ಚೆನ್ನೈ: ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಗತಿಯಲ್ಲಿದೆ.
ಕಾಂಚೀಪುರಂ, ಚೆಂಗಲ್ಪಟ್ಟು, ತೆಂಕಾಸಿ, ವೆಲ್ಲೂರು, ರಾಣಿಪೇಟೆ, ತಿರುಪ್ಪಾತುರ್, ತಿರುನೆಲ್ವೇಲಿ, ವಿಲ್ಲುಪುರಂ ಮತ್ತು ಕಲ್ಲಕುರುಚಿ ಸೇರಿ 9 ಜಿಲ್ಲೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಸ್ಥಳೀಯ ಸಂಸ್ಥೆಗಳ ಪ್ರಥಮ ಹಂತದ ಮತದಾನವು ಬೆಳಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ನಡೆಯುತ್ತಿದ್ದು, ಎರಡನೇ ಹಂತದ ಮತದಾನ ಅಕ್ಟೋಬರ್ 9 ರಂದು ನಡೆಯಲಿದೆ. ಈ ಚುನಾವಣೆಯ ಫಲಿತಾಂಶಗಳನ್ನು ರಾಜ್ಯ ಚುನಾವಣಾ ಆಯೋಗ ಅಕ್ಟೋಬರ್ 12 ರಂದು ಪ್ರಕಟಿಸಲಿದೆ.
ಪ್ರಸಕ್ತ ಒಂಬತ್ತು ಜಿಲ್ಲೆಗಳಿಗೆ ನಡೆಯುವ ಪ್ರಥಮ ಹಂತದ ಮತದಾನದಲ್ಲಿ 27 ಸಾವಿರ ಕ್ಕೂ ಮಿಕ್ಕಿದ ಸೀಟುಗಳನ್ನು ಹೊಂದಿದೆ. ಈ ಚುನಾವಣೆಯಲ್ಲಿ 37,77,524 ಪುರುಷ ಮತದಾರರು, 38,81, 361 ಮಹಿಳಾ ಮತದಾರರು ಮತ್ತು 835 ತೃತೀಯ ಲಿಂಗ ಸೇರಿದಂತೆ ಒಟ್ಟು 76,59, 720 ಮತದಾರರು ತಮ್ಮ ಮತವನ್ನು ಚಲಾಯಿಸಲು ಅರ್ಹರಾಗಿದ್ದಾರೆ.
ಇಂದು ನಡೆಯುವ ಮತದಾನದಲ್ಲಿ 7.291 ಮತ್ತು ಆಕ್ಟೋಬರ್ 9 ರ ಮತದಾನದಲ್ಲಿ 6.652 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಮಾತ್ರವಲ್ಲ ಇದಕ್ಕಾಗಿ 1 ಲಕ್ಷಕ್ಕೂ ಅಧಿಕ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.