ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಟೀಮ್ ಇಂಡಿಯಾ | ಟಾಮ್’ಲಾಥಮ್’ ಅಬ್ಬರಕ್ಕೆ ಬೌಲರ್’ಗಳು ತಬ್ಬಿಬ್ಬು

Prasthutha|

ಟಿ20 ಸರಣಿಯ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಟೀಮ್ ಇಂಡಿಯಾ, ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ.

- Advertisement -

ಆಕ್ಲೆಂಡ್’ನ ಈಡನ್ ಪಾರ್ಕ್ನಲ್ಲಿ ಶುಕ್ರವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್’ಇಂಡಿಯಾ ನೀಡಿದ್ದ 307 ರನ್’ಗಳ ಗುರಿಯನ್ನು ಕಿವೀಸ್, ಕೇವಲ 3 ವಿಕೆಟ್ ನಷ್ಟದಲ್ಲಿ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಚೇಸ್ ಮಾಡಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ವಿಲಿಯಮ್ಸನ್’ ಬಳಗ 1-0 ಮುನ್ನಡೆ ಸಾಧಿಸಿದೆ.

ಆರಂಭಿಕರಿಬ್ಬರ ನಿರ್ಗಮನದ ಬಳಿಕ ಜೊತೆಯಾದ ನಾಯಕ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ 200 ರನ್’ಗಳ ಜೊತೆಯಾಟದ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದರು. ʻಸ್ವಾರ್ಥ ರಹಿತʼ ಬ್ಯಾಟಿಂಗ್ ನಡೆಸಿದ ವಿಲಿಯಮ್ಸನ್, 98 ಎಸೆತಗಳಲ್ಲಿ 94 ರನ್ ಗಳಿಸಿದರು. ಶತಕ ಗಳಿಸುವ ಅವಕಾಶವಿದ್ದರೂ, ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ಸಹ ಆಟಗಾರ ಲಾಥಮ್’ಗೆ ಹೆಚ್ಚು ಕ್ರೀಸ್ ಬಿಟ್ಟುಕೊಡುವ ಮೂಲಕ ಮತ್ತೊಮ್ಮೆ ಮಾದರಿಯಾದರು.

- Advertisement -

ನ್ಯೂಜಿಲೆಂಡ್ ಗೆಲುವಿಗೆ ಅಂತಿಮ 18 ಓವರ್’ಗಳಲ್ಲಿ 144 ರನ್’ಗಳ ಅಗತ್ಯವಿತ್ತು. ಈ ವೇಳೆ 43 ಎಸೆತಗಳಲ್ಲಿ ಲಾಥಮ್ 36 ರನ್ಗಳಿಸಿದ್ದರು. ಆದರೆ 5 ಸಿಕ್ಸರ್ ಮತ್ತು 19 ಬೌಂಡರಿಗಳೊಂದಿಗೆ ಅಬ್ಬರಿಸಿದ ಲಾಥಮ್, ಕೊನೆಯಲ್ಲಿ 104 ಎಸೆತಗಳಲ್ಲಿ ಅಜೇಯ 145 ರನ್ ಗಳಿಸಿರು. ಆ ಮೂಲಕ 307 ರನ್’ಗಳ ಗುರಿಯನ್ನು ಆತಿಥೇಯರು 47.1 ಓವರ್’ಗಳಲ್ಲೇ ಚೇಸ್ ಮಾಡಿದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಾಥಮ್ಗೆ ಒಲಿಯಿತು.

ಭಾರತದ ಪರ  ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಯುವ ವೇಗಿ ಉಮ್ರಾನ್ ಮಲಿಕ್, 2 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು. ವಾಷಿಂಗ್ಟನ್ ಸುಂದರ್ ಹೊರತು ಪಡಿಸಿ, ಉಳಿದ ನಾಲ್ವರು ಬೌಲರ್ ಗಳು 60+ ನೀಡಿ ದುಬಾರಿಯಾದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ, ಆರಂಭಿಕ ಶಿಖರ್ ಧವನ್ (72), ಶುಭಮನ್ ಗಿಲ್ (50) ಹಾಗೂ ಶ್ರೇಯಸ್ ಅಯ್ಯರ್ (80) ಗಳಿಸಿದ ಅರ್ಧಶತಕಗಳ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 306 ರನ್ ಗಳಿಸಿತ್ತು. ಸಂಜು ಸ್ಯಾಮ್ಸನ್ 36 ಮತ್ತು ವಾಷಿಂಗ್ಟನ್ ಸುಂದರ್ 37 ರನ್ ಗಳಿಸಿದರು.  ನ್ಯೂಜಿಲೆಂಡ್ಪರ ಟಿಮ್ ಸೌಥಿ ಮತ್ತು ಲೂಕಿ ಫರ್ಗ್ಯೂಸನ್ತಲಾ 3 ವಿಕೆಟ್ ಪಡೆದರು.

Join Whatsapp