ರೌಡಿ ಮೇಲೆ ಗುಂಡಿನ ದಾಳಿ: ದುಷ್ಕರ್ಮಿಗಳ ಪತ್ತೆಗೆ ಮೂರು ವಿಶೇಷ ತಂಡ ರಚನೆ

Prasthutha|

ಬೆಂಗಳೂರು: ಹಳೇ ದ್ವೇಷದ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಮೂಲದ ಕುಖ್ಯಾತ ರೌಡಿ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕ ಅಶೋಕ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳು ತೀವ್ರ ಶೋಧ ಕೈಗೊಂಡಿವೆ.

- Advertisement -

ಪ್ರಕರಣ ಪತ್ತೆಗಾಗಿ ನಿನ್ನೆ ಸಂಜೆಯೇ ರಚಿಸಲಾಗಿರುವ ಮೂರು ವಿಶೇಷ ಪೊಲೀಸ್ ತಂಡಗಳು ಎಂಟು ಸುತ್ತು ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಗಳ ಜಾಡು ಹಿಡಿದು ಕಾರ್ಯಾಚರಣೆ ಕೈಗೊಂಡಿವೆ ಎಂದು ಡಿಸಿಪಿ ಎಸ್. ಗಿರೀಶ್  ತಿಳಿಸಿದ್ದಾರೆ.

ಮೂರು ಕೊಲೆ ಮತ್ತು ಒಂದು ಕೊಲೆ ಯತ್ನದಲ್ಲಿ ಶಿವಶಂಕರ್ ರೆಡ್ಡಿ (29) ಭಾಗಿಯಾಗಿದ್ದನು. ಶಿವಶಂಕರ್ ರೆಡ್ಡಿ ಹಾಗೂ ಬೈರಾ ರೆಡ್ಡಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ದ್ವೇಷವಿತ್ತು. ಅದರಂತೆ 17ನೇ ವಯಸ್ಸಿನಲ್ಲಿ ಮೊದಲ ಕೊಲೆ ಮಾಡಿದ್ದ ಶಿವಶಂಕರ್ ರೆಡ್ಡಿ, 18ನೇ ವಯಸ್ಸಿನಲ್ಲಿ ಎರಡನೇ ಕೊಲೆ ಮಾಡಿದ್ದನು. ಬಳಿಕ 23ನೇ ವರ್ಷದಲ್ಲಿ ಮೂರನೇ ಕೊಲೆ ಮಾಡಿದ್ದ. 2021ರಲ್ಲಿ ಶಿವಶಂಕರ್ ವಿರುದ್ಧ ಕೊಲೆ ಯತ್ನ ಪ್ರಕರಣ ಕೂಡ ದಾಖಲಾಗಿತ್ತು.

- Advertisement -

ಆಂಧ್ರಪ್ರದೇಶದ ಮದನಪಲ್ಲಿ ಠಾಣೆ ರೌಡಿಶೀಟರ್ ಆಗಿರುವ ಆರೋಪಿ ಶಿವಶಂಕರ್ ರೆಡ್ಡಿ ಮೇಲೆ ಸುಪಾರಿ ಕಿಲ್ಲರ್ಸ್ ಮೂಲಕ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದ್ದು ಅದರ ಜಾಡು ಹಿಡಿದು ಕಾರ್ಯಾಚರಣೆ ಪೊಲೀಸ್ ತಂಡಗಳು ಕೈಗೊಂಡಿವೆ.

ವೈಎಸ್’ಆರ್’ಸಿಪಿಯಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್ ರೆಡ್ಡಿ, ಮದನಪಲ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಘಟಕದಲ್ಲಿ ಸಕ್ರಿಯವಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಈ ನಡುವೆ ಗುಂಡೇಟು ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆ.ಆರ್.ಪುರ ಸಮೀಪದ ಕುರು ಸೋನ್ನೇನಹಳ್ಳಿ ಸಮೀಪ ತಾನು ಕಟ್ಟಿಸುತ್ತಿರುವ ಅಪಾರ್ಟ್’ಮೆಂಟ್ ಕಟ್ಟಡ ಪರಿಶೀಲನೆಗೆ ನಿನ್ನೆ ಮಧ್ಯಾಹ್ನ 3ಗಂಟೆಯ ವೇಳೆ ಬಂದಿದ್ದಾಗ ಶಿವಶಂಕರ್ ರೆಡ್ಡಿ ಹಾಗೂ ಆತನ ಕಾರು ಚಾಲಕನ ಮೇಲೆ ಎರಡು ಬೈಕ್’ಗಳಲ್ಲಿ ಬಂದ ನಾಲ್ವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಎಸ್.ಗಿರೀಶ್ ತಿಳಿಸಿದರು.

ಕೊಲೆ, ಕೊಲೆ ಯತ್ನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿ ಪಟ್ಟಿಗೆ ಸೇರಿದ್ದ ಶಿವಶಂಕರ್ ರೆಡ್ಡಿ ಎರಡು ತಿಂಗಳ ರಿಯಲ್ ಎಸ್ಟೇಟ್ ಉದ್ಯಮಿ ಸ್ನೇಹಿತ ಬಾಬು ಎಂಬಾತನಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನಿಸಿದ್ದ ರೆಡ್ಡಿಯನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp