► ಸಾವಿನ ಬಗ್ಗೆ ನಮಗೂ ಸಂಶಯವಿದೆ: ತಾಲಿಬಾನ್
ಕಾಬೂಲ್: ಭಾರತದ ಖ್ಯಾತ ಫೋಟೊ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಅವರ ಸಾವಿನ ಬಗ್ಗೆ ನಮಗೆ ಸಂಶಯವಿದೆ ಎಂದು ತಾಲಿಬಾನ್ ಹೇಳಿದೆ. ಸಿದ್ದೀಕಿ ಅವರ ಹತ್ಯೆಯಲ್ಲಿ ನಮ್ಮ ಕೈವಾಡವಿಲ್ಲ. ಅವರು ಹೇಗೆ ಕೊಲ್ಲಲ್ಪಟ್ಟರು ಎಂಬುವುದರ ಬಗ್ಗೆ ನಮಗೂ ಸಂಶಯವಿದೆ. ಯಾರ ಗುಂಡಿನ ದಾಳಿಯ ಸಮಯದಲ್ಲಿ ಪತ್ರಕರ್ತನನ್ನು ಕೊಲ್ಲಲಾಯಿತು ಎಂಬುದು ನಮಗೆ ತಿಳಿದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಮಾಧ್ಯಮಕ್ಕೆ ಶುಕ್ರವಾರ ತಿಳಿಸಿದ್ದಾರೆ.
ತಾಲಿಬಾನ್ ಹೋರಾಟಗಾರರು ಮತ್ತು ಅಫ್ಘಾನ್ ಪಡೆಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ನಡೆದ ಗುಂಡಿನ ದಾಳಿಯ ವೇಳೆ ಪುಲಿಟ್ಜರ್ ಪ್ರಶಸ್ತಿ ವಿಜೇತ ಪತ್ರಕರ್ತ ಸಿದ್ದೀಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ. ಸಿದ್ದೀಕಿ ಅವರ ಸಾವಿಗೆ ತಾಲಿಬಾನ್ ವಿಷಾದ ವ್ಯಕ್ತಪಡಿಸುತ್ತದೆ. ಅವರು ಹೇಗೆ ಸಾವನ್ನಪ್ಪಿದವರು ಎಂಬುದು ನಮಗೆ ತಿಳಿದಿಲ್ಲವೆಂದು ಅವರು ಹೇಳಿದ್ದಾರೆ.
ಯುದ್ಧ ವಲಯಕ್ಕೆ ಪ್ರವೇಶಿಸುವ ಯಾವುದೇ ಪತ್ರಕರ್ತರಾದರೂ ನಮಗೆ ಮಾಹಿತಿ ನೀಡಬೇಕು. ಈ ಸಮಯದಲ್ಲಿ ಆ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಸರಿಯಾದ ಕಾಳಜಿ ವಹಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಮುಜಾಹಿದ್ ಉಲ್ಲೇಖಿಸಿದ್ದಾರೆ. ಪತ್ರಕರ್ತರು ನಮಗೆ ತಿಳಿಸದೇ ಯುದ್ಧ ವಲಯಕ್ಕೆ ಪ್ರವೇಶಿಸುವುದರಿಂದ ಈ ರೀತಿಯ ಸಾವುಗಳಾಗುತ್ತಿವೆ ಮತ್ತು ಭಾರತೀಯ ಪತ್ರಕರ್ತ ದಾನಿಶ್ ಸಿದ್ದೀಕಿಯವರ ಸಾವಿನಿಂದ ನಮಗೆ ಅತೀವ ನೋವಾಗಿದೆಯೆಂದು ಮುಜಾಹಿದ್ ತಿಳಿಸಿದರು.
ರಾಯಿಟರ್ಸ್ ಪತ್ರಕರ್ತ ದಾನಿಶ್ ಸಿದ್ದೀಕಿ (38) ಶುಕ್ರವಾರ ಪಾಕಿಸ್ತಾನದ ಗಡಿಯಲ್ಲಿ ಅಫ್ಘಾನ್ ಭದ್ರತಾ ಪಡೆ ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ಏರ್ಪಡುತ್ತಿರುವ ಘರ್ಷಣೆಯನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ವೇಳೆಯಲ್ಲಿ ಗುಂಡಿನ ದಾಳಿಗೊಳಗಾಗಿ ಮರಣ ಹೊಂದಿದ್ದಾರೆಂದು ಅಫ್ಘಾನ್ ಕಮಾಂಡರ್ ಮಾಧ್ಯಮಕ್ಕೆ ವರದಿ ಮಾಡಿದೆ. ಮಾತ್ರವಲ್ಲದೇ ಯು.ಎನ್.ಎಸ್.ಸಿ ಸಭೆಯಲ್ಲಿ ಪತ್ರಕರ್ತ ಡ್ಯಾನಿಶ್ ಸಿದ್ದೀಕಿ ಹತ್ಯೆಯನ್ನು ಹರ್ಷ ಶ್ರೀಂಗ್ಲಾ ಕಟು ಮಾತುಗಳಿಂದ ಖಂಡಿಸಿದ್ದಾರೆ.
ಸ್ಪಿನ್ ಬೋಲ್ಡಾಕ್ ನ ಪ್ರಮುಖ ಮಾರುಕಟ್ಟೆ ಪ್ರದೇಶವನ್ನು ಹಿಂಪಡೆಯಲು ವಿಶೇಷ ಪಡೆಗಳು ಹೋರಾಡುತ್ತಿದ್ದಂತೆ ಸಿದ್ದೀಕಿ ಮತ್ತು ಅಫ್ಘಾನ್ ಪಡೆಯ ಹಿರಿಯ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಅವರ ಕೊನೆಯ ಕೃತಿ ಅಫ್ಘಾನಿಸ್ತಾನದ ಕಂದಹಾರ್ ನಿಂದ ವರದಿ ಮಾಡಿದ್ದರು.
ನಾವು ತುರ್ತಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ಈ ಪ್ರದೇಶದ ಅಧಿಕಾರಿಗಳೊಂದಿಗೆ ಡ್ಯಾನಿಶ್ ಅವರ ಸಾವಿನ ರಹಸ್ಯ ಬಹಿರಂಗವಾಗುವ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಡ್ಯಾನಿಶ್ ಒಬ್ಬ ಅತ್ಯುತ್ತಮ ಪತ್ರಕರ್ತ, ಶ್ರದ್ಧಾಭರಿತ ಪತಿ, ತಂದೆ, ಹೆಚ್ಚು ಪ್ರೀತಿಸುವ ಸಹೋದ್ಯೋಗಿಯಾಗಿದ್ದರು . ಈ ಭಯಾನಕ ಸಮಯದಲ್ಲಿ ನಮ್ಮ ಆಲೋಚನೆಗಳು ಅವರ ಕುಟುಂಬದೊಂದಿಗೆ ಇವೆ “ಎಂದು ರಾಯಿಟರ್ಸ್ ಅಧ್ಯಕ್ಷ ಮೈಕೆಲ್ ಫ್ರೀಡೆನ್‌ಬರ್ಗ್ ಮತ್ತು ಪ್ರಧಾನ ಸಂಪಾದಕ ಅಲೆಸ್ಸಾಂಡ್ರಾ ಗಲೋನಿ ಜಂಟಿಯಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲಿಬಾನ್ ದಾನಿಶ್ ಸಿದ್ದಿಕಿ ಅವರ ಪಾರ್ಥೀವ ಶರೀರವನ್ನು ಅಂತಾರಾಷ್ಟ್ರೀಯ ರೆಡ್ ಕ್ರಾಸ್‌ನ ಸಮಿತಿಗೆ (ಐಸಿಆರ್‌ಸಿ) ಹಸ್ತಾಂತರಿಸಿದೆ ಎಂದು ಸುದ್ದಿ ಸಂಸ್ಥೆಗೆ ವರದಿ ಮಾಡಿದೆ. ಸಿದ್ದೀಕಿ ಅವರ ಪಾರ್ಥೀವ ಶರೀರವನ್ನು ತಾಲಿಬಾನ್ ಐಸಿಆರ್‌ಸಿಗೆ ಹಸ್ತಾಂತರಿಸುವ ಬಗ್ಗೆ ಭಾರತಕ್ಕೆ ಮಾಹಿತಿ ನೀಡಲಾಗಿದ್ದು, ಅದನ್ನು ಮರಳಿ ತರುವಲ್ಲಿ ಭಾರತೀಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ.