ತಲಪಾಡಿ: ತಲಪಾಡಿ ಗ್ರಾಮದ ಪಿಲಿಕೂರುವಿನಲ್ಲಿರುವ ಶಾರದಾ ವಿದ್ಯಾನಿಕೇತನ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪೂರ್ವಜ್ (14) ಶಾಲೆಯ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ಡಿಪಿಐ ) ತಲಪಾಡಿ ಗ್ರಾಮ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್ಡಿಪಿಐ ತಲಪಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾದ ತಂಶೀರ್ ಅಹಮ್ಮದ್ ಈ ಶಾಲೆಯಲ್ಲಿ ಹೊರ ಜಿಲ್ಲೆಗಳ ಹಲವು ವಿದ್ಯಾರ್ಥಿಗಳು ಕಲಿಯುತ್ತಿದ್ದು ಇಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ತಂಗುತ್ತಾರೆ. ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಹೊಸಕೋಟೆ ಮೂಲದ ವಿದ್ಯಾರ್ಥಿಗೆ ತನ್ನ ಮನೆಗೆ ಫೋನ್ ಮಾಡಲು ಅವಕಾಶ ನೀಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ವಿದ್ಯಾಭ್ಯಾಸದ ಹೆಸರಿನಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಜೈಲಿನಲ್ಲಿ ಇರುವ ರೀತಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ಸಂಶಯಗಳಿದ್ದು ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕು ಮತ್ತು ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.