ಕೋವಿಡ್ ಸಂಕಷ್ಟದ ನಡುವೆಯೂ ಶಿಕ್ಷಕರ ಸೇವೆ ಅನನ್ಯ: ಸಚಿವ ಎಸ್. ಅಂಗಾರ

Prasthutha|

ಮಂಗಳೂರು: ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಕಾರಣರಾಗುವ ಶಿಕ್ಷಕರ ಪಾತ್ರ ಅತ್ಯಂತ ಅನನ್ಯವಾದದ್ದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಶಿಕ್ಷಕರನ್ನು  ಬಣ್ಣಿಸಿದರು.

- Advertisement -

ನಗರದ ಜಪ್ಪಿನಮೊಗರು ಪ್ರೆಸ್ಟೀಜ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಎಳವೆಯಿಂದಲೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಶ್ರಮಿಸುವ ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಗೆ ಕಾರಣಕರ್ತರು. ತಮ್ಮ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಪ್ರತಿ ಶಿಕ್ಷಕರು ತಮ್ಮ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಲ್ಲಿ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವೂ ಹಸನಾಗುತ್ತದೆ” ಎಂದು ಹೇಳಿದರು.

- Advertisement -

ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲೂ ಕೂಡ ಶಿಕ್ಷಕರ ಕರ್ತವ್ಯ ನಿರ್ವಹಣೆ ಅನನ್ಯ. ಭೌತಿಕವಾಗಿ ತರಗತಿ ನಡೆಸಲು ಸಾಧ್ಯವಾಗದ ಅವಧಿಯಲ್ಲಿ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಗೆ ಸಿದ್ಧಪಡಿಸಿ, ಅವರನ್ನು ಉತ್ತಮವಾಗಿ ತಯಾರು ಮಾಡಿದ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ ಎಂದವರು ಹೇಳಿದರು.

ಇದೇ ವೇಳೆ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆಯ 7, ಹಿರಿಯ ಪ್ರಾಥಮಿಕ ಶಾಲೆಯ 7 ಹಾಗೂ ಪ್ರೌಢಶಾಲಾ ವಿಭಾಗದ 7 ಶಿಕ್ಷಕರು ಸೇರಿದಂತೆ ಒಟ್ಟಾರೆ 21 ಶಿಕ್ಷಕರಿಗೆ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ವೀಣಾ ಮಂಗಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇ ಸ್ವಾಮಿ ಮತ್ತಿತ್ತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Join Whatsapp