ಹೊಸದಿಲ್ಲಿ: ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಶವದ ಮರು ಮರಣೋತ್ತರ ಪರೀಕ್ಷೆ ನಡೆಸಲು ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಬಾಲಕಿಯ ತಂದೆ ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಾಳೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮದ್ರಾಸ್ ಹೈಕೋರ್ಟ್ ನಿನ್ನೆ ಮರು ಮರಣೋತ್ತರ ಪರೀಕ್ಷೆಗೆ ಆದೇಶಿಸಿತ್ತು. ಆದರೆ ವೈದ್ಯಕೀಯ ಸಮಿತಿಯಲ್ಲಿ ತಮಗೆ ಬೇಕಾದ ವೈದ್ಯರನ್ನು ಸೇರಿಸಬೇಕೆಂಬ ಪೋಷಕರ ಬೇಡಿಕೆಯನ್ನು ತಿರಸ್ಕರಿಸಿತ್ತು.
ಶಿಕ್ಷಕರು ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಆಕೆಯ ಶವ ಪತ್ತೆಯಾದ ಸ್ಥಳದ ಬಳಿಯ ಗೋಡೆಯ ಮೇಲೆ ರಕ್ತಸಿಕ್ತ ಗುರುತು ಪತ್ತೆಯಾಗಿತ್ತು. ಇದು ದೈಹಿಕ ಕಿರುಕುಳವನ್ನು ಸೂಚಿಸುತ್ತದೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ.
ಬಾಲಕಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರು ಮತ್ತು ಪ್ರಾಂಶುಪಾಲರು ಸೇರಿದಂತೆ ಶಾಲೆಯ ಹಲವಾರು ಉದ್ಯೋಗಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಚಿನ್ನಸೆಲಂನಲ್ಲಿರುವ ಶಕ್ತಿ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿಯ ಸೂಸೈಡ್ ನೋಟ್ ನಲ್ಲಿ, ಶಾಲೆಯ ಇಬ್ಬರು ಶಿಕ್ಷಕರಾದ, ರಸಾಯನಶಾಸ್ತ್ರ ಮತ್ತು ಗಣಿತ ಶಿಕ್ಷಕರು ಅವಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಬರೆಯಲಾಗಿತ್ತು. ಅಂದಿನಿಂದ ವಿವಿಧ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು, ವಿದ್ಯಾರ್ಥಿನಿಯ ಸಾವಿನಲ್ಲಿ ರಹಸ್ಯವಿದೆ. ಆ ಇಬ್ಬರೂ ಶಿಕ್ಷಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ.