ನೀತಿ ಶಿಕ್ಷಣದ ಹೆಸರಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಯತ್ನ: ತಾಹೀರ್ ಹುಸೇನ್ ಕಿಡಿ

Prasthutha|

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸಂದಭ೯ದಲ್ಲಿ ಕೋಮುವಾದಿ ಅಜೆಂಡಾವನ್ನು ಕ್ರಮೇಣ ಜಾರಿಗೆ ತರುತ್ತಿರುವ ಸರಕಾರದ ಕ್ರಮ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೀರ್ ಹುಸೇನ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ, ಹಿಜಾಬ್, ದಿ ಕಾಶ್ಮೀರ ಫೈಲ್ ಬಳಿಕ ಭಗವದ್ಗೀತೆ ಪಠ್ಯಪುಸ್ತಕದಲ್ಲಿ ಅಳವಡಿಸಲು ಬಿಜೆಪಿ ಸರಕಾರ ಮುಂದಾಗುವ ಮೂಲಕ ತನ್ನ ಕೋಮುವಾದಿ ಅಜೆಂಡಾ ಮುಂದುವರಿಸಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಜೊತೆಗೆ ಮಕ್ಕಳಲ್ಲಿ ಧಾರ್ಮಿಕ ಅಸಹಿಷ್ಣುತೆ ಉಂಟಾಗಲು ಇದು ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.

ಭಗವದ್ಗೀತೆಯ ಪಠ್ಯ ಸೇರ್ಪಡೆ ಮಾಡುವ ಬಗ್ಗೆ ನಮ್ಮ ಆಕ್ಷೇಪ ಇಲ್ಲ ಆದರೆ ಅದರ ಜೊತೆಗೆ ಕುರ್’ಆನ್, ಬೈಬಲ್, ವಚನ ಸಾಹಿತ್ಯ ಇತ್ಯಾದಿ ಧಾರ್ಮಿಕ  ಗ್ರಂಥಗಳ ಶಿಕ್ಷಣವನ್ನೂ ಅಳವಡಿಸಿ. ಧಾರ್ಮಿಕ ಮೌಲ್ಯಗಳನ್ನು ಶಿಕ್ಷಣದ ಭಾಗವಾಗಿಸುವುದರ ಜತೆಗೆ ಧಾರ್ಮಿಕ ಚಿಹ್ನೆಗಳಿಗೂ ಅನುಮತಿ ನೀಡಬೇಕು ಹಾಗೆ ಮಾತ್ರ ಈ ಕ್ರಮ ಸಮರ್ಥನೀಯ. ಧರ್ಮಾತೀತ, ಜಾತ್ಯತೀತವಾಗಿ ಶಿಕ್ಷಣ ಇರಬೇಕು ಎನ್ನುವ ಸಂವಿಧಾನದ ತಿರುಳನ್ನು ಅರಿಯದೇ ಬಿಜೆಪಿ ಸಚಿವರು ತಾರತಮ್ಯ ನೀತಿ ಅನುಸರುತ್ತಿರವುದು ಖಂಡನಿಯ ಎಂದು ಹೇಳಿದರು.

- Advertisement -

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕೊಠಡಿಗಳು, ಶೌಚಾಲಯಗಳು, ಆಟದ ಮೈದಾನಗಳು, ಆಟದ ಸಾಮಗ್ರಿಗಳು, ಪೀಠೋಪಕರಣಗಳನ್ನು ಸಮರ್ಪಕವಾಗಿ ಪೂರೈಸಲು ಸರಕಾರ ಮುಂದಾಗುವ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಗುಣಮಟ್ಟದ ಶಿಕ್ಷಣ ನೀಡಬೇಕೆ ಹೊರತು, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸಕ್ಕೆ ಮುಂದಾಗಬಾರದು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಒಂದಿಲ್ಲೊಂದು ಅವಗಡಗಳು ನಡೆಯುತ್ತಲೆ ಇವೆ. ಸರ್ವೇಜನ ಸುಖಿನೋ ಭವಂತು ಎನ್ನುವ ಮಾತನ್ನು ಸರಕಾರ ಅಕ್ಷರಶಃ ಮರೆತು ಕೇವಲ ಧಾರ್ಮಿಕ ಮನೋಭಾವನೆಯನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆ ಹೇರಲು ಹೊರಟಿರುವ ಕ್ರಮ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಾಂಧತೆಯ ವಿಚಾರಗಳನ್ನು ಕೈಬಿಟ್ಟು ಮಕ್ಕಳಲ್ಲಿ ಜಾತ್ಯತೀತ ಮನೋಭಾವ ಬೆಳೆಸುವ ಪಠ್ಯಕ್ರಮದ ಜೊತೆಗೆ ಮಕ್ಕಳ ಆರೋಗ್ಯ, ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಸರಕಾರ ಮುಂದಾಗಬೇಕು ಎಂದು ತಾಹೀರ್ ಹುಸೇನ್ ಒತ್ತಾಯಿಸಿದರು.

Join Whatsapp