ವಿದ್ಯಾರ್ಥಿಗಳ ಮಧ್ಯೆ ಕೋಮುಭಾವನೆ ಮೂಡಿಸಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿರುವ ಸಂಘಪರಿವಾರದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ: ಕ್ಯಾಂಪಸ್ ಫ್ರಂಟ್

Prasthutha|

ಕುಂದಾಪುರ: ಶಾಂತಿಯುತವಾಗಿದ್ದ ಕುಂದಾಪುರದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು, ಶೈಕ್ಷಣಿಕ ವಾತಾವರಣ ಹದೆಗೆಡಿಸುತ್ತಾ ಅಶಾಂತಿ ಸೃಷ್ಟಿಸಲು  ಸಂಘಪರಿವಾರ ಯತ್ನಿಸುತ್ತಿರುವುದು ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಅಧ್ಯಕ್ಷ ಮುಜಾಹಿದ್ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಮೊದಲಿನಿಂದಲೇ ಮುಸ್ಲಿಮ್ ವಿದ್ಯಾರ್ಥಿನಿಯರು ತಮ್ಮ ಶಿರವಸ್ತ್ರವನ್ನು ಧರಿಸಿಯೇ ಕಾಲೇಜುಗಳಿಗೆ ಪ್ರವೇಶಿಸುತ್ತಿದ್ದರು.  ಸಮಾನತೆ ವಿಷಯದಲ್ಲಿ ಯಾರಿಗೂ ಧಕ್ಕೆ ಉಂಟಾಗಿಲ್ಲ. ಎಲ್ಲಾ ಧರ್ಮದ ವಿದ್ಯಾರ್ಥಿನಿಯರು ಪರಸ್ಪರ ಸಹೋದರತೆಯಿಂದ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಈ ಸೌಹಾರ್ದತೆಗೆ ಧಕ್ಕೆ ಮಾಡುವ ಉದ್ದೇಶದಿಂದಲೇ ವಿದ್ಯಾರ್ಥಿಗಳ ಮಧ್ಯೆ ಕೋಮುದ್ವೇಷದ ಭಾವನೆ ಮೂಡಿಸುತ್ತಾ ಏಕಾಏಕಿ ಕಾಲೇಜುಗಳಲ್ಲಿ ಧಾರ್ಮಿಕ ಹಕ್ಕಾದ ಶಿರವಸ್ತ್ರವನ್ನು ನಿಷೇಧ ಮಾಡುವುದರೊಂದಿಗೆ ಕೇಸರಿ ಶಾಲು ಧರಿಸಿ ಘೋಷಣೆಗಳನ್ನು ಕೂಗುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿಯನ್ನು ಸಂಘಪರಿವಾರ ನಡೆಸಲು ಯತ್ನಿಸುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಎಂದಿನಂತೆ ಕಾಲೇಜಿಗೆ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಗೇಟಿನ ಬಳಿಯೇ ತಡೆದು ಸಂಘಪರಿವಾರದ ಕೈಗೊಂಬೆಯಂತೆ ಕುಂದಾಪುರದ ಸರಕಾರಿ ಕಾಲೇಜಿನ ಪ್ರಾಂಶುಪಾಲರು ವರ್ತಿಸುತ್ತಿರುವುದು ಖಂಡನೀಯ. ಶಿಕ್ಷಣ ಇಲಾಖೆಯು  ಪ್ರಾಂಶುಪಾಲರ ಮೇಲೆ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿನಿಯರನ್ನು ಅವರ ಮೂಲಭೂತ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿರುವ ಸಂವಿಧಾನ ಬದ್ಧ ಹಕ್ಕನ್ನು ಖಾತರಿಪಡಿಸಿ, ಶಿರವಸ್ತ್ರದೊಂದಿಗೆ ತರಗತಿಗೆ ಅನುಮತಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಧ್ಯೆ ಕೋಮುವಿಷಬೀಜ ಭಿತ್ತಿದ ಸಂಘಪರಿವಾರದ ನಾಯಕರ ಮೇಲೆ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ತಾಲೂಕಿನ ಶಾಂತಿಯುತ ವಾತಾವರಣವನ್ನು ಕಾಪಾಡಬೇಕೆಂದು ಮುಜಾಹಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp