►ಸಮಾಜದ ಅಭ್ಯುದಯದಲ್ಲಿ ಪ್ರತಿ ಪ್ರಜ್ಞಾವಂತ ವ್ಯಕ್ತಿಯೂ ಶಿಕ್ಷಕ-ಬೋಧಕರಾಗಬೇಕು
ಸೆಪ್ಟಂಬರ್ 5ರಂದು ದೇಶಾದ್ಯಂತ ಆಚರಿಸುವ ಶಿಕ್ಷಕರ ದಿನಾಚರಣೆಯನ್ನು ಸಾಮಾನ್ಯವಾಗಿ ಶಾಲಾ ಕಾಲೇಜುಗಳ ಬೋಧಕ ವರ್ಗಗಳಿಗೆ ಸೀಮಿತಗೊಳಿಸಿರುವುದರಿಂದ, ಈ ಆಚರಣೆಯೂ ಸಹ ವಿದ್ಯಾಸಂಸ್ಥೆಗಳ ನಾಲ್ಕು ಗೋಡೆಗಳಿಂದಾಚೆಗೆ ವ್ಯಾಪಿಸಲು ಸಾಧ್ಯವಾಗುತ್ತಿಲ್ಲ. ಡಾ ರಾಧಾಕೃಷ್ಣನ್ ಅವರನ್ನು ಸ್ಮರಿಸುವುದರೊಂದಿಗೇ ತಡವಾಗಿಯಾದರೂ ಭಾರತದ ಸಾಮಾಜಿಕ ಬೌದ್ಧಿಕ ವಲಯದಲ್ಲಿ, ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯರ ಮತ್ತು ಅವಕಾಶವಂಚಿತರ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ ಸಾವಿತ್ರಿ ಬಾಯಿ ಫುಲೆ ಅವರನ್ನು ನಾವು ಸ್ಮರಿಸಲಾರಂಭಿಸಿದ್ದೇವೆ. ಸಾಮಾಜಿಕ ಅಭ್ಯುದಯದಲ್ಲಿ , ಸಾಂಸ್ಕೃತಿಕ ವಿಕಸನದ ಮಾರ್ಗದಲ್ಲಿ ಶಿಕ್ಷಣ ಒಂದು ಬೀಜ ಮಾತ್ರ. ಶೈಕ್ಷಣಿಕ ಭೂಮಿಕೆಗಳು ಈ ಬೀಜಕ್ಕೆ ನೀರೆರೆದು ಪೋಷಿಸುವ ಫಲವತ್ತತೆಯ ನೆಲೆಗಳು. ಬೋಧನೆ ಎನ್ನುವುದು ಈ ಭೂಮಿಕೆಗಳನ್ನು ಒಂದುಗೂಡಿಸಿ ಬೌದ್ಧಿಕ ಸಮೃದ್ಧಿ, ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯನ್ನು ಸೃಷ್ಟಿಸುವ ಒಂದು ಪ್ರಧಾನ ವಾಹಕ. ಈ ಮೂರೂ ಪ್ರಧಾನ ನೆಲೆಗಳನ್ನು ಸಮಕಾಲೀನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವರ್ತಮಾನದ ನೆಲೆಯಲ್ಲಿಟ್ಟು ನಿಷ್ಕರ್ಷೆ ಮಾಡದೆ ಹೋದರೆ ಬಹುಶಃ ಶಿಕ್ಷಕ ದಿನಾಚರಣೆ ಶುಷ್ಕವಾಗಿಬಿಡುತ್ತದೆ.
ಹಿಂದೆಂದಿಗಿಂತಲೂ ಇಂದಿನ ಸನ್ನಿವೇಶದಲ್ಲಿ ಶಿಕ್ಷಣ ಮತ್ತು ಶಿಕ್ಷಕ/ಬೋಧಕ ವೃತ್ತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವುದನ್ನು ಗಮನಿಸುತ್ತಲೇ, ಈ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರ ಜವಾಬ್ದಾರಿ, ಹೊಣೆಗಾರಿಕೆ, ಉತ್ತರದಾಯಿತ್ವ ಮತ್ತು ಕರ್ತವ್ಯಪ್ರಜ್ಞೆಯ ಸುತ್ತಲೂ ನಡೆಯಬಹುದಾದ ಸಂವಾದಗಳು, ಸೃಷ್ಟಿಸಬಹುದಾದ ಸಂಕಥನಗಳು ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬೇಕಿದೆ. ಇಂದು ಶಿಕ್ಷಣ ಎನ್ನುವುದು ಬದುಕು ಕಟ್ಟಿಕೊಳ್ಳಲು ಬೇಕಾಗುವ ಕಚ್ಚಾ ಪದಾರ್ಥ ಆಗಿರುವುದರಿಂದ, ಜ್ಞಾನಾರ್ಜನೆ ಎನ್ನುವುದೂ ಸಹ ಭೌತಿಕ ಸಮಾಜವನ್ನು ಕಟ್ಟಲು ನೆರವಾಗುವ ಒಂದು ಸುಭದ್ರ ನೆಲೆಯಂತಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ವ್ಯಾಸಂಗದ ಸ್ತರದವರೆಗೂ ಶಿಕ್ಷಣ, ಶೈಕ್ಷಣಿಕ ಪರಿಕರಗಳು ಮತ್ತು ಬೋಧನಾ ವಾಹಿನಿಗಳು ಕೋಟ್ಯಂತರ ಜನರನ್ನು ಈ ನೆಲೆಗಳಿಂದ ಹೊರಹಾಕುತ್ತಲೇ ಇವೆ. ಜ್ಞಾನ ಪ್ರದರ್ಶನಕ್ಕೂ, ಜ್ಞಾನ ಸಾಧನೆಗೂ ಇರುವ ಸೂಕ್ಷ್ಮ ಅಂತರವನ್ನು ಗಮನಿಸಿದಾಗ, ಭಾರತದ ಶಿಕ್ಷಣ ವ್ಯವಸ್ಥೆ ಸೃಷ್ಟಿಸುತ್ತಿರುವ ಕೋಟ್ಯಂತರ ಜ್ಞಾನ ಕೇಂದ್ರಗಳು, ತಮ್ಮೊಳಗಿನ ಪಕ್ವತೆಯನ್ನು ರವಾನಿಸುವುದರಲ್ಲೇ ತೃಪ್ತಿಪಡೆಯುತ್ತಿವೆ. ಪರಿಪಕ್ವತೆಯೊಂದಿಗೆ ಮತ್ತಷ್ಟು ಸಾಧಿಸುವ ಹಪಹಪಿಯನ್ನು ಕಳೆದುಕೊಳ್ಳುತ್ತಿದೆ. ಸಿ ವಿ ರಾಮನ್ ನಂತರ ಭಾರತಕ್ಕೆ ಏಕೆ ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿ ಗಳಿಸಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಪಡೆಯಬಹುದು.
ಶಿಕ್ಷಕ ದಿನಾಚರಣೆಯನ್ನು ಬಂಧಿಸಿರುವಂತೆಯೇ ನಮ್ಮ ಸಮಾಜ ಶಿಕ್ಷಣವನ್ನೂ ಸಹ ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳ ಕೋಣೆಗಳಲ್ಲಿ ಬಂಧಿಸಿಟ್ಟಿರುವುದು ವರ್ತಮಾನದ ಸುಡು ವಾಸ್ತವ. ಆದರೆ ಈ ನಾಲ್ಕು ಗೋಡೆಗಳ ನಡುವೆ ನೂರಾರು ಎಳೆ ಮನಸ್ಸುಗಳೊಡನೆ ಬೌದ್ಧಿಕ ಸಂವಾದ ನಡೆಸುವ ಬೋಧಕ ವರ್ಗ ಈ ಕೋಣೆಗಳ ನಾಲ್ಕು ಗೋಡೆಗಳನ್ನು ಭಂಜಿಸಿ, ಹೊರಜಗತ್ತಿನ ಕಡೆಗೆ ನೋಡುವ ಒಂದು ಸನ್ನಿವೇಶದಲ್ಲಿ ನಾವಿದ್ದೇವೆ. ಇಲ್ಲಿ ಉದ್ಭವಿಸುವ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿ, ಸಾಂಸ್ಕೃತಿಕ ಹೊಣೆಗಾರಿಕೆ ಮತ್ತು ಬೌದ್ಧಿಕ ಉತ್ತರದಾಯಿತ್ವ ಮುಂತಾದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಇಡೀ ಸಮಾಜದ ಮೇಲಿರುವ ಹೊರೆಯಾಗಿಯೇ ಕಾಣುತ್ತದೆ. ಬೋಧಕ ವರ್ಗಗಳು ತಮ್ಮ ವೃತ್ತಿಪರ ಗೋಡೆಗಳಿಂದಾಚೆಗೆ ಕಣ್ಣು ಹಾಯಿಸಬೇಕು ಎಂದು ಹೇಳುತ್ತಲೇ ಹೊರಜಗತ್ತಿನಲ್ಲಿರುವ ಪ್ರತಿ ಪ್ರಜ್ಞಾವಂತ ವ್ಯಕ್ತಿಯೂ ಈ ಗೋಡೆಗಳ ನಡುವೆ ನಡೆಯುವ ಬೌದ್ಧಿಕ ಪ್ರಕ್ರಿಯೆಯತ್ತ ಗಮನ ಹರಿಸುವುದೂ ಮುಖ್ಯ ಎಂದು ಅರ್ಥಮಾಡಿಕೊಳ್ಳಬೇಕಿದೆ. ಬೋಧನೆಗೊಳಗಾಗುವ ಎಳೆ ಮನಸುಗಳು, ವಿದ್ಯಾರ್ಜನೆಯ ಅನುಯಾಯಿಗಳು ಬೋಧನೆಯ ವಸ್ತುಗಳಿಂದಾಚೆಗಿನ ಜಗತ್ತನ್ನು ನೋಡುವಂತೆ ಮಾಡುವುದು ವರ್ತಮಾನ ಸಮಾಜದ ಆದ್ಯತೆಯಾಗಬೇಕಿದೆ.
ಸರ್ವರಿಗೂ ಶಿಕ್ಷಣ ಎನ್ನುವ ಧ್ಯೇಯವಾಕ್ಯಕ್ಕೂ, ಸರ್ವರಿಗೂ ಸಮಬಾಳು ಎಂಬ ಘೋಷವಾಕ್ಯಕ್ಕೂ ಇರುವ ನೇರ ಸಂಬಂಧವನ್ನು ವಿದ್ಯಾರ್ಜನೆಯಲ್ಲಿ ತೊಡಗಿರುವ ಎಳೆ ಮನಸುಗಳಿಗೆ ಅರ್ಥಮಾಡಿಸುವುದು ಶಿಕ್ಷಣ ವ್ಯವಸ್ಥೆಯ ಮತ್ತು ಬೋಧಕ ವರ್ಗದ ಆದ್ಯತೆಯಾಗಬೇಕಿದೆ. ಆಗಲೇ ಹೊರಜಗತ್ತಿನಲ್ಲಿ ನಾವು ನಿರ್ಮಿಸಬಯಸುವ ಒಂದು ಸೌಹಾರ್ದಯುತ, ಸಮನ್ವಯದ ಬಹುತ್ವ ಸಮಸಮಾಜವನ್ನು ಸಾಕಾರಗೊಳಿಸುವ ಕಾಲಾಳುಗಳನ್ನು ಸೃಷ್ಟಿಸಲು ಸಾಧ್ಯ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನಾರ್ಜನೆಯ ವಾಹಿನಿಗಳನ್ನು, ತೊರೆಗಳನ್ನು ನಿರ್ಮಿಸುವಲ್ಲಿ ದೇಶ ಬಹಳ ಮುಂದೆ ಸಾಗಿದೆ. ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಿಗೆ ಭಾರತ ತವರು ಮನೆಯಂತಾಗಿದೆ. ಸಮಾಜಶಾಸ್ತ್ರ, ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ ಮುಂತಾದ ಜ್ಞಾನಶಾಖೆಗಳಲ್ಲಿ ಅನೇಕಾನೇಕ ವಿದ್ವಾಂಸರನ್ನು ಭಾರತ ಸೃಷ್ಟಿಸಿದೆ. ಭಾರತೀಯ ಸಮಾಜ ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಉನ್ನತಿ ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣ ಒಂದು ಅಸ್ತ್ರ ಎಂಬ ಉದಾತ್ತ ಚಿಂತನೆಯೊಂದಿಗೇ, ಭಾರತದ ಸಂವಿಧಾನದಲ್ಲಿ ಶಿಕ್ಷಣವನ್ನು ಒಂದು ಆದ್ಯತಾ ಕ್ಷೇತ್ರ ಎಂದೇ ಪರಿಗಣಿಸಲಾಗಿದೆ.
ಆದರೆ ಈ ಔನ್ನತ್ಯವನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೆ ಎಂಬ ಪ್ರಶ್ನೆ ಎದುರಾದಾಗ, ನಾವು ಕೇವಲ ಡಾಕ್ಟರೇಟುಗಳು, ಪಿಹೆಚ್ಡಿ ಪ್ರಬಂಧಗಳು ಮತ್ತು ಪದವಿ ಪ್ರಮಾಣ ಪತ್ರಗಳತ್ತ ಮಾತ್ರ ನೋಡುತ್ತಿದ್ದೇವೆ. ಇಂದಿಗೂ ನೂರಾರು ವಿಶ್ವವಿದ್ಯಾಲಯಗಳಿಂದ, ಸಾವಿರಾರು ವಿದ್ವಾಂಸರು ತಮ್ಮ ವಿದ್ವತ್ಪೂರ್ಣ ಅಧ್ಯಯನದ ಮೂಲಕ ಅತ್ಯುನ್ನತ ಸಾಧನೆ ಮಾಡಿರುವುದನ್ನು ಗುರುತಿಸುತ್ತೇವೆ. ಈ ಬೌದ್ಧಿಕ ವಲಯದಿಂದಲೇ ಭಾರತದ ಸಾಹಿತ್ಯವೂ ಸಮೃದ್ಧವಾಗಿದೆ. ಅನೇಕಾನೇಕ ಬೌದ್ಧಿಕ ಮೇಧಾವಿಗಳು, ಚಿಂತಕರು, ವಿದ್ವಾಂಸರು, ಸಂಶೋಧಕರು ತಮ್ಮ ಸಾಹಿತ್ಯ ಕೃತಿಗಳ ಮೂಲಕ, ಉಪನ್ಯಾಸಗಳ ಮೂಲಕ ಭಾರತೀಯ ಸಮಾಜವನ್ನು ಆರೋಗ್ಯಪೂರ್ಣವಾಗಿಸುವ ಮಾರ್ಗಗಳನ್ನು ಸೃಷ್ಟಿಸಿದ್ದಾರೆ. ಇಂದಿಗೂ ಸೃಷ್ಟಿಸುತ್ತಲೇ ಇದ್ದಾರೆ. ಸಾಂಸ್ಕೃತಿಕ ಜಗತ್ತಿನ ವಿಸ್ತಾರ ಮತ್ತು ಅಗಾಧತೆಯನ್ನು ಶೋಧಿಸಿ, ಪರಿಶೋಧಿಸುವ ಮೂಲಕ ಪ್ರಾಚೀನ ಭಾರತದಿಂದ ಆಧುನಿಕ ಭಾರತದವರೆಗಿನ ಹೆಜ್ಜೆ ಗುರುತುಗಳನ್ನು ಶೋಧಿಸಿ, ಭವಿಷ್ಯ ಭಾರತಕ್ಕೆ ಒಂದು ಸುಭದ್ರ ಬುನಾದಿಯನ್ನು ನಿರ್ಮಿಸಲು ನೆರವಾಗಿದ್ದಾರೆ. ಈ ಶಿಕ್ಷಕ/ಬೋಧಕ ವೃಂದಕ್ಕೆ ಇದರ ಶ್ರೇಯ ಸಲ್ಲಲೇಬೇಕಿದೆ.
ಆದರೆ ವರ್ತಮಾನದ ಸನ್ನಿವೇಶದಲ್ಲಿ ಈ ಬುನಾದಿಯೇ ಅಲುಗಾಡುತ್ತಿರುವ ದುಃಸ್ವಪ್ನವೂ ನಮಗೆ ಎದುರಾಗುತ್ತಿದೆ. ಶಾಲೆ-ಕಾಲೇಜು-ವಿವಿಗಳ ಪಠ್ಯಕ್ರಮಗಳಿಂದಾಚೆಗೂ ಒಂದು ಜಗತ್ತು ತನ್ನದೇ ಆದ ಚಲನಶೀಲತೆಯೊಂದಿಗೆ ಜೀವಂತವಾಗಿದೆ ಎಂಬ ವಾಸ್ತವವನ್ನು ಗ್ರಹಿಸಲೂ ಸಾಧ್ಯವಾಗದಂತೆ, ಗ್ರಹಿಸಿದರೂ ಸಹ ಈ ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳಿಗೆ ಸ್ಪಂದಿಸಲು ಸಾಧ್ಯವಾಗದಂತೆ, ಶೈಕ್ಷಣಿಕ ವಲಯವನ್ನು ಮಾರುಕಟ್ಟೆ-ರಾಜಕಾರಣ ಮತ್ತು ವ್ಯಕ್ತಿಗತ ಬದುಕಿನ ಅನಿವಾರ್ಯತೆಗಳು ಬಂಧಿಸಿಬಿಟ್ಟಿವೆ. ಜ್ಞಾನ ದಾಸೋಹದ ನೆಲೆಗಳಲ್ಲೇ ಮನುಜ ಸೂಕ್ಷ್ಮತೆಯಿಲ್ಲದಂತಹ ಘಟನೆಗಳು ನಡೆಯುತ್ತಿರುವುದನ್ನು ಗಮನಿಸಿದಾಗ ಶಿಕ್ಷಣ ಮತ್ತು ಬೋಧನೆಯ ನಡುವಿನ ಸೂಕ್ಷ್ಮ ತಂತುಗಳು ಎಲ್ಲೋ ಭ್ರಷ್ಟವಾಗಿವೆ ಎಂಬ ಭಾವನೆ ಮೂಡುವುದು ಸಹಜ. ಈ ಭೌತಿಕ ಘಟಕಗಳಿಂದ ಹೊರಬೀಳುವ ಬೌದ್ಧಿಕ ಆಸ್ತಿಯ ತುಣುಕುಗಳು ಒಂದೆಡೆ ಮಾರುಕಟ್ಟೆಯ ಪರಿಕರಗಳಾಗಿ ವ್ಯಕ್ತಿಗತ ಬದುಕಿಗೆ ಸೀಮಿತವಾಗುತ್ತಿದ್ದರೆ ಮತ್ತೊಂದೆಡೆ ಈ ಮಾರುಕಟ್ಟೆಯನ್ನು-ಸಾಂಸ್ಕೃತಿಕ ರಾಜಕಾರಣವನ್ನು ನಿಯಂತ್ರಿಸುವ ಪ್ರಬಲ ವರ್ಗಗಳ ಕಾಲಾಳುಗಳಾಗಿ ಪರಿವರ್ತನೆಯಾಗುತ್ತಿರುವುದನ್ನು ವಿಷಾದದಿಂದಲೇ ಗಮನಿಸಬೇಕಿದೆ.
ಶಿಕ್ಷಣ ವ್ಯವಸ್ಥೆಯ ಮೂಲಕ ನಾವು ಮಾರುಕಟ್ಟೆಗೆ ಬೇಕಾಗುವಂತಹ ಬೌದ್ಧಿಕ ಸರಕುಗಳನ್ನು ತಯಾರಿಸುವುದು ಸಾಮಾಜಿಕಾರ್ಥಿಕ ಅನಿವಾರ್ಯತೆ. ಇದರಿಂದಾಚೆಗೂ ಒಂದು ಸಮಾಜ, ಸಂಸ್ಕೃತಿ ಮತ್ತು ವರ್ತಮಾನದ ಪರಿಸರ ನಮ್ಮ ನಡುವೆ ಜೀವಂತವಾಗಿದೆ. ಈ ಸಾಮಾಜಿಕ ಪರಿಸರದಲ್ಲಿ ಹಲವು ದಶಕಗಳ ಪರಿಶ್ರಮದಿಂದ ಕಟ್ಟಿಬೆಳೆಸಿದ ಸಾಂಸ್ಕೃತಿಕ ನೆಲೆಗಳು ಹಂತಹಂತವಾಗಿ ಶಿಥಿಲವಾಗುತ್ತಿವೆ. 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಸಾಮಾಜಿಕ-ಸಾಂಸ್ಕೃತಿಕ ಸಂವೇದನೆ, ಮನುಜ ಸೂಕ್ಷ್ಮತೆ, ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆ ಮತ್ತಷ್ಟು ಗಟ್ಟಿಯಾಗಬೇಕಿತ್ತಲ್ಲವೇ ? ಆದರೆ ಈ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಜಾತಿ, ಮತ, ಧರ್ಮಗಳ ಗೋಡೆಗಳ ನಡುವೆ ಬಂಧಿಸಿಟ್ಟು, ಕನಿಷ್ಠ ಜೀವ ಸೂಕ್ಷ್ಮತೆಯೂ ಇಲ್ಲದಂತಹ ಒಂದು ಸಮಾಜವನ್ನು 21ನೆಯ ಶತಮಾನದ ಮೂರನೆಯ ದಶಕದಲ್ಲಿ ನಾವು ಕಾಣುತ್ತಿದ್ದೇವೆ. ತೊಡೆದುಹಾಕಬೇಕಿದ್ದ ಅಸ್ಪೃಶ್ಯತೆ, ಜಾತಿ ಶ್ರೇಷ್ಠತೆ, ಮತಧಾರ್ಮಿಕ ಅಹಮಿಕೆ ಮತ್ತು ಆಧ್ಯಾತ್ಮಿಕ ಪಾರಮ್ಯಗಳು ರೂಪಾಂತರ ಹೊಂದುವ ಮೂಲಕ ವಿಭಿನ್ನ ನೆಲೆಗಳಲ್ಲಿ, ಆಯಾಮಗಳಲ್ಲಿ ಹುಟ್ಟಿಕೊಳ್ಳುತ್ತಿವೆ. ಈ ಮರುಹುಟ್ಟು ಪಡೆದ ವಿಘಟನೆಯ ನೆಲೆಗಳಲ್ಲಿ ಕಾಲಾಳುಗಳಾಗಲು ಬೌದ್ಧಿಕ ಸರಕುಗಳನ್ನು ತಯಾರಿಸಲು ಶಾಲಾ ಕಾಲೇಜುಗಳು ಸಜ್ಜಾಗುತ್ತಿವೆ.
ಹಾಗಾಗಿಯೇ ಶಿಕ್ಷಣ ಕ್ರಮದಲ್ಲಿ, ಶಾಲಾ ಪಠ್ಯಗಳಲ್ಲಿ ಏನನ್ನು ಬೋಧಿಸಬೇಕು ಎನ್ನುವುದಕ್ಕಿಂತಲೂ ಹೆಚ್ಚಾಗಿ ಯಾರನ್ನು ಕುರಿತು ಬೋಧಿಸಬೇಕು ಎಂಬ ಚರ್ಚೆಯೇ ಇಂದು ಪ್ರಧಾನವಾಗಿದೆ. ಭವಿಷ್ಯ ಭಾರತದ ನಿರ್ಮಾತೃಗಳಾದ ಶಾಲಾ ಮಕ್ಕಳಿಗೆ ಯಾವ ಚರಿತ್ರೆಯನ್ನು ಬೋಧಿಸಬೇಕು ಎಂದು ಚರ್ಚಿಸಲಾಗುತ್ತಿದೆ ಆದರೆ ಈ ಚರಿತ್ರೆಯ ಹೆಜ್ಜೆಗಳನ್ನು ಯಾವ ನೆಲೆಯಲ್ಲಿ ಬೋಧಿಸಬೇಕು ಎಂದು ಯೋಚಿಸಲಾಗುತ್ತಿಲ್ಲ. ಸಮಕಾಲೀನ ಬೌದ್ಧಿಕ ಉತ್ಖನನದಿಂದ ಲಭ್ಯವಾಗುವ ಚರಿತ್ರೆಯ ಪಳೆಯುಳಿಕೆಗಳನ್ನು ವರ್ತಮಾನದ ಪ್ರಯೋಗಾಲಯದಲ್ಲಿ ಪರಿಷ್ಕರಿಸಿ, ಪ್ರಾತ್ಯಕ್ಷಿಕೆಯಂತೆ ಮಕ್ಕಳ ಮುಂದಿಡುವ ಮೂಲಕ, ಇತಿಹಾಸವನ್ನು ಗ್ರಹಿಸಲು ಇರಬೇಕಾದ ವೈಚಾರಿಕ ಪ್ರಜ್ಞೆಯನ್ನೇ ಹೊಸಕಿ ಹಾಕಲಾಗುತ್ತಿದೆ. ಇಂದು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಢಾಳಾಗಿ ಕಾಣುವ ಕೊರತೆ ಎಂದರೆ ವೈಚಾರಿಕ ಪ್ರಜ್ಞೆಯ ನೆಲೆಗಳು ಮತ್ತು ವೈಜ್ಞಾನಿಕ ಚಿಂತನೆಯ ಭೂಮಿಕೆಗಳು. ಪ್ರಾಚೀನತೆಯನ್ನು ವೈಭವೀಕರಿಸುವ ಸಂಭ್ರಮದಲ್ಲಿ ವರ್ತಮಾನದ ವೈಚಾರಿಕತೆಯನ್ನು ಇಲ್ಲವಾಗಿಸುವ ಒಂದು ಸಾಂಸ್ಕೃತಿಕ ಪ್ರಕ್ರಿಯೆಗೂ ಇಂದಿನ ಶಿಕ್ಷಣ ವ್ಯವಸ್ಥೆ ಸಾಕ್ಷಿಯಾಗಿದೆ. ಪಠ್ಯಕ್ರಮ ಪರಿಷ್ಕರಣೆಯ ಸಂದರ್ಭದಲ್ಲಿ ಇದನ್ನು ಗಮನಿಸಿದ್ದೇವೆ.
ಈ ಸನ್ನಿವೇಶದಲ್ಲಿ ಶಿಕ್ಷಕರ, ಬೋಧಕರ ಮತ್ತು ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಗಳಾದರೂ ಏನು ? ತಮ್ಮ ಬೋಧನಾ ವಲಯದಿಂದಾಚೆಗಿನ ಪ್ರಪಂಚವನ್ನೂ ಶಿಕ್ಷಕರು ಗಮನಿಸಬೇಕಿದೆ. ತಾವು ಕರ್ತವ್ಯ ನಿರ್ವಹಿಸುವ ಚೌಕಟ್ಟಿನಲ್ಲೇ ಅಂತರ್ಗತವಾಗಿರಬಹುದಾದ, ಬೆಳೆಸಿರಬಹುದಾದ ಅಸೂಕ್ಷ್ಮತೆಗಳನ್ನು, ಅಸಂವೇದನೆಯ ನೆಲೆಗಳನ್ನು ಮತ್ತು ಅಸಾಂಸ್ಕೃತಿಕ ಭೂಮಿಕೆಗಳನ್ನು ಗುರುತಿಸುವುದರೊಂದಿಗೇ , ಅವುಗಳಿಂದ ಮುಕ್ತರಾಗಿ ಆ ಭದ್ರ ಕೋಟೆಗಳನ್ನು ಭೇದಿಸಿ, ಮಕ್ಕಳಲ್ಲಿ ವೈಚಾರಿಕತೆಯನ್ನು, ವೈಜ್ಞಾನಿಕ ಮನೋಭಾವವನ್ನು ಮತ್ತು ತರ್ಕ ಶಕ್ತಿಯನ್ನು ಬೆಳೆಸುವುದು ಇಂದಿನ ಬೋಧಕ ವರ್ಗದ ನೈತಿಕ ಜವಾಬ್ದಾರಿಯಾಗಬೇಕಿದೆ. ಶೈಕ್ಷಣಿಕ ಅಥವಾ ವಿಜ್ಞಾನದ ನೆಲೆಗಳಲ್ಲಿರುವ ಇತಿಹಾಸ ಅಥವಾ ವಿಜ್ಞಾನ ಜ್ಞಾನಶಾಖೆಯ ಪರಿಣತರು, ಸುತ್ತಲಿನ ದುರಂತಗಳಿಗೆ, ತಾರತಮ್ಯಗಳಿಗೆ, ವಿಕೃತಿಗಳಿಗೆ ಸ್ಪಂದಿಸದೆ ಹೋದರೆ, ಈ ಜ್ಞಾನಪರಂಪರೆಯ ಗಂಧಗಾಳಿಯೂ ಇಲ್ಲದ ರಾಜಕೀಯ ನಾಯಕರು, ಸಾಮಾಜಿಕ-ಸಾಂಸ್ಕೃತಿಕ ಮುಂದಾಳುಗಳು ಕಲ್ಪಿತ ಇತಿಹಾಸವನ್ನು ಬೋಧಿಸಲಾರಂಭಿಸುತ್ತಾರೆ, ವಿಜ್ಞಾನವನ್ನು ಅಪಮೌಲ್ಯಗೊಳಿಸಲಾರಂಭಿಸುತ್ತಾರೆ.
ಭಾರತದ ಸಂದರ್ಭದಲ್ಲಿ ಆಡಳಿತಾತ್ಮಕ-ಶಾಸನಾತ್ಮಕ ಬಂಧನಗಳು ಮತ್ತು ಕಟ್ಟುಪಾಡುಗಳು ಶೈಕ್ಷಣಿಕ ಮತ್ತು ವಿಜ್ಞಾನ ವಲಯದ ಬೌದ್ಧಿಕ ಚಿಂತನೆಗಳನ್ನು ಸದಾ ಬಂಧಿಸಿಯೇ ಇರುತ್ತವೆ. ಈ ಬಂಧನಗಳನ್ನು ಭೇದಿಸಿ, ಹೊರಜಗತ್ತಿನಲ್ಲಿ ವೈಚಾರಿಕತೆಯ ಬೀಜಗಳನ್ನು ಬಿತ್ತುವ ಒಂದು ಮಹತ್ಕಾರ್ಯದಲ್ಲಿ ಕನ್ನಡದ ಸಾಹಿತ್ಯಲೋಕದ ದಿಗ್ಗಜರು, ಇದೇ ಶಿಕ್ಷಣ ವ್ಯವಸ್ಥೆಯೊಳಗೆ ಇದ್ದುಕೊಂಡೇ, ಯಶಸ್ಸು ಸಾಧಿಸಿದ್ದಾರೆ. ದೃಷ್ಟಿ ಮತ್ತು ದೃಷ್ಟಿಕೋನವನ್ನು ಹೊರಚಾಚುವ ಈ ಬೌದ್ಧಿಕ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಬಹುಮಟ್ಟಿಗೆ ಕ್ಷೀಣಿಸಿದೆ. ಮತ್ತೊಂದೆಡೆ ಶೋಷಕ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸಿ, ತಳಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಎಲ್ಲ ನೆಲೆಗಳನ್ನೂ ಧ್ವಂಸ ಮಾಡುವ ಒಂದು ಸಾಂಸ್ಕೃತಿಕ ಪ್ರಕ್ರಿಯೆಯೂ ನಮ್ಮ ನಡುವೆ ಚಾಲನೆಯಲ್ಲಿದೆ. ವ್ಯಕ್ತಿಗತ ಬದುಕು ಮತ್ತು ಸಾಮಾಜಿಕ ಅಸ್ಮಿತ್ವ ಇವೆರಡರ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಮನುಜ ಸೂಕ್ಷ್ಮತೆಯ ನೆಲೆಯಲ್ಲಿ ಗ್ರಹಿಸುವ ಮೂಲಕ ಈ ಗೋಡೆಗಳನ್ನು ಬೌದ್ಧಿಕವಾಗಿಯಾದರೂ ಭಂಜಿಸುವುದು ಇಂದು ಅನಿವಾರ್ಯವಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗೂ ಬೌದ್ಧಿಕ ವಲಯವನ್ನು ಬಂಧಿಸುವ ಆಡಳಿತಾತ್ಮಕ ಎಳೆಯಿಂದಾಚೆ, ವ್ಯಕ್ತಿಗತ ಸಾಮಾಜಿಕ ಬದುಕಿನಲ್ಲಿ ಒಂದು ಜಗತ್ತು ಜೀವಂತಿಕೆಗಾಗಿ ಪರಿತಪಿಸುತ್ತಿದೆ ಎಂಬ ಅರಿವು ಮತ್ತು ಗ್ರಹಿಕೆ ಈ ಹೊತ್ತಿನ ಬೋಧನಾ ವಲಯಕ್ಕೆ ಅತ್ಯವಶ್ಯವಾಗಿದೆ. ಈ ಅರಿವಿನ ಪಯಣದಲ್ಲೇ ಭಾರತೀಯ ಸಮಾಜವನ್ನು ಇಂದಿಗೂ ಕಾಡುತ್ತಿರುವ ಜ್ವಲಂತ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಲು ಶಿಕ್ಷಕ ವರ್ಗವು ಯೋಚಿಸಬೇಕಿದೆ.
ಹೀಗೆ ಯೋಚಿಸುವ ಮೂಲಕ, ಭವಿಷ್ಯ ಭಾರತದ ಸುಭದ್ರ ಬುನಾದಿಗೆ ಪೂರಕವಾದ ಸಹಿಷ್ಣುತೆ, ಬಹುತ್ವ, ಸಮನ್ವಯತೆ, ಸೋದರತೆ, ಸೌಹಾರ್ದತೆ ಮತ್ತು ಮನುಜಸೂಕ್ಷ್ಮತೆ-ಸಂವೇದನೆಗಳನ್ನು ಎಳೆಯ ಮನಸುಗಳಲ್ಲಿ ಬಿತ್ತುವ ಕೈಂಕರ್ಯಕ್ಕೆ ನಾವು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕ-ಬೋಧಕ-ಉಪನ್ಯಾಸಕ-ಪ್ರಾಧ್ಯಾಪಕ ಎಂಬ ಹಣೆಪಟ್ಟಿ ಇಲ್ಲದಿದ್ದರೂ, ಪ್ರತಿ ಪ್ರಜ್ಞಾವಂತ ವ್ಯಕ್ತಿಯೂ ತನ್ನನ್ನು ಅನಧಿಕೃತ ಪ್ರತಿನಿಧಿ ಎಂದು ಭಾವಿಸಿಕೊಳ್ಳುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾಂಸ್ಕೃತಿಕ ಉನ್ನತಿಗಾಗಿ ಶ್ರಮಿಸಬೇಕಿದೆ. ಸಮಾಜ ಎನ್ನುವ ವಿಶಾಲ ಶಾಲೆಯಲ್ಲಿ ನಾವು ಪ್ರತಿಯೊಬ್ಬರೂ ಶಿಕ್ಷಕ-ಬೋಧಕರಾಗುವ ಮೂಲಕ ಸಮ-ಸಮಾಜದ ಸಂವೇದನೆಯ ಬೇರುಗಳನ್ನು ಗಟ್ಟಿಗೊಳಿಸಲು ಪಣತೊಡಬೇಕಿದೆ. ಆಗ ಶಿಕ್ಷಕರ ದಿನಾಚರಣೆ ನಮ್ಮೆಲ್ಲರ ದಿನಾಚರಣೆಯಾಗಿ ಸಾರ್ಥಕತೆ ಪಡೆಯುತ್ತದೆ.