ಪುದುಚೇರಿ: ಪುದುಚೇರಿಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಸದಸ್ಯ ದಿನೇಶ್ ಗುಂಡೂರಾವ್ ಅವರಿಗೆ ಪಕ್ಷದ ಕಾರ್ಯಕರ್ತರೇ ಘೇರಾವ್ ಹಾಕಿ, ಅವರನ್ನು ವಾಹನಕ್ಕೆ ಹತ್ತದಂತೆ ತಡೆದು ಅವರ ಕಾರಿಗೆ ಹಾನಿ ಮಾಡಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.
ಪುದುಚೇರಿಯ ಕಾಂಗ್ರೆಸ್ ಪಕ್ಷದ ಕಚೇರಿಯ ಮುಂದೆ ಮಾಜಿ ಸಚಿವರೊಬ್ಬರನ್ನು ಬೆಂಬಲಿಸುತ್ತಿದ್ದ ಬಣವು ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಾಗ ಈ ಘಟನೆ ನಡೆದಿದೆ.
ಪಕ್ಷದ ಕಚೇರಿಯೊಳಗೆ ಸಭೆ ನಡೆಯುತ್ತಿದ್ದಂತೆ, ಮಾಜಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಬೆಂಬಲಿಗರು ಮತ್ತು ವಿರೋಧಿ ಗುಂಪು ಹೊರಗೆ ಜಮಾಯಿಸಿದಾಗ ಎರಡೂ ಗುಂಪುಗಳ ನಡುವೆ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆಯಿತು.
ದಿನೇಶ್ ಗುಂಡೂರಾವ್ ಅವರು ಸಭೆಯಿಂದ ಹೊರಬರುತ್ತಿದ್ದಂತೆ, ಕಾರ್ಯಕರ್ತರು ಅವರನ್ನು ಸುತ್ತುವರಿದು ಘೋಷಣೆ ಕೂಗಿ ಅವರನ್ನು ಮುಂದೆ ಹೋಗದಂತೆ ತಡೆದರು. ನಾಯಕತ್ವ ಬದಲಾವಣೆಯ ಬಗ್ಗೆ ಸ್ಪಷ್ಟ ಉತ್ತರ ನೀಡಿ ಎಂದು ಪಕ್ಷದ ಕಾರ್ಯಕರ್ತರು ದಿನೇಶ್ ಅವರಲ್ಲಿ ಆಗ್ರಹಿಸಿದರು.
ನಂತರ ಅವರನ್ನು ಭದ್ರತೆಯಲ್ಲಿ ಅವರ ವಾಹನದ ಬಳಿ ಕರೆ ತರಲಾಯಿತು. ಅವರು ಹೊರಡುತ್ತಿದ್ದಂತೆ ಕೆಲವು ಕಾರ್ಯಕರ್ತರು ವಾಹನವನ್ನು ತಡೆಯಲು ಯತ್ನಿಸಿದರು.
ಈ ಘಟನೆಯ ನಂತರ, ಪುದುಚೇರಿ ಕಾಂಗ್ರೆಸ್ ಅಧ್ಯಕ್ಷ ಎ.ವಿ.ಸುಬ್ರಮಣಿಯನ್ ಅವರು ಪಕ್ಷದ ಐವರು ಕಾರ್ಯಕರ್ತರನ್ನು ಅಮಾನತುಗೊಳಿಸಿದ್ದಾರೆ.