ಕತಾರ್‌ | ಫುಟ್ಬಾಲ್‌ ವಿಶ್ವಕಪ್‌ ಪಂದ್ಯಾಟಗಳು ನಡೆಯುವ 8 ಮೈದಾನಗಳ ಕಿರು ಪರಿಚಯ

Prasthutha|

ಅರಬ್ಬರ ನಾಡಿನಲ್ಲಿ ಫುಟ್‌ಬಾಲ್‌ ಅಬ್ಬರಕ್ಕೆ ಕ್ಷಣಗಣನೆ ಆರಂಭವಾಗಿದೆ. 22ನೇ ಆವೃತ್ತಿಯ ಫಿಫಾ ವಿಶ್ವಕಪ್‌ ಟೂರ್ನಿಗೆ ಈ ಬಾರಿ ಪುಟ್ಟ ರಾಷ್ಟ್ರ ಕತಾರ್‌ ಆತಿಥ್ಯ ವಹಿಸುತ್ತಿರುವುದು ವಿಶೇಷ.

- Advertisement -

2010ರಲ್ಲಿ ಅಮೆರಿಕ ಮತ್ತು ಜಪಾನ್‌ ರಾಷ್ಟ್ರಗಳನ್ನು ಹಿಂದಿಕ್ಕಿ ಕತಾರ್‌, ವಿಶ್ವಕಪ್‌ ಆಯೋಜಿಸಲು ಬಿಡ್‌ ಗೆದ್ದಿತ್ತು. ಆದರೆ ಈ ವೇಳೆ ಕತಾರ್‌ನಲ್ಲಿ ಇದ್ದದ್ದು ಒಂದೇ ಒಂದು ಸ್ಟೇಡಿಯಂ. ರಾಜಧಾನಿ ದೋಹಾದಲ್ಲಿದ್ದ  ಖಲೀಫಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂನಲ್ಲೇ, ಎಲ್ಲಾ ಪ್ರಮುಖ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಆ ಬಳಿಕದ 11 ವರ್ಷಗಳ ಅಂತರದಲ್ಲಿ ಕತಾರ್‌, ಆಕರ್ಷಕ ವಿನ್ಯಾಸದ, ಕ್ರೀಡಾಬಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ 7 ನೂತನ ಮೈದಾನಗಳನ್ನು ನಿರ್ಮಿಸಿದೆ.

32 ತಂಡಗಳು ಪಾಲ್ಗೊಳ್ಳುವ ಟೂರ್ನಿಯ ಎಲ್ಲಾ 64 ಪಂದ್ಯಗಳು 8 ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಅವುಗಳ ಕಿರು ಪರಿಚಯ ಇಲ್ಲಿದೆ

- Advertisement -

ಅಲ್‌ ಬೈತ್‌ ಕ್ರೀಡಾಂಗಣ

ಕತಾರ್‌ನ ರಾಜಧಾನಿ ದೋಹಾದಿಂದ 40 ಕಿಮೀ ಉತ್ತರದ ಅಲ್‌ ಖೋರ್‌ ನಗರದಲ್ಲಿ ಅಲ್ ಬೈತ್‌ ಕ್ರೀಡಾಂಗಣ ನಿರ್ಮಾಣವಾಗಿದೆ. ವಿಶ್ವಕಪ್‌ ಟೂರ್ನಿಯ  ಉದ್ಘಾಟನಾ ಸಮಾರಂಭಕ್ಕೆ ಈ ಮೈದಾನ ಸಾಕ್ಷಿಯಾಗಲಿದೆ. ಕತಾರ್‌ನಲ್ಲಿ ಅಲೆಮಾರಿ ಜನರು ಬಳಸುತ್ತಿದ್ದ ಟೆಂಟ್‌ಗಳ ಆಕಾರವನ್ನುಈ ಮೈದಾನ ಹೋಲುತ್ತದೆ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯ ಸೇರಿದಂತೆ ಲೀಗ್‌ ಹಂತದ 5 ಪಂದ್ಯಗಳು, ಒಂದು ಕ್ವಾರ್ಟರ್‌ ಫೈನಲ್‌,  ಒಂದು ಸೆಮಿಫೈನಲ್‌ ಪಂದ್ಯ ಇದೇ ಮೈದಾನದಲ್ಲಿ ನಡೆಯಲಿವೆ.

ಲುಸೈಲ್‌ ಕ್ರೀಡಾಂಗಣ

ಲುಸೈಲ್‌ ನಗರದಲ್ಲಿ ನಿರ್ಮಾಣವಾಗಿರುವ ಈ ಕ್ರೀಡಾಂಗಣ 80 ಸಾವಿರ ಆಸನ ಸಾಮರ್ಥ್ಯ ಹೊಂದಿದೆ. ಕತಾರ್‌ ವಿಶ್ವಕಪ್‌ ಟೂರ್ನಿಯ ಅತಿದೊಡ್ಡ ಕ್ರೀಡಾಂಗಣ ಇದಾಗಿದ್ದು, ಫೈನಲ್‌ ಹಣಾಹಣಿಗೆ ಈ ಮೈದಾನ ಆತಿಥ್ಯ ವಹಿಸಲಿದೆ.  ಲೀಗ್‌ ಹಂತದ 5, 16ರ ಸುತ್ತಿನ 1,  ಒಂದು ಕ್ವಾರ್ಟರ್‌ ಫೈನಲ್‌ ಮತ್ತು ಒಂದು ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣದ ವಿನ್ಯಾಸವು ನಾಗರಿಕತೆಯ ಉದಯದ ಸಮಯದಲ್ಲಿ ಅರಬ್‌ ಮತ್ತು ಇಸ್ಲಾಮಿಕ್‌ ಪ್ರಪಂಚದಾದ್ಯಂತ ಕಂಡು ಬರುವ ಕೈಯಿಂದ ರಚಿಸಲಾದ ಬಟ್ಟಲಿನ ಆಕಾರವನ್ನು ಹೋಲುತ್ತದೆ.

ಎಜುಕೇಶನ್‌ ಸಿಟಿ ಸ್ಟೇಡಿಯಂ

ಅಲ್‌ ರಯಾನ್‌ನಲ್ಲಿರುವ ಈ ಕ್ರೀಡಾಂಗಣದ ಅಕ್ಕಪಕ್ಕದಲ್ಲಿ ಅನೇಕ ವಿಶ್ವವಿದ್ಯಾಲಯಗಳು ಇರುವ ಕಾರಣಕ್ಕೆ  ಕ್ರೀಡಾಂಗಣಕ್ಕೆ ಈ ಹೆಸರಿಡಲಾಗಿದೆ. ಕ್ರೀಡಾಂಗಣದ ಹೊರ ವಿನ್ಯಾಸ ತ್ರಿಕೋನ ಆಕಾರದಲ್ಲಿದ್ದು ವಜ್ರದ ರೀತಿ ಕಾಣುತ್ತದೆ.  ಮಧ್ಯ ದೋಹಾದ ವಾಯುವ್ಯಕ್ಕೆ 7 ಕಿ.ಮೀ. ದೂರದಲ್ಲಿದೆ. 40 ಸಾವಿರ ಆಸನದ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣದಲ್ಲಿ ಒಂದು ಕ್ವಾರ್ಟರ್‌ ಫೈನಲ್‌, 16ರ ಸುತ್ತಿನ 1 ಹಾಗೂ  ಲೀಗ್‌ ಹಂತದ 5 ಪಂದ್ಯಗಳು ನಡೆಯಲಿವೆ.

ಅಲ್‌ ತುಮಾಮ ಕ್ರೀಡಾಂಗಣ

ಗಫಿಯಾ (ಮುಸಲ್ಮಾನ ಪುರುಷರು ಧರಿಸುವ ಬಿಳಿ ಬಣ್ಣದ ಟೋಪಿ) ಶೈಲಿಯಲ್ಲಿ ಅಲ್-ತುಮಾಮಾ ಸ್ಟೇಡಿಯಂ,  ನಿರ್ಮಾಣವಾಗಿದೆ. ಏಕಕಾಲದಲ್ಲಿ 40 ಸಾವಿರ ಮಂದಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದಾದ ಮೈದಾನ, ಮಧ್ಯ ದೋಹಾದಿಂದ ದಕ್ಷಿಣಕ್ಕೆ 12 ಕಿ.ಮೀ. ದೂರ ಮತ್ತು  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿದೆ. ವಿಶ್ವಕಪ್‌ ಬಳಿಕ 40000 ಇರುವ ಆಸನ ಸಾಮರ್ಥ್ಯವನ್ನು 20000ಕ್ಕೆ ಇಳಿಸಲಾಗುತ್ತದೆ. ಹೆಚ್ಚುವರಿ ಆಸನಗಳನ್ನು ಬಡ ರಾಷ್ಟ್ರಗಳಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಕ್ವಾರ್ಟರ್‌ಫೈನಲ್‌, 16ರ ಸುತ್ತಿನ 1 ಹಾಗೂ ಲೀಗ್‌ ಹಂತದ 5 ಪಂದ್ಯಗಳಿಗೆ ವೇದಿಕೆಯಾಗಲಿದೆ.

ಖಲೀಫಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ

ಅಸ್ಪಯೈರ್‌ನಲ್ಲಿರುವ ಈ ಕ್ರೀಡಾಂಗಣ 40 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು ಕತಾರ್‌ನ ಅತ್ಯಂತ ಹಳೆಯ ಕ್ರೀಡಾಂಗಣವಾಗಿದೆ. ಇಲ್ಲಿ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯ ಸಹಿತ ಅಂತಿಮ 16ರ ಸುತ್ತಿನ 1 ಹಾಗೂ 5 ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. 1976ರಲ್ಲಿ ಲೋಕಾರ್ಪಣೆಗೊಂಡ ಕ್ರೀಡಾಂಗಣವು 2006ರ ಏಷ್ಯನ್‌ ಗೇಮ್ಸ್‌ ಸೇರಿ ಹಲವು ಈಗಾಗಲೇ ಹಲವಾರು ಪ್ರಮುಖ ಕ್ರೀಡಾಕೂಟಗಳು ನಡೆದಿವೆ. ವಿಶ್ವಕಪ್‌ಗಾಗಿ ಈ ಕ್ರೀಡಾಂಗಣವನ್ನು ನವೀಕರಿಸಲಾಗಿದೆ. 12 ಸಾವಿರದಷ್ಟು ಆಸನ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಡಿಜಿಟಲ್‌ ಬೆಳಕಿನ ವ್ಯವಸ್ಥೆ ಹಾಗೂ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಅಲ್‌ ಜನೌಬ್‌ ಸ್ಟೇಡಿಯಂ

ಅಲ್‌ ವಕ್ರಾದಲ್ಲಿರುವ ಈ ಕ್ರೀಡಾಂಗಣದ ವಿನ್ಯಾಸವು ಸಾಂಪ್ರದಾಯಿಕ ದೋಣಿಗಳನ್ನು ಹೋಲುತ್ತಿದೆ. 40 ಸಾವಿರ ಆಸನ ಸಾಮರ್ಥ್ಯವನ್ನು ಹೊಂದಿದೆ. ಮಧ್ಯ ದೋಹಾದಿಂದ ದಕ್ಷಿಣಕ್ಕೆ 22 ಕಿ.ಮೀ. ದೂರದಲ್ಲಿದೆ. ಇಲ್ಲಿ ಅಂತಿಮ 16ರ ಸುತ್ತಿನ ಒಂದು ಪಂದ್ಯ ಸಹಿತ 5 ಲೀಗ್‌ ಹಂತದ ಪಂದ್ಯಗಳು ಜರಗಲಿವೆ.

ಅಹ್ಮದ್‌ ಬಿನ್‌ ಅಲಿ ಸ್ಟೇಡಿಯಂ

ಉಮ್‌ ಅಲ್‌ ಅಫೈಯ ಮರುಭೂಮಿಯ ತುತ್ತ ತುದಿಯಲ್ಲಿರುವ ಈ ಕ್ರೀಡಾಂಗಣ ದೋಹಾದಿಂದ ಪಶ್ಚಿಮಕ್ಕೆ 20 ಕಿ.ಮೀ. ದೂರದಲ್ಲಿದೆ. ಭಾರತೀಯ ಮೂಲದ ಎಲ್‌ ಅಂಡ್‌ ಟಿ ಕಂಪನಿ ಈ ಯೋಜನೆಯನ್ನು ಪೂರ್ಣಗೊಳಿಸಿದೆ. ಪಂದ್ಯಗಳ ವೇಳೆ 26 ಡಿಗ್ರಿ ತಾಪಮಾನ ಕಾಯ್ದುಕೊಳ್ಳುವ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗಿದೆ. 40 ಸಾವಿರ ಆಸನ ಸಾಮರ್ಥ್ಯ ಹೊಂದಿದೆ. ಇಲ್ಲಿ ಅಂತಿಮ 16ರ ಸುತ್ತಿನ ಒಂದು ಪಂದ್ಯ ಸಹಿತ 5 ಲೀಗ್‌ ಹಂತದ ಪಂದ್ಯಗಳು ಜರಗಲಿವೆ.

ಸ್ಟೇಡಿಯಂ 974

ರಾಸ್‌ ಅಬು ಅಬೌದ್‌ದಲ್ಲಿರುವ ಈ ಸ್ಟೇಡಿಯಂಅನ್ನು ಮೊಬೈಲ್‌ ಕ್ರೀಡಾಂಗಣವೆಂದೂ ಸಹ ಕರೆಯಬಹುದು.. ಇದು ಆಧುನಿಕ ಜಗತ್ತಿನ ಎಂಜನಿಯರಿಂಗ್‌ ಅದ್ಭುತ. ವಿಶ್ವಕಪ್‌ ಪಂದ್ಯಗಳ ಆತಿಥ್ಯಕ್ಕೆ ಹೊಸದಾಗಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಹೊತ್ತು ತಂದ ಹಡಗುಗಳ 974 ಕಂಟೇನರ್‌ಗಳನ್ನು ಬಳಸಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ‘974’ ಕತಾರ್‌ ದೇಶದ ಅಂತಾರಾಷ್ಟ್ರೀಯ ಡಯಲಿಂಗ್‌ ಕೋಡ್‌ ಕೂಡ ಆಗಿರುವುದು ವಿಶೇಷ. ವಿಶ್ವಕಪ್‌ ಟೂರ್ನಿ ಮುಕ್ತಾಯಗೊಂಡ ಬಳಿಕ ಈ ಕ್ರೀಡಾಂಗಣವನ್ನು ಬಿಚ್ಚಿ ಬೇರೆಡೆಗೆ ಕೊಂಡೊಯ್ಯಬಹುದು. ಕತಾರ್‌ನ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಸ್ಪೇನ್‌ನ ಫೆನ್ವಿಕ್‌ ಇರಿಬ್ಯಾರೆನ್‌ ಆರ್ಕಿಟೆಕ್ಟ್ಸ್ ಸಂಸ್ಥೆ.  40 ಸಾವಿರ ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಅಂತಿಮ 16ರ ಸುತ್ತಿನ ಒಂದು ಪಂದ್ಯ, 5 ಲೀಗ್‌ ಹಂತದ ಪಂದ್ಯಗಳು ಜರಗಲಿವೆ.

Join Whatsapp