ್‌ ಇಂಡಿಯಾ ಕೇವಲ 13 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಎರಡು ಕಳೆದುಕೊಂಡಿದೆ.

ರೋಹಿತ್‌ ಅರ್ಧಶತಕ

ಆರಂಭಿಕನಾಗಿ ಬಂದ ನಾಯಕ ರೋಹಿತ್‌ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿ ಅರ್ಧಶತಕ ದಾಖಲಿಸಿದರು.  ಅಶಿತಾ ಫೆರ್ನಾಂಡೋ ಎಸೆದ 10ನೇ ಓವರ್‌ನ  ನಾಲ್ಕನೇ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಶರ್ಮಾ,  ಅರ್ಧಶತಕ ಪೂರ್ತಿಗೊಳಿಸಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಬ್ಯಾಟ್‌ನಿಂದ ದಾಖಲಾಗುತ್ತಿರುವ 32ನೇ ಅರ್ಧಶತಕ ಇದಾಗಿದೆ. ಆ ಮೂಲಕ ಕಳೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಪಾಲಾಗಿದ್ದ ದಾಖಲೆಯನ್ನು ಸಮಬಲ ಸಾಧಿಸಿದ್ದಾರೆ.

ಏಷ್ಯಾ ಕಪ್‌ ಫೈನಲ್‌ ಆಸೆ ಜೀವಂತವಾಗಿರಿಸಲು ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿರುವ ಭಾರತ, ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಸ್ಪಿನ್ನರ್‌ ರವಿ ಬಿಷ್ಣೋಯ್ ತಂಡದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ ಅವಕಾಶ ನೀಡಲಾಗಿದೆ.

Join Whatsapp