ತೆರಿಗೆ ವಂಚನೆ: ಬೆಂಗಳೂರಿನ ಹಲವೆಡೆ ಐಟಿ ದಾಳಿ

Prasthutha|

ಬೆಂಗಳೂರು: ತೆರಿಗೆ ವಂಚನೆ ಹಿನ್ನೆಲೆಯಲ್ಲಿ  ನಗರದ ಹಲವೆಡೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಇಂದು ಬೆಳಿಗ್ಗೆ ದಿಢೀರ್ ದಾಳಿ  ನಡೆಸಿ, ಶೋಧ ಕಾರ್ಯ ನಡೆಸಿದ್ದಾರೆ.

- Advertisement -

ಹಲವು ಕಾರ್ಪೊರೇಟ್ ಕಂಪನಿಗಳ ಕಚೇರಿಗಳಿಗೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕಂಪನಿಗಳ ಮಾಲೀಕರ ಮನೆಗಳ ಮೇಲೂ ದಾಳಿ ನಡೆದಿದ್ದು, ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ.

ಸಂಜಯನಗರ, ಹೆಬ್ಬಾಳ, ಕೊಡಿಗೇಹಳ್ಳಿ, ಬಿಡದಿ, ಚಿಕ್ಕಬಳ್ಳಾಪುರ, ರಾಮನಗರದ ಮನೆಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ಕೊಡಿಗೇಹಳ್ಳಿಯ ಬ್ರಿಗೇಡ್ ಓಪಸ್ ನಲ್ಲಿರುವ ಕಂಪನಿಯೊಂದರ ಮೇಲೆ ದಾಳಿ ನಡೆದಿದೆ.

- Advertisement -

ರಾಜ್ಯದ ಹಲವೆಡೆ ಕೆಲವು ದಿನಗಳ ಹಿಂದೆಯೂ ಸರಣಿ ಐಟಿ ದಾಳಿ ನಡೆದಿತ್ತು. ಚಿಕ್ಕಮಗಳೂರಿನ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ನವೆಂಬರ್ 17ರಂದು ಐಟಿ ದಾಳಿ ನಡೆದಿತ್ತು. ಗಾಯತ್ರಿ ಅವರ ಪತಿ ಶಾಂತೇಗೌಡ ಮಾಲೀಕತ್ವದ ಕ್ರಷರ್ ಮೇಲೆಯೂ ದಾಳಿ ನಡೆಸಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅದಕ್ಕೂ ಕೆಲವು ದಿನಗಳ ಮುನ್ನ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಬಾಮೈದನ ನಿವಾಸದ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ ಶೋಧ ಕೈಗೊಂಡಿದ್ದರು.

ಡಿಸೆಂಬರ್ 6ರಂದು ತೆಲಂಗಾಣ ಹಾಗೂ ಆಂಧ್ರಪ್ರದೇಶಗಳ 30ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ದಾಳಿ ನಡೆದಿತ್ತು. ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ವಂಶಿರಾಂ ಬಿಲ್ಡರ್ಸ್ನ ಕಚೇರಿಗಳು ಮತ್ತು ನಿರ್ದೇಶಕರ ಮನೆಯಲ್ಲಿಯೂ ಶೋಧ ನಡೆದಿತ್ತು. ವಿಜಯವಾಡದಲ್ಲಿರುವ ವೈಎಸ್ಆರ್ಸಿಪಿ ನಾಯಕ ದೇವಿನೇನಿ ಅವಿನಾಶ್ ಅವರ ಮನೆಯಲ್ಲಿಯೂ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು.

Join Whatsapp